ನಾಟಕಕಾರ ಶಂಕ್ರಯ್ಯ ಘಂಟಿಗೆ ಸನ್ಮಾನ

ಕಲಬುರಗಿ,ಫೆ.14-ಚಲನಚಿತ್ರ ಒಂದು ಸಂಕೀರ್ಣ ಕಲೆಯಾಗಿದ್ದು, ಸಾಮಾಜಿಕ ಸಂಗತಿಗಳ ಪ್ರತಿಬಿಂಬವಾಗಿರುತ್ತದೆ ಎಂದು ನಾಟಕಕಾರ ಶಂಕ್ರಯ್ಯ ಘಂಟಿ ಹೇಳಿದರು.
ಘಂಟಿಯವರು ಬರೆದು ನಟಿಸಿದ “ನಮ್ ಸಾಲಿ” ಚಲನ ಚಿತ್ರ ಅಂತರ್ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ನಿಮಿತ್ಯ ಫೆಬ್ರುವರಿ 12 ರಂದು ಸಂಜೆ ನಗರದ ಉದನೂರು ಕ್ರಾಸ್ ಬಳಿಯ ಅರಳಿ ಆರ್ಟ್ ಸ್ಟುಡಿಯೋದಲ್ಲಿ ಸಮಾನ ಮನಸ್ಕ ಕಲಾವಿದರ ಬಳಗ ನೀಡಿದ ಸನ್ಮಾನ ಸ್ವೀಕರಿಸಿದ ಅವರು ಮಾತನಾಡುತ್ತಿದ್ದರು.
ನಾನು ಬರೆದ ಕಥೆಯೊಂದು “ನಮ್ ಸಾಲಿ” ಎನ್ನುವ ಹೆಸರಿನಲ್ಲಿ ಚಲನಚಿತ್ರವಾಗಿದ್ದು ಸಂತೋಷ ತಂದಿದೆ, ಮಾತ್ರವಲ್ಲ 17 ನೆಯ ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಎರಡನೆಯ ಅತ್ಯುತ್ತಮ ಕನ್ನಡ ಚಿತ್ರವೆಂದು ಪ್ರಶಸ್ತಿ ಗಳಿಸಿರುವುದು ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದರು.
ಕಲಬುರಗಿಯ ನೆಲದ ಭಾಷೆಯನ್ನೇ ಈ ಚಿತ್ರದಲ್ಲಿ ಬಳಸಲಾಗಿದ್ದು, ಸ್ವತಃ ನಾನು ಮತ್ತು ನನ್ನ ಮಗಳು ಭಾವನಾ ಈ ಚಿತ್ರದಲ್ಲಿ ಅಭಿನಯಿಸಿದ್ದೇವೆ ಎಂದು ವಿವರಿಸುತ್ತ ಹಲವು
ಅನುಭವಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಂಗೀತ ಮತ್ತು ಲಲಿತಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರು ಮಾತನಾಡಿ ಕಳೆದ 4-5 ದಶಕಗಳಿಂದ ನಾಟಕ ಕ್ಷೆತ್ರದಲ್ಲಿ ಕ್ರಿಯಾಶೀಲರಾಗಿರುವ ಶಂಕ್ರಯ್ಯ ಘಂಟಿ ಅವರು ಚಲನಚಿತ್ರ ಕ್ಷೇತ್ರಕ್ಕೂ ಪ್ರವೇಶಿಸಿರುವುದು ಅವರ ವಿಸ್ತರಿತ ಪ್ರತಿಭೆಗೆ ಸಾಕ್ಷಿಯಾಗಿದೆ ಎಂದು ವಿವರಿಸುತ್ತ, ಘಂಟಿಯವರು ತಮ್ಮ ಮೊದಲ ಚಿತ್ರಕ್ಕೇ ಪ್ರಶಸ್ತಿ ಪಡೆದುಕೊಂಡಿದ್ದು ಕಲಬುರ್ಗಿಯ ಸಾಂಸ್ಕøತಿಕ ಲೋಕಕ್ಕೇ ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದು ಪ್ರಶಂಸಿಸಿದರು.
ಇನ್ನೋರ್ವ ಅತಿಥಿ ವಿ.ಬಿ. ಬಿರಾದಾರ ಅವರು ಎಲ್ಲ ಕಲೆಗಳು ಸೌಂದರ್ಯದ ಅನುಭವ ನೀಡುತ್ತವೆ, ಘಂಟಿಯವರು ಒಬ್ಬ ಸೌಂದರ್ಯ ನಿರ್ಮಾತೃ ಎಂದರು.
ಖ್ಯಾತ ಕಲಾವಿದ ವಿಜಯ ಹಾಗರಗುಂಡಗಿ ಅಧ್ಯಕ್ಷತೆ ವಹಿಸಿದ್ದರು, ಕಲಾವಿದ ದೌಲತ್ರಾಯ ದೇಸಾಯಿ ನಿರೂಪಿಸಿದರು. ಗುರುಲಿಂಗ ಅರಳಿ, ಸಂಗಯ್ಯ ಹಳ್ಳದಮಠ, ಸಿದ್ದು ಮರಗೋಳ, ಸೂರ್ಯಕಾಂತ ನಂದೂರ, ಬಾಬುರಾವ್ ಎಚ್., ಡಾ. ಪರಶುರಾಮ ಮೊದಲಾದ ಕಲಾವಿದರು ಉಪಸ್ಥಿತರಿದ್ದರು.