
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಫೆ.14: ನಗರದ ಕುಖ್ಯಾತ ಗಾಂಜಾ ಪೆಡ್ಲರ್ ದೌಲನನ್ನು ಮಾದಕ ವಸ್ತುಗಳ ಮಾರಾಟ ನಿಷೇಧ ಪ್ರಕರಣದಲ್ಲಿ ಪೊಲೀಸರು ಬಂಧಿಸಿ ನಿನ್ನೆ ಜೈಲಿಗೆ ಕಳುಹಿಸಿದ್ದಾರೆ.
ಕಳೆದ 15 ವರ್ಷಗಳಿಂದ ದೌಲ ಗಾಂಜಾ ಮಾರಾಟದ ಅನೇಕ ಪ್ರಕರಣಗಳಲ್ಲಿ ಬಂಧನ ಆಗುವುದು ಜಾಮೀನು ಪಡೆಯುವುದು. ಮತ್ತೆ ಗಾಂಜಾ ಮಾರಾಟ ಮಾಡುವುದು ಮತ್ತೆ ಬಂಧನ. ಮತ್ತೆ ಜಾಮೀನು ಪಡೆಯುವುದು. ಪದೇ ಪದೇ ಹೀಗೆ ಮಾಡುತ್ತ ಬಂದಿದ್ದ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬಳ್ಳಾರಿ ವಲಯದ ಐಜಿಪಿ ಡಾ.ಹರ್ಷ ಅವರು. ಮಾದಕ ವಸ್ತುಗಳ ಮಾರಾಟ ಮತ್ತು ಸಾಗಾಣಿಕೆ ಮಾಡುವುದರಲ್ಲಿ ನಿಷ್ಣಾತನಾಗಿದ್ದ. ನಗರದ ರಾಣಿತೋಟ ನಿವಾಸಿ ಈ ಡಿ.ದೌಲ ಅಲಿಯಾಸ್ ಮೆಹಬೂಬ್ ದೌಲ. ಅಂತರ ರಾಜ್ಯ ಗಾಂಜ್ ಗಿರಾಕಿಯ ಜಾಲ ಹೊಂದಿದ್ದ. ರಾಜ್ಯದ ಮೈಸೂರು, ತುಮಕೂರು, ಚಿತ್ರದುರ್ಗ ಬಳ್ಳಾರಿ ಸೇರಿದಂತೆ ವಿವಿದ ಜಿಲ್ಲೆಗಳಲ್ಲಿ ಈತನ ವಿರುದ್ದ ಮಾದಕ ವಸ್ತುಗಳನ್ನು ತರುವದು , ಶೇಖರಣೆ ಮಾಡುವುದು, ಮಸರಾಟ ಮಾಡುವ ಕುರಿತು ಕ್ರಿಮಿನಲ್ ಪ್ರಕರಣ ದಾಖಲಾಗಿದ್ದವು. ಎಷ್ಟೇ ಬಾರಿ ಬಂಧನ ಮಾಡಿದರೂ ಆತ ತನ್ನ ಹಗ್ಗ ಕಡಿಯುವ ಚಾಳಿ ನಿಲ್ಲಿಸಿರಲಿಲ್ಲ. ಈತನ ದಂಧೆಯಿಂದ ಅಮಾಯಕ ಯುವ ಜನತೆ ಡ್ರಗ್ಸ್ ಸೇವನೆ ಚಟಕ್ಕೆ ಬಲಿಯಾಗುತ್ತಿದ್ದರು.
ಇದರಿಂದಾಗಿ 21 ಎನ್ಡಿಪಿಎಸ್ ಪ್ರಕರಣಗಳು ಈತನ ವಿರುದ್ದ ದಾಖಲಾಗಿದ್ದವು. ಅದರಲ್ಲಿ ಇನ್ನೂ 12 ಪ್ರಕರಣ ವಿಚಾರಣಾ ಹಂತದಲ್ಲಿ ನ್ಯಾಯಾಲಯದಲ್ಲಿ ಬಾಕಿ ಇವೆ. ಆದ್ದರಿಂದ ಸಾಮಾನ್ಯ ಕ್ರಿಮಿನಲ್ ಕಾನೂನು ಮಾತ್ರ ಸಾಕಾಗದ ಸಂದರ್ಭಗಳಲ್ಲಿ ಈತನ ವಿರುದ್ದ ಪಿಐಟಿ ಎನ್ಡಿಪಿಎಸ್ ಕಾಯ್ದೆ (1988) ರ ಪ್ರಕಾರ ಮುಂದಿನ ಅನಧಿಕೃತ ಮಾದಕ ದ್ರವ್ಯ ವಹಿವಾಟನ್ನು ತಡೆಯಲು ಎಸ್ಪಿ ಡಾ ಸುಮನ್ ಅವರ ತಂಡ ಬಂಧಿಸಿ ಜೈಲಿಗೆ ಕಳುಹಿಸಿದೆ ಎಂದು ತಿಳಿಸಿದ್ದಾರೆ.
ನಮ್ಮ ಬಳ್ಳಾರಿ ವಲಯದಲ್ಲಿ ಯಾರೇ ಆಗಲಿ ಸಮಾಜ ಘಾತುಕ ಕೃತ್ಯಗಳಲ್ಲಿ ತೊಡಗಿದರೆ ಮುಲಾಜಿಲ್ಲದೆ ಕಢಿಣ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ.
ಹಿನ್ನಲೆ:
ಈ ದೌಲ ತನ್ನ ಗಾಂಜಾ ದಂಧೆಗಾಗಿ ಸ್ಯಳೀಯ ರಾಜಕಾರಣಿಗಳ ಕೃಪಾ ಕಟಾಕ್ಷ ಪಡೆಯುತ್ತಿದ್ದ.ಅವರ ಬಳಿ ಹೋಗಿ ಪೋಟೋ ತೆಗೆದುಕೊಂಡು ಪೊಲೀಸರಿಂದ ರಕ್ಷಣೆ ಪಡೆಯುತ್ತಿದ್ದ.ಹಾಲಿ ಮಗರ ಶಾಸಕ ಭರತ್ ರೆಡ್ಡಿ ಜೊತೆ ಕುಳಿತುಕೊಂಡು ಅದನ್ನು ದೌಲ ತನ್ನ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದನ್ನು ಗಂಗಾವತಿ ಶಾಸಕ ಜನಾರ್ಧನರೆಡ್ಡಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
ನಂತರ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಬಿಜೆಪಿ ಮಾಜಿ ಶಾಸಕ ಸೋಮಶೇಖರ ರೆಡ್ಡಿ ಜೊತೆ ಇರುವ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು.
ಅನೇಕ ಬಾರಿ ಈತ ಮತ್ತು ಈತನ ಸಹಚರರನ್ನು ಬಂಧನ ಮಾಡಿದಾಗ ಕೆಲ ಮಾಧ್ಯಮದವರೂ ಪೊಲೀಸ್ ಠಾಣೆಗಳಿಗೆ ಹೋಗಿ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣ ದಾಖಲಿಸದಂತೆ ಪ್ರಭಾವ ಬೀರಿದ್ದರಂತೆ.
ಒಟ್ಟಾರೆ ಈ ಗಾಂಜಾ ದೌಲನನ್ನು ಬಂಧಿಸುವ ಮೂಲಕ ಐಜಿಪಿ ಹರ್ಷ, ಎಸ್ಪಿ ಡಾ. ಸುಮನ್ ಅವರ ತಂಡ ಗಾಂಜಾದ ಅಕ್ರಮ ಮಾರಾಟ ಜಾಲಕ್ಕೆ ಕಡಿವಾಣ ಹಾಕಲು ಮುಂದಾಗಿರುವುದು ಯುವ ಸಮೂಹ ಹಾಳಾಗುವುದನ್ನು ತಡೆದಂತಾಗಿದೆ ಎನ್ನಬಹುದು.























