ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರ ಜಯಂತಿ ಅದ್ದೂರಿಯಾಗಿ ಆಚರಣೆ

ಜೇವರ್ಗಿ,ಮಾ.2-ಆದಿ ಜಗದ್ಗುರು ಶ್ರೀ ರೇಣುಕಾಚಾರ್ಯರು ಅವರ ಜಯಂತಿ ಪ್ರಯುಕ್ತ ಶ್ರೀ ಷಣ್ಮುಖ ಶಿವಯೋಗಿಗಳ ಮಠದಿಂದ ಶ್ರೀ ರೇಣುಕಾಚಾರ್ಯ ದೇವಸ್ಥಾನದವರೆಗೆ ಭವ್ಯ ಮೆರವಣಿಗೆ ನಡೆಯಿತು.
ಬಾಜಾ-ಭಜಂತ್ರಿ, ಡೊಳ್ಳು ಕುಣಿತ, ಕುಂಭ ಕಳಸಗಳೊಂದಿಗೆ ವಿಶೇಷವಾಗಿ ಅಕ್ಕ ಮಹಾದೇವಿ ಕದಳಿವನ ವೇದಿಕೆಯ ವತಿಯಿಂದ ಮಹಿಳೆಯರು ಕುಂಭ ಕಳಸಗಳನ್ನು ಹೊತ್ತು ಭಕ್ತಿ ಭಾವದಿಂದ ಮೆರವಣಿಗೆಯಲ್ಲಿ ಸಾಗಿದರು. ಸಾರೋಟದಲ್ಲಿ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ಬಳಿಕ ಶ್ರೀ ರೇಣುಕಾಚಾರ್ಯರ ಕತೃಗದ್ದುಗೆಯಲ್ಲಿ ವಿಶೇಷ ಅರ್ಚನೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ನಂತರ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿದ ಮೆರವಣಿಗೆ ವಿಧಾನದೌಧದವರೆಗೆ ತಲುಪಿತು. ಪುರವಂತರ ಸೇವೆ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರ ಹಾಗೂ ಸಾರ್ವಜನಿಕರ ಕಣ್ಮನ ಸೆಳೆಯಿತು.
ವೇದಿಕೆ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾಸಭೆಯ ರಾಜ್ಯ ಕಾರ್ಯದರ್ಶಿ ರಾಜಶೇಖರ ಬಿ. ಸಾಹು ಸಿರಿ ಮಾತನಾಡಿ, ಜಂಗ ಸಮಾಜದವರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ ಅರ್ಥಪೂರ್ಣವಾಗಿ ಮೆರವಣಿಗೆ ನಡೆಸಿ ಎಚ್ಚರಿಕೆಯ ಘಂಟೆ ಬಾರಿಸಿದ್ದಾರೆ ಎಂದು ಹೇಳಿದರು. ಜಗದ್ಗುರು ಶ್ರೀ ರೇಣುಕಾಚಾರ್ಯರು “ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಮಹತ್ವದ ಸಂದೇಶವನ್ನು ನೀಡಿದ್ದು, ಅವರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಮಲ್ಲಣ್ಣ ಯಲಗೋಡ್ ಅವರು ಶ್ರೀ ರೇಣುಕಾಚಾರ್ಯರ ವಿಚಾರಧಾರೆಗಳು ಮತ್ತು ಮೌಲ್ಯಗಳನ್ನು ಸಮಾಜದ ಎಲ್ಲ ವರ್ಗದ ಜನರು ಅಳವಡಿಸಿಕೊಂಡು ಜೀವನದಲ್ಲಿ ಅನುಸರಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಉಪನ್ಯಾಸಕರಾದ ಶಾಂತಮೂರ್ತಿ ಸ್ವಾಮಿ ಗೊಂಬಿಮಠ ಅವರು ಜಗದ್ಗುರುಗಳ ಆದಿಯಾಂಶಗಳ ಕುರಿತು ಸವಿಸ್ತಾರವಾಗಿ ಉಪನ್ಯಾಸ ನೀಡಿ, ಕುಲ-ಗೋತ್ರ ಭೇದವಿಲ್ಲದೆ ಕಾಯಕ ಯೋಗಿಯಾಗಿ ಶ್ರೇಷ್ಠತೆಯನ್ನು ಸಾಧಿಸಿದ ಮಹಾನ್ ಸಂತರು ಶ್ರೀ ರೇಣುಕಾಚಾರ್ಯರು ಎಂದು ಬಣ್ಣಿಸಿದರು.
ಜಯಂತೋತ್ಸವದ ಅಂಗವಾಗಿ ನಡೆದ ಈ ಭವ್ಯ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮದಲ್ಲಿ ಆಲೂರಿನ ಮಠದ ಪರಮಪೂಜ್ಯ ಕೆಂಚ ವೃಷಭೇಂದ್ರ ಮಹಾಸ್ವಾಮಿಗಳು, ಮಾಜಿ ಶಾಸಕರಾದ ದೊಡ್ಡಪ್ಪಗೌಡ ಪಾಟೀಲ್ ಎಸ್. ನರಿಬೋಳ್, ಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕರಾದ ಬಸವರಾಜ ಎಸ್. ಪಾಟೀಲ್ ನರಿಬೋಳ್, ಜೇವರ್ಗಿ ಪೆÇಲೀಸ್ ಠಾಣೆಯ ಸಿ.ಪಿ.ಐ ರಾಜೇಸಾಬ್ ನದಾಫ್, ಪಶು ವೈದ್ಯಾಧಿಕಾರಿ ಶೋಭಾ ಸಜ್ಜನ್, ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಲಕ್ಕುಂಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮಾಜದ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು, ಸಮಾಜಸೇವಕರು, ಯುವಕರು ಹಾಗೂ ಬಸವೇಶ್ವರನಗರದ ಅಕ್ಕಮಹಾದೇವಿ ಕದಳಿವನ ವೇದಿಕೆಯ ಮಹಿಳಾ ಪದಾಧಿಕಾರಿಗಳು ಮತ್ತು ವೀರಶೈವ ಸಮಾಜದ ಮಹಿಳೆಯರು ಕುಂಭ ಕಳಸಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಭಕ್ತಿಭಾವದ ಮೆರುಗು ತಂದರು.