ಸಮುದಾಯದ ಯುವ ಜನಾಂಗ ಉತ್ತಮ ಶಿಕ್ಷಣ ಪಡೆದು ಬದುಕುವಂತಾಗಬೇಕು- ಡಾ.ಅಭಯಕುಮಾರ್ ಅಭಿಮತ

ಮೊಗೇರ ಸಂಘದ ಸುವರ್ಣ ಸಂಭ್ರಮ – ದುಡಿ ಆಯನ ರಾಜ್ಯಮಟ್ಟದ ಬೃಹತ್ ಸಮಾವೇಶಕ್ಕೆ ಚಾಲನೆ
ಸುಳ್ಯ:ಮೊಗೇರ ಸಮುದಾಯದ ಯುವಕರನ್ನು ಸಂಘಟನೆಗಳ ಹೆಸರಿನಲ್ಲಿ ದಾರಿ ತಪ್ಪಿಸುತ್ತಿದ್ದಾರೆ. ಯುವ ಜನಾಂಗ ದಾರಿ ತಪ್ಪದಂತೆ ಅವರಿಗೆ ಉತ್ತಮ ಶಿಕ್ಷಣ, ಉದ್ಯೋಗ ಪಡೆದು ಉತ್ತಮ ಗೌರವದಿಂದ ಬದುಕುವಂತಾಗಬೇಕು. ಈ ಮೂಲಕ ಸಮುದಾಯ ಬೆಳೆಯಬೇಕು ಎಂದು ಮಂಗಳೂರು ವಿವಿಯ ಎಸ್.ವಿ.ಪಿ ಅಧ್ಯಯನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಅಭಯಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಮೊಗೇರ ಸಂಘದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಕರ್ನಾಟಕ ರಾಜ್ಯ ಮೊಗೇರ ಸಂಘದ ವತಿಯಿಂದ ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಬೃಹತ್ ಸಮಾವೇಶ ‘ಮೊಗೇರ ‘ದುಡಿ ಆಯನ ೨೦೨೬’ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ದಕ್ಷಿಣ ಕನ್ನಡ, ಕಾಸರಗೋಡು, ಜಿಲ್ಲೆಗಳ ಪ್ರತಿ ಗ್ರಾಮಗಳಲ್ಲಿ ಮೊಗೇರ ಸಮುದಾಯದ ಜನರು ಇದ್ದಾರೆ. ಮೊಗೇರರಿಗೂ ಭೂಮಿಗೂ ನಿಕಟ ಸಂಬಂಧ ಇರುವ ಕಾರಣ ಭೂಮಿಪುತ್ರರಾಗಿ ಗುರುತಿಸಿಕೊಂಡಿದ್ದಾರೆ. ಮೊಗೇರರ ಕೃಷಿಯೇ ಮೂಲ ವೃತ್ತಿ. ದುಡಿ ಮೊಗೇರರ ಸಾಂಸ್ಕೃತಿಕ ಪ್ರತೀಕ ಎಂದ ಅವರು ಮೊಗೇರರ ಆರಾಧನೆಯಲ್ಲಿ ಪ್ರಾದೇಶಿಕವಾದ ಭಿನ್ನತೆ ಇದೆ ಎಂದು ಹೇಳಿದರು.
ಪ್ರತಿ ಸಂಘಟನೆಗಳು ಯಶಸ್ವಿಯಾಗಲು ಸಾಮಾಜಿಕ ಮತ್ತು ಧಾರ್ಮಿಕ ಚಕ್ರಗಳು ಇರಬೇಕು. ಸಮುದಾಯದ ಹಿರಿಯ ವ್ಯಕ್ತಿ ಧಾರ್ಮಿಕತೆಯ ನೇತೃತ್ವ ವಹಿಸಿಕೊಳ್ಳಬೇಕು. ಈ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮುದಾಯದ ಬೆಳೆವಣಿಗೆ ಸಾಧ್ಯ ಎಂದು ಹೇಳಿದರು. ಸಮುದಾಯದ, ಧಾರ್ಮಿಕತೆ, ಸಂಸ್ಕೃತಿ, ಅಚರಣೆಗಳ ಬಗ್ಗೆ ಹೆಚ್ಚು ಸಂಶೋಧನೆ ಗಳ ಆಗಬೇಕು. ಅಲ್ಲದೇ ಇವುಗಳು ಪುಸ್ತಕ ರೂಪಕ್ಕೆ ಬರಬೇಕು ಎಂದು ಅವರು ಹೇಳಿದರು
ಮುಖ್ಯ ಅತಿಥಿಯಾಗಿದ್ದ ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಮಾತನಾಡಿ ಕೊಠಾರಿ ಆಯೋಗದಲ್ಲಿನ ಜ್ಯಾತ್ಯಾತೀತ ಶಬ್ದದ ಅರ್ಥ ಕಳೆದುಕೊಂಡಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಜಾತಿ ಪ್ರತಿನಿಧಿಗಳು ಆಯ್ಕೆಯಾಗುತ್ತಿದ್ದಾರೆ. ಭಾರತೀಯ ಸಮುದಾಯ ಜಾತಿ ಎನ್ನುವ ಹೆಸರಿನಲ್ಲಿ ಸೀಳಿಹೋಗಿದೆ. ಸಂಘಟನೆಗಳಿಗೆ ಯಾವಾಗಲು ಶಕ್ತಿ ಇದೆ. ಆದುದರಿಂದಲೇ ಸಂಘಟನೆ ಇಷ್ಟು ದೊಡ್ಡದಾಗಿ ಬೆಳೆದಿದೆ ಎಂದು ಹೇಳಿದರು.
ಕಾರ್ಯಕ್ರಮವನ್ನು ಮೊಗೇರ ಸಂಘದ ಸ್ಥಾಪಕ ಸದಸ್ಯ ಶುಭೋದಯ ಕೂಡ್ಲು ಉದ್ಘಾಟಿಸಿ ಶುಭ ಹಾರೈಸಿದರು. ಕರ್ನಾಟಕ ರಾಜ್ಯ ಮೊಗೇರ ಸಂಘದ ಅಧ್ಯಕ್ಷ ಹಾಗೂ ಸ್ವಾಗತ ಸಮಿತಿಯ ಅಧ್ಯಕ್ಷರಾದ ನಂದರಾಜ ಸಂಕೇಶ ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ತಾಲೂಕು ನಿವೃತ್ತ ಶಿಕ್ಷಣ ಸಂಯೋಜಕರಾದ ಕೇಶವ ಮಾಸ್ಟರ್ ಹೊಸಗದ್ದೆ ಧ್ವಜಾರೋಹಣ ನೆರವೇರಿಸಿದರು. ದ.ಕ. ಜಿ.ಪಂ. ಮಾಜಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ಪ.ಬಿ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಪಿ.ಎಂ.ರವಿ ಅತಿಥಿಗಳಾಗಿದ್ದರು.
ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಲ್ಲತಡ್ಕ ಸ್ವಾಗತಿಸಿದರು. ಸ್ವಾಗತ ಸಮಿತಿಯ ಸಂಚಾಲಕ ಅಶೋಕ್ ಕೊಂಚಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್‌ದಾಸ್ ವಂದಿಸಿದರು. ಸವಿತಾ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಪ್ರತಿನಿಧಿಗಳ ಅಧಿವೇಶನ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಾರ್ಪಣೆ, ಸಾಂಸ್ಕೃತಿಕ ವೈವಿಧ್ಯ, ಜನಪದ ಕ್ರೀಡೆ, ವಿವಿಧ ಆಟೋಟಗಳ ಕಾರ್ಯಕ್ರಮಗಳು ನಡೆಯಿತು.