
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಫೆ 22: ಹಿಂದೂ ಧರ್ಮದ ಏಕತೆಯ ಮಂತ್ರ, ಸಂಸ್ಕಾರ ಹಾಗೂ ಸಂಸ್ಕೃತಿಗಳನ್ನು ಮುನ್ನೆಲೆಗೆ ತರುವ ಸದುದ್ಧೇಶದಿಂದ ಮಾರ್ಚ್ 2 ರಂದು ಮರಿಯಮ್ಮನಹಳ್ಳಿಯಲ್ಲಿ ಬೃಹತ್ ಹಿಂದೂ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮಾವೇಶದ ಸಮಿತಿಯ ಅಧ್ಯಕ್ಷ ಡಾ. ಜಿ.ಎಂ. ಸೋಮೇಶ್ವರ ಹೇಳಿದರು.
ಅವರು ಪಟ್ಟಣದ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದರು.
ಮಾ. 02 ರ ಸೋಮವಾರದಂದು ಮಧ್ಯಾಹ್ನ 3 ಗಂಟೆಗೆ ಆರಂಭವಾಗುವ ಬೃಹತ್ ಶೋಭಾಯಾತ್ರೆಯು ಭರತಮಾತೆಯ ಭಾವಚಿತ್ರದೊಂದಿಗೆ ಪಾದಗಟ್ಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡು ನಾಣಿಕೇರಿ ವೃತ್ತದ ಮೂಲಕ ಪಟ್ಟಣ ಬಸ್ ನಿಲ್ದಾಣದ ಬಳಿಯ ವೇದಿಕೆಯವರೆಗೆ ಆಗಮಿಸಿ ಕೊನೆಗೊಳ್ಳಲಿದೆ. ಅಲ್ಲದೇ ಈ ಬೃಹತ್ ಶೋಭಯಾತ್ರೆಯಲ್ಲಿ ಸುಮಾರು 10 ರಿಂದ 12 ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ಈ ಸಮಾವೇಶವು ಹಿಂದೂ ಸಮಾಜದ ಪರ ಏಕತೆಯ ಮಂತ್ರ ಸಾರುವ ಸಮಾವೇಶವಾಗಿದ್ದು ಹಿಂದೂ ಸಮಾಜದ ಸಂಸ್ಕಾರ, ಸಂಸ್ಕೃತಿಗಳನ್ನು ಮುನ್ನೆಲೆಗೆ ತರುವುದಾಗಿದೆ. ಈ ಸಮಾವೇಶವು ಯಾವುದೇ ಧರ್ಮ ಹಾಗೂ ಜಾತಿಗೆ ವಿರುದ್ಧವಾದುದಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಮಾವೇಶದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಬಿ.ಅಂಬಣ್ಣ, ಗುಬ್ಬಿವೀರಣ್ಣ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ನಾಗರತ್ನಮ್ಮ, ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಾತಾ ಮಂಜಮ್ಮ ಜೋಗ್ತಿರವರುಗಳನ್ನು ಗೌರವಿಸಲಾಗುವುದು ಎಂದರು.
ನಂತರ ಸಮಾವೇಶದ ಪ್ರಧಾನ ಕಾರ್ಯದರ್ಶಿ ಚಿದ್ರಿ ಸತೀಶ್ ಮಾತನಾಡಿ, ಪಟ್ಟಣದ ಅರಳಿಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಜಿ.ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಮಹಾಸ್ವಾಮಿಗಳು ದಿವ್ಯಸಾನಿಧ್ಯವಹಿಸಲಿದ್ದು, ಈ ಶೋಭಾಯಾತ್ರೆಯಲ್ಲಿ ತಾಷಾ, ಬಂಜಾರ ನೃತ್ಯ, ಕೋಲಾಟ, ಗೊಂಬೆ ಕುಣಿತ, ಹಲಗೆವಾದನ, ನಂದಿಕೋಲು, ಸಮಾಳ ಹಾಗೂ ಇತರೆ ತಂಡಗಳು ಭಾಗವಹಿಸಿ ಯಾತ್ರೆಗೆ ಮೆರಗು ನೀಡಲಿವೆ ಎಂದರು.
ಈ ಸಂದರ್ಭದಲ್ಲಿ ಸಮಾವೇಶದ ಗೌರವ ಅಧ್ಯಕ್ಷ ಎನ್. ಸತ್ಯನಾರಾಯಣ, ಉಪಾಧ್ಯಕ್ಷರಾದ ಎಸ್.ಕೃಷ್ಣನಾಯ್ಕ, ಕುರಿ ಶಿವಮೂರ್ತಿ, ಗೋವಿಂದರ ಪರಶುರಾಮ, ಸಿ.ಎ.ಗಾಳೆಪ್ಪ, ಸಂಚಾಲಕರಾದ ಕಿಚಿಡಿ ಕೊಟ್ರೇಶ್, ಮಜ್ಗಿ ನಾಗರಾಜ್, ಸಹ ಕಾರ್ಯದರ್ಶಿಗಳಾದ ಗುಂಡಾಕೃಷ್ಣ, ಸಿ.ಡಿ.ಯಲ್ಲಪ್ಪ, ಎಲ್.ಮಂಜುನಾಥ ಹಾಗೂ ಇತರರು ಇದ್ದರು.





























