
ಬಾದಾಮಿ,ಮಾ.೩; ಐತಿಹಾಸಿಕ ಚಾಲುಕ್ಯರ ನಾಡು ಬಾದಾಮಿ, ಐಹೊಳೆ ಪಟ್ಟದಕಲ್ಲು ಪ್ರವಾಸೋದ್ಯಮಕ್ಕೆ ಹೆಸರು ವಾಸಿಯಾಗಿವೆ. ಸರಕಾರ ಹೊಸ ಪ್ರವಾಸೋದ್ಯಮ ನೀತಿ ಜಾರಿ ಮಾಡಿ ಪ್ರವಾಸೋದ್ಯಮಕ್ಕೆ ಬಲ ಸಿಗುವಂತಾಗಲಿ ಎಂದು ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಿ.ಶೀಲವಂತರ ಹೇಳಿದರು.
ಅವರು ಸೋಮವಾರ ನಗರದ ಎಸ್.ವಿ.ಪಿ.ಸಂಸ್ಥೆಯ ಬಸವಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ತಾಲೂಕಾ ೧೦ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚಾಲುಕ್ಯರ ಇತಿಹಾಸ ಸಾಧನೆ, ಪ್ರವಾಸಿಗರಿಗೆ ಮಾಹಿತಿ ಸಿಗುವ ಉದ್ದೇಶದಿಂದ ಬೇರೆ ಬೇರೆ ಭಾಷೆಯಲ್ಲಿ ಫಲಕ ಅಳವಡಿಸಬೇಕು. ಪ್ರವಾಸಿಗರಿಗೆ ಶಿಲೆಗಳನ್ನು ಕೆತ್ತುವ ಕಲಾವಿದರಿಂದ ಪ್ರಾತ್ಯಕ್ಷಿಕೆ ಆಯೋಜನೆ ಮಾಡಬೇಕು. ಸ್ಥಳೀಯ ಆಹಾರ ಪದ್ದತಿ ಪ್ರವಾಸಿಗರಿಗೆ ಪರಿಚಯವಾಗಬೇಕು. ಇಲಕಲ್ ಸೀರೆ, ಗುಳೇದಗುಡ್ಡ ಖಣ ವಸ್ತç ಬಂಡಾರ ನಿರ್ಮಾಣ ಮಾಡಬೇಕಾಗಿದೆ. ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ರೊಟ್ಟಿ ಉದ್ಯಮವನ್ನು ಸಹಕಾರಿ ಸಂಘಗಳ ಮೂಲಕ ಬೆಳವಣಿಗೆಗೆ ಸಹಕರಿಸಬೇಕು. ಕನ್ನಡ ನಾಡಿನ ನೆಲ ಜಲ, ಭಾಷೆಗೆ ಒತ್ತು ಕೊಡಬೇಕು.
ಆಂಗ್ಲ ವ್ಯಾಮೋಹದಿಂದ ನಮ್ಮ ಕನ್ನಡ ಭಾಷೆಯನ್ನು ಮರೆಯಬಾರದು. ಮಾತೃಭಾಷೆ ಕಲಿತರೆ ಉಳಿದ ಭಾಷೆ ಕಲಿಯಲು ಸರಳ. ಪಾಳಕರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪ್ರೊ.ಜಿ.ಬಿ.ಶೀಲವಂತರ ದಂಪತಿಗಳನ್ನು ಸಮ್ಮೇಳನದ ವತಿಯಿಂದ ಸನ್ಮಾನಿಸಲಾಯಿತು. ವೇದಿಕೆಯ ಮೇಲೆ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ತಾಲೂಕಾ ಕಸಾಪ ಅಧ್ಯಕ್ಷ ಬಿ.ಎಫ್.ಹೊರಕೇರಿ, ಪದಾಧಿಕಾರಿಗಳಾದ ಮಹಾಂತೇಶ ಈಳಗೇರ, ಆರ್.ಎಂ.ಸಾರವಾಡ, ವಿ.ಎಸ್.ಶೆಟ್ಟರ, ಬಿ.ಎಸ್.ಅಬ್ಬಿಗೇರಿ, ರವಿ ಕಂಗಳ, ಎಸ್.ಎಚ್.ಪರಸನ್ನವರ, ಆರ್.ಎಂ.ದಾದಿ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು. ಬಸಮ್ಮಾ ನರಸಾಪೂರ, ಡಿ.ಬಿ.ಹಡಗಲಿ ನಿರೂಪಿಸಿದರು. ನಂತರ ನಡೆದ ಗೋಷ್ಟಿ-೧ ರಲ್ಲಿ ಬಾದಾಮಿ ತಾಲೂಕಿನ ಸಾಹಿತ್ಯಾವಲೋಕನ ಕುರಿತು ಸೃಜನಶೀಲ ಸಾಹಿತ್ಯ ಕುರಿತು ಪ್ರೊ.ಚಂದ್ರಶೇಖರ ಹೆಗಡೆ ಮತ್ತು ಜನಪದ ಸಾಹಿತ್ಯ ಕುರಿತು ನಾಗರಾಜ ಹೊಟ್ಟಿ, ಮಹಿಳಾ ಸಾಹಿತ್ಯ ಕುರಿತು ಶಾರದಾ ಮೇಟಿ ಉಪನ್ಯಾಸ ನೀಡಿದರು.



























