
ಬೆಂಗಳೂರು, ಮಾ. ೩- ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆ ತರುವ ಪ್ರಕ್ರಿಯೆಗಳು ಆರಂಭವಾಗಿದ್ದು, ನಿನ್ನೆ ರಾತ್ರಿಯಿಂದ ಇಂದು ಮುಂಜಾನೆವರೆಗೆ ೫೦೦ಕ್ಕೂ ಹೆಚ್ಚು ಕನ್ನಡಿಗರು ರಾಜ್ಯಕ್ಕೆ ಮರಳಿದ್ದಾರೆ.
ಇಸ್ರೇಲ್-ಇರಾನ್ ಯುದ್ಧದಿಂದಾಗಿ ರದ್ದಾಗಿದ್ದ ವಿಮಾನಯಾನ ಸೇವೆಗಳು ನಿನ್ನೆಯಿಂದ ಆರಂಭವಾಗಿದ್ದು, ಅಬುದಾಭಿಯಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಎರಡು ವಿಮಾನಗಳಲ್ಲಿ ೫೦೦ಕ್ಕೂ ಹೆಚ್ಚು ಕನ್ನಡಿಗರು ಆಗಮಿಸಿದ್ದಾರೆ.
ನಿನ್ನೆ ರಾತ್ರಿ ೧೦ ಗಂಟೆ ಹೊತ್ತಿಗೆ ಅಬುಧಾಬಿಯಿಂದ ಬಂದ ವಿಮಾನದಲ್ಲಿ ೨೧೦ ಕನ್ನಡಿಗರು ಸುರಕ್ಷಿತವಾಗಿ ಮರಳಿದ್ದರು.
ಇಂದು ಬೆಳಗಿನ ಜಾವ ೩.೨೦ಕ್ಕೆ ಅಬುಧಾಬಿಯಿಂದ ಬಂದ ವಿಮಾನದಲ್ಲಿ ೩೦೦ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ಮರಳಿದರು.
ಪಿ.ವಿ. ಸಿಂಧು ವಾಪಸ್
ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಸಹ ದುಬೈಯಿಂದ ಬೆಂಗಳೂರಿಗೆ ವಾಪಸ್ಸಾದರು.
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಮುನ್ನ ಪಿ.ವಿ. ಸಿಂಧು ರವರು ಬೆಂಗಳೂರಿನಿಂದಲೇ ನಾಲ್ಕೈದು ದಿನಗಳ ಹಿಂದೆ ದುಬೈಗೆ ತೆರಳಿದ್ದರು. ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದಾಗಿ ಸಿಂಧು ಅವರು ದುಬೈನಲ್ಲಿ ಸಿಲುಕ್ದಿದ್ದರು. ಹೀಗಾಗಿ ಅವರು ದುಬೈನಲ್ಲಿ ನಡೆಯಬೇಕಿದ್ದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಾಲ್ಗೊಳ್ಳುವುದಕ್ಕೆ ತೊಂದರೆಯಾಯಿತು.
ವಿಮಾನಯಾನ ಸಂಚಾರಕ್ಕಿದ್ದ ಎಲ್ಲಾ ಅಡೆತಡೆಗಳು ನಿವಾರಣೆಯಾಗಿ ಪಿ.ವಿ. ಸಿಂಧು ತಾಯ್ನಾಡಿಗೆ ಮರಳಿದರು.
ಯುದ್ಧದ ಪರಿಸ್ಥಿತಿಯಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ಉದ್ವಿಗ್ನ ಪರಿಸ್ತಿತಿ ನಿರ್ಮಾಣವಾಗಿತ್ತು. ಹೀಗಾಗಿ ದುಬೈ, ಅಬುದಾಬಿ, ರಿಯಾಜ್, ಡೆಡ್ಟಾ, ದೋಹ ಮತ್ತಿತರ ನಗರಗಳಲ್ಲಿ ವಾಯು ಪ್ರದೇಶ ನಿರ್ಬಂಧಿಸಲಾಗಿತ್ತು. ಈ ಕಾರಣದಿಂದ ಶನಿವಾರದಿಂದಲೇ ಮಧ್ಯಪ್ರಾಚ್ಯದಿಂದ ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು.
ನಿನ್ನೆಯಿಂದ ವಿಮಾನಯಾನ ಆರಂಭವಾದ ಹಿನ್ನೆಲೆಯಲ್ಲಿ ಬೆಂಗಳೂರು-ಅಬುಧಾಬಿ ನಡುವೆ ವಿಮಾನ ಸಂಚಾರ ಆರಂಭಗೊಂಡಿದ್ದು, ಕನ್ನಡಿಗರನ್ನು ಹಂತ ಹಂತವಾಗಿ ತಾಯ್ನಾಡಿಗೆ ಕರೆ ತರಲಾಗುತ್ತಿದೆ.
ಶಾಸಕರು ವಾಪಸ್
ದುಬೈನಲ್ಲಿ ಶಾಸಕರಾದ ಬೋಜೇಗೌಡ, ಎ.ಟಿ. ಶ್ರೀನಿವಾಸ್ ಸಹ ಸಿಲುಕಿದ್ದರು. ಅವರುಗಳು ಸಹ ಸುರಕ್ಷಿತವಾಗಿ ವಾಪಸ್ಸಾಗಿದ್ದು, ಇಂದು ಬೆಳಿಗ್ಗೆ ಅಬುಧಾಬಿಯಿಂದ ಬಂದ ವಿಧಾನ ಪರಿಷತ್ ಸದಸ್ಯ ಎಲ್.ಎಲ್. ಬೋಜೇಗೌಡ ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ನಾನು ದಕ್ಷಿಣ ಆಫ್ರಿಕಾಗೆ ತೆರಳಿದ್ದೆ.
ಕಾರಣಾಂತರಗಳಿಂದ ದುಬೈ ಮೂಲಕ ಇಂಡಿಯಾಗೆ ವಾಪಸ್ ಬರಬೇಕಿತ್ತು. ಆದರೆ ವಿಮಾನಗಳು ಸ್ಥಗಿತಗೊಂಡವು. ನಮ್ಮ ಬಳಿ ದುಬೈ ವೀಸಾ ಇರಲಿಲ್ಲ. ಬಳಿಕ ವೀಸಾ ಪಡೆದುಕೊಂಡೆ. ಕೇಂದ್ರ ಸಚಿವ ಕುಮಾರಸ್ವಾಮಿಯವರು ಹೋಟೆಲ್ ವ್ಯವಸ್ಥೆ ಮಾಡಿದ್ದರು. ಹೋಟೆಲ್ ಪಕ್ಕದಲ್ಲೇ ಬಾಂಬ್‌ಗಳ ಸುರಿಮಳೆಯಾಗುತ್ತಿತ್ತು.
ನಮ್ಮನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಿದ್ದರು. ನಿನ್ನೆ ಬೆಳಿಗ್ಗೆ ಸಚಿವರಾದ ಕೃಷ್ಣಬೈರೇಗೌಡ ಮತ್ತು ಹೆಚ್.ಕೆ. ಪಾಟೀಲ್ ರವರಿಗೆ ದೂರವಾಣಿ ಮಾಡಿದ್ದೆ. ಆ ಸಂದರ್ಭದಲ್ಲಿ ನಾವಿದ್ದ ಸ್ಥಳದ ಪಕ್ಕದಲ್ಲೇ ಮೂರು ಮಿಸೈಲ್‌ಗಳು ಬಿದ್ದವು. ಖುರ್ಜಾ ಕಲೀಬ್ ಪಕ್ಕದಲ್ಲೇ ಬಾಂಬ್‌ಗಳು ಬಿದ್ದವು. ಯಾವುದೇ ತೊಂದರೆಯಾಗಲಿಲ್ಲ. ಈ ಯುದ್ಧದ ವಾತಾವರಣದಲ್ಲಿ ಇಷ್ಟು ಬೇಗ ನಾವು ವಾಪಸ್ ಬರುತ್ತವೆ ಎಂದುಕೊಂಡಿರಲಿಲ್ಲ. ದೇವರ ದಯೆ ಕನ್ನಡಿಗರು ಸೇರಿದಂತೆ ಭಾರತೀಯರೆಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದೇವೆ ಎಂದರು.
ಭಾರತೀಯರ ರಕ್ಷಣೆಗೆ ಕಾರ್ಯಾಚರಣೆ
ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಯುದ್ಧ ವಾತಾವರಣದಿಂದಾಗಿ ಕೊಲ್ಲಿ ಪ್ರದೇಶದಲ್ಲಿ ಸಾವಿರಾರು ಭಾರತೀಯರು ಸಿಲುಕಿದ್ದಾರೆ. ಇದೀಗ ಅವರ ರಕ್ಷಣೆಗೆ ಮುಂದಾಗಿರುವ ಭಾರತ ಸರ್ಕಾರ ಅವರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರುವ ಕಾರ್ಯಾಚರಣೆ ಆರಂಭಿಸಿದೆ.
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬೆನ್ನಲ್ಲೇ ಮಧ್ಯಪ್ರಾಚ್ಯ ದೇಶಗಳು ತಮ್ಮ ವಾಯು ಪ್ರದೇಶವನ್ನು ಮುಚ್ಚಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟ ರದ್ದುಗೊಂಡಿತ್ತು.
“ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಯತ್ನದ ಭಾಗವಾಗಿ ಮಾರ್ಚ್ ೩ರಂದು ಸೌದಿ ಅರೇಬಿಯಾದ ಜೆಡ್ಡಾದಿಂದ ಇಂಡಿಗೋ ವಿಮಾನ ಕಾರ್ಯ ನಿರ್ವಹಿಸಲಿದೆ. ೧೦ ವಿಶೇಷ ಪರಿಹಾರ ವಿಮಾನಗಳ ನಿರ್ವಹಣೆಗೆ ಯೋಜಿಸಲಾಗಿದೆ” ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೃಢಪಡಿಸಿರುವ ಇಂಡಿಗೋ ಸಂಸ್ಥೆ, ಜೆಡ್ಡಾದಿಂದ ಹೈದರಾಬಾದ್?, ಮುಂಬೈ ಮತ್ತು ಅಹಮದಾಬಾದ್?ಗೆ ವಿಮಾನ ಕಾರ್ಯಾಚರಣೆ ನಡೆಸುವುದಾಗಿ ಸ್ಪಷ್ಟಪಡಿಸಿದೆ.






























