ಕನ್ನಡಿಗರ ರಕ್ಷಣೆಗೆ ಕ್ರಮ:ಖರ್ಚು ವೆಚ್ಚ ಭರಿಸಲು ನಿರ್ಧಾರ

ಬೆಂಗಳೂರು: ಮಾ. ೨ ಇರಾನ್- ಇಸ್ರೇಲ್ ಯುದ್ಧದಿಂದಾಗಿ ಮಧ್ಯ ಪ್ರಾಚ್ಯದಲ್ಲಿ ಸಿಲುಕಿರುವ ಕರ್ನಾಟಕದವರ ರಕ್ಷಣೆಗೆ ರಾಜ್ಯ ಸರ್ಕಾರ ಕ್ರಮವಹಿಸಿದೆ ಜೊತೆಗೆ ಅವರು ವಾಪಸ್ ಬರುವವರೆಗೂ ಖರ್ಚು ವೆಚ್ಚಗಳನ್ನು ಸರ್ಕಾರ ಭರಿಸಲಿದೆ ಎಂದು ಕಂದಾಯ ಹಾಗೂ ವಿಪತ್ತು ನಿರ್ವಹಣಾ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.


ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರು ಆತಂಕವಾಗೋದು ಬೇಡ. ರಾಜ್ಯ ಸರ್ಕಾರ ಕೇಂದ್ರ ವಿದೇಶಾಂಗ ಇಲಾಖೆ ಜೊತೆ ಸಂಪರ್ಕದಲ್ಲಿದೆ. ಎಲ್ಲರ ರಕ್ಷಣೆಗೂ ಕ್ರಮ ತೆಗೆದುಕೊಳ್ಳಲಿದೆ ಎಂದರು.


ಏರ್ ಪೋರ್ಟ್ ನಲ್ಲಿ ಸಿಲುಕಿರೋರು ವೀಸಾ ಸಮಸ್ಯೆ ಇದ್ದರೆ ಸ್ಥಳೀಯ ರಾಯಭಾರಿ ಕಚೇರಿಗೆ ಅಥವಾ ನಮಗೆ ಕರೆ ಮಾಡಿದ್ರೆ ವೀಸಾ ವ್ಯವಸ್ಥೆ ಮಾಡಲಾಗುತ್ತದೆ ಅಂತ ತಿಳಿಸಿದರು. ರಾಜ್ಯದವರು ವಾಪಸ್ ಬರೋವರೆಗೂ ಅಲ್ಲಿ ಆಗೋ ಖರ್ಚು ವೆಚ್ಚಗಳನ್ನ ರಾಜ್ಯ ಸರ್ಕಾರವೇ ಭರಿಸಲಿದೆ. ಇದನ್ನ ನಾವು ಕೇಂದ್ರ ಸರ್ಕಾರದ ಮೂಲಕ ಮಾಡಬೇಕು. ಕೇಂದ್ರ ಸರ್ಕಾರ ಹಣವನ್ನ ಭರಿಸಿ ನಮಗೆ ಮಾಹಿತಿ ಕೊಟ್ಟರೆ ರಾಜ್ಯ ಸರ್ಕಾರ ಸಂಪೂರ್ಣವಾಗಿ ಹಣವನ್ನ ಭರಿಸಲಿದೆ ಎಂದು ಸ್ಪಷ್ಟಪಡಿಸಿದರು.

ನಿನ್ನೆ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಬ್ ಕಮಿಟಿ ಸಭೆ ಮಾಡಿದೆ. ಆದರೆ ಯಾವುದೇ ಮಾಹಿತಿ ಕೊಟ್ಟಿಲ್ಲ. ಯುದ್ಧ ಇನ್ನು ಒಂದು ವಾರ ಮುಂದುವರೆಯುವ ಮಾಹಿತಿ ಇದೆ. ಹೀಗಾಗಿ ಯಾರು ಆತಂಕಕ್ಕೆ ಒಳಗಾಗೋದು ಬೇಡ. ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ಕೊಡಲಿದೆ. ಅಲ್ಲಿವರೆಗೂ ಎಲ್ಲರು ಶಾಂತಿಯಿಂದ ಇರಬೇಕು ಎಂದು ಮನವಿ ಮಾಡಿದರು.

ಮಧ್ಯಪ್ರಾಚ್ಯ ಭಾಗದಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರು ಸ್ಥಳೀಯ ರಾಯಭಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಂಡು ಸ್ಥಳೀಯ ಆಡಳಿತ ಕೊಡುವ ನಿಯಮ ಪಾಲನೆ ಮಾಡಬೇಕು ಎಂದು ತಿಳಿಸಿದರು. ಶನಿವಾರದಿಂದಲೇ ಸಹಾಯವಾಣಿ ಪ್ರಾರಂಭ ಮಾಡಲಾಗಿದೆ. ಈವರೆಗೂ ೧೦೯ ಜನ ಸಹಾಯವಾಣಿಗೆ ಕರೆ ಮಾಡಿದ್ದಾರೆ.

ಈಗಾಗಲೇ ವಿದೇಶಾಂಗ ಇಲಾಖೆ ಮತ್ತು ದೆಹಲಿಯಲ್ಲಿರೋ ನಮ್ಮ ರೆಸಿಡೆಂಟ್ ಕಮೀಷನರ್ ಕೂಡ ಕೇಂದ್ರದ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಅವರು ಮಧ್ಯಪ್ರಾಚ್ಯದಲ್ಲಿ ಸಿಲುಕಿರುವವರಿಗೆ ೩ ವಿಷಯಗಳ ಬಗ್ಗೆ ಆತಂಕ ಇದೆ. ನಮ್ಮನ್ನು ಹೇಗೆ ವಾಪಸ್ ಕರೆಸುತ್ತೀರಾ ವಿಶೇಷ ವಿಮಾನದ ಮೂಲಕನಾ ಹೇಗೆ ಅಂತ. ನಾವು ಕೇಂದ್ರದ ಜೊತೆ ಮಾತಾಡ್ತಾ ಇದ್ದೇವೆ. ಸದ್ಯ ಈಗ ಏರ್ ಟ್ರಾಫಿಕ್ ನಿಷೇಧ ಆಗಿದೆ. ಏರ್ ಟ್ರಾಫಿಕ್ ಕ್ಲಿಯರ್ ಆದ ಕೂಡಲೇ ಕೇಂದ್ರ ಸರ್ಕಾರ ಹೇಗೆ ಕರೆಸಿಕೊಳ್ಳುತ್ತದೆ ನಮಗೆ ಮಾಹಿತಿ ಸಿಗುತ್ತದೆ. ವಾಯು ಸಂಚಾರ ನಿಯಂತ್ರಣಕ್ಕೆ ಬರುವತನಕ ತೆರವು ಕೆಲಸ ಆಗೊಲ್ಲ. ಹೀಗಾಗಿ ಎಲ್ಲರೂ ಶಾಂತವಾಗಿ ಇರಬೇಕು ಎಂದು ಮನವಿ ಮಾಡಿದರು. ಕದನ ವಿರಾಮ ಆದ ಕೂಡಲೇ ವಾಪಸ್ ಕರೆಸಲು ಕ್ರಮ ಆಗುತ್ತದೆ ಎಂದರು ಯುಎಇ (ದುಬೈ) ಮತ್ತು ಬಹ್ರೇನ್‌ನಲ್ಲಿ ಕನ್ನಡಿಗರು ಸಿಲುಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಒಟ್ಟು ೧೦೯ ಕನ್ನಡಿಗರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದ್ದಾರೆ.


ಜಿಲ್ಲಾವಾರು ಸಿಲುಕಿರುವವರ ವಿವರ:


ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯಂತೆ, ಯುಎಇ (ದುಬೈ) ನಲ್ಲಿ ೧೦೦ ಮಂದಿ ಹಾಗೂ ಬಹ್ರೇನ್‌ನಲ್ಲಿ ೯ ಮಂದಿ ಕನ್ನಡಿಗರು ನೆರವಿಗಾಗಿ ಕಾಯುತ್ತಿದ್ದಾರೆ.


ಯುಎಇ (ದುಬೈ) ಪಟ್ಟಿ:


ಬಳ್ಳಾರಿ: ೩೨
ಬೆಂಗಳೂರು: ೨೫
ದಾವಣಗೆರೆ: ೯
ಚಿಕ್ಕಮಗಳೂರು: ೫
ಕೊಡಗು, ವಿಜಯಪುರ: ತಲಾ ೪
ದಕ್ಷಿಣ ಕನ್ನಡ, ಶಿವಮೊಗ್ಗ, ರಾಯಚೂರು: ತಲಾ ೩
ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕಲಬುರಗಿ, ಉಡುಪಿ: ತಲಾ ೨
ತುಮಕೂರು: ೧
ಜಿಲ್ಲೆ ಸ್ಪಷ್ಟವಿಲ್ಲದವರು: ೩
ಬಹ್ರೇನ್ ಪಟ್ಟಿ:
ಹಾಸನ: ೪
ಉಡುಪಿ: ೩
ಕೊಡಗು: ೧
ಜಿಲ್ಲೆ ತಿಳಿಯದವರು: ೧