ಉದ್ಯೋಗ ನೀಡಿ ಇಲ್ಲವೇ ನಮ್ಮ ಭೂಮಿ ನಮಗೆ ನೀಡಿ

ಸೈದಾಪುರ:ಮಾ.೩: ಈ ಪ್ರದೇಶದಲ್ಲಿ ದೊಡ್ಡ-ದೊಡ್ಡ ಕೈಗಾರಿಕೆಗಳು ಬರುತ್ತವೆ. ನಮಗೆ ಮತ್ತು ನಮ್ಮ ಮಕ್ಕಳಿಗೆ ಉದ್ಯೋಗ ದೊರುಕುತ್ತದೆ ಎಂದು ನಾವು ಭೂಮಿ ನಿಡಿದ್ದೇವು. ಆದರೆ ಇಂದು ಭೂಮಿಯೂ ಇಲ್ಲ, ಇತ್ತ ಉದ್ಯೋಗವು ಇಲ್ಲದಂತಾಗಿದೆ. ಆದ್ದರಿಂದ ಉದ್ಯೋಗ ನೀಡಿ ಇಲ್ಲವೇ ನಮ್ಮ ಭೂಮಿ ನಮಗೆ ನೀಡಿ ಎಂದು ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಸಮೀಪದ ಕಡೇಚೂರು-ಬಾಡಿಯಾಳ ಕೈಗಾರಿಕೆಗಳಿಗೆ ಭೂಮಿ ನೀಡಿದ ರೈತರಿಗೆ ಉದ್ಯೋಗ ನೀಡುವಂತೆ ಆಗ್ರಹಿಸಿ ಕೈಗಾರಿಕಾ ಪ್ರದೇಶದಲ್ಲಿರುವ ರೈಲು ಬೋಗಿ ಕಾರ್ಖಾನೆ ಎದರು ರೈತರು ಪ್ರತಿಭಟನೆ ಮಾಡಿದರು. ಈ ಪ್ರದೇಶದಲ್ಲಿ ರೈಲು ಬೋಗಿ ಕಾರ್ಖಾನೆ ನಿರ್ಮಾಣಗೊಂಡ ಮುಂಬರುವ ದಿನಗಳಲ್ಲಿ ನಮ್ಮ ಕುಟುಂಬದವರೆಗೆ ಉದ್ಯೋಗ ಸಿಗುತ್ತದೆ ಎಂಬ ಭರವಸೆಯಿಂದ ಶೆಟ್ಟಿಹಳ್ಳಿ, ಕಡೇಚೂರು ಮತ್ತು ಬಾಡಿಯಾಳ ಗ್ರಾಮದ ರೈತರು ಅಲ್ಪ-ಸ್ವಲ್ಪ ಭೂಮಿಯನ್ನು ನೀಡಿದ್ದೇವೆ. ಆದರೆ ಪ್ರಸ್ತುತ ಉದ್ಯೋಗಕ್ಕಾಗಿ ದೂರದ ನಗರಗಳಿಗೆ ವಲಸೆ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಲ್ಲಿ ಸ್ಥಾಪಿಸಿರುವ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಿ ಇಲ್ಲವೇ ನಿಮ್ಮ ಕಾರ್ಖಾನೆಯನ್ನು ಬಂದ ಮಾಡಿ ಎಂದು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ರೈಲು ಬೋಗಿ ಕಾರ್ಖಾನೆಯ ಅಧಿಕಾರಿಗಳಿಗೆ ರೈತರು ತರಾಟೆಗೆ ತೆಗೆದುಕೊಂಡು, ಕಾರ್ಖಾನೆ ಸ್ಥಾಪನೆಯಾಗಿ ಒಂದು ದಶಕ ಕಳೆದರು ಸಂತ್ರಸ್ಥರಿಗೆ ನೀವು ಉದ್ಯೋಗ ನೀಡಲು ಮೀನಮೇಷ ಏಣಿಸುತ್ತಿದ್ದಿರಿ ಎಂದು ಅಧಿಕಾರಿಗಳ ಧೋರಣೆ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳ ಮದ್ಯಸ್ಥಿಕೆಯಲ್ಲಿ ರೈತರು ಮತ್ತು ಕಾರ್ಖಾನೆ ಅಧಿಕಾರಿಗಳ ಮಧ್ಯೆ ಸಂಧಾನ ಏರ್ಪಡಿಸಿ ರೈತರಿಂದ ಮನವಿ ಸ್ವೀಕರಿಸಿದ ನಂತರ ಹೋರಾಟವನ್ನು ತಾತ್ಕಾಲಿಕವಾಗಿ ಮೊಟಕುಗೊಳಿಸಿದರು. ಆದರೆ ರೈತರು ಮುಂದಿನ ೧೫ ದಿನಗಳಲ್ಲಿ ರೈಲ್ವೇ ಇಲಾಖೆಯಿಂದ ಯಾವುದೆ ಪ್ರತಿಕ್ರಿಯೆ ಬಾರದಿದ್ದರೆ, ರೈಲ್ವೇ ಬೋಗಿ ಕಾರ್ಖಾನೆಗೆ ಬೀಗ ಜಡಿದು ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಮುಖಂಡರಾದ ಸಿದ್ದಣ್ಣಗೌಡ ಕಡೇಚೂರು, ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಶ್ರೀದೇವಿ ಪರ್ಲಾ, ಶಂಕರಲಿAಗಪ್ಪ ಕಡೇಚೂರು, ವಿರೇಶ ಸಜ್ಜನ್, ಚಂದ್ರುಗೌಡ ಸೈದಾಪುರ, ಶರಣುಗೌಡ ಕ್ಯಾತ್ನಾಳ, ಸುರೇಶಗೌಡ ಮಾಲಿ ಪಾಟೀಲ್, ಶಂಕರಗೌಡ, ಶ್ರೀಧರ ಪರ್ಲಾ, ಹುಸೇನಪ್ಪ ಕಡೇಚೂರು, ಕಾಶಿನಾಥ ಮಡಿವಾಳ್, ಹಣಮಂತ್ರಾಯ ಗುಡ್ಲೆ, ಬಸಪ್ಪ ಮಡಿವಾಳ, ಬೀರಪ್ಪ ತೆಗ್ಗಿನಮನೆ, ಭೀಮು ಗೂಡೆಬಲ್ಲೂರು, ಕಾಶಪ್ಪ, ನಿಜಲಿಂಗಪ್ಪ, ದಶರಥ ಮಂತ್ರಿ, ಜಗನಾಥ ಮಡಿವಾಳ, ಶರಣು ಮಂತ್ರಿ, ದಶರಥ ಉಪ್ಪಾರ್, ಮಹಾದೇವಪ್ಪ ಹೊನ್ನಕೇರಾ, ಮಾಳಪ್ಪ ಪಾಪಣ್ಣೋರ್, ಗುರು ಮಹೇಂದ್ರ, ರಾಜಪ್ಪ ಮಡಿವಾಳ್, ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.