ಹೈಕಮಾಂಡ್ ಕರೆದಾಗ ದೆಹಲಿಗೆ ಹೋಗುತ್ತೇನೆ: ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿರುವುದು. ಸಚಿವರಾದ ಹೆಚ್.ಕೆ. ಪಾಟೀಲ್, ಶಿವಾನಂದ ಪಾಟೀಲ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಮತ್ತಿತರರು ಇದ್ದಾರೆ.

ಬೆಂಗಳೂರು, ಫೆ. ೧೪- ಹೈಕಮಾಂಡ್ ಕರೆದಾಗ ನಾನು ದೆಹಲಿಗೆ ಹೋಗುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.


ಹಾವೇರಿಯಲ್ಲಿಂದು ನಡೆದಿರುವ ರಾಜ್ಯ ಸರ್ಕಾರದ ಸಾವಿರ ದಿನಗಳ ಸಾರ್ಥಕ ಸಮಾವೇಶದಲ್ಲಿ ಪಾಲ್ಗೊಳ್ಳುವ ಮುನ್ನ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಪದೇ ಪದೇ ಪ್ರಶ್ನೆ ಕೇಳುವುದು ಬೇಡ ಎಂದು ಮಾಧ್ಯಮದವರಿಗೆ ಗರಂ ಆಗಿ ಹೇಳಿ, ಹೈಕಮಾಂಡ್ ಏನು ಹೇಳುತ್ತದೋ ಅದನ್ನು ನಾವು ಕೇಳುತ್ತೇವೆ ಎಂದು ಪುನರುಚ್ಛರಿಸಿದರು.


ನಾನು ಸೇರಿದಂತೆ ಪಕ್ಷದಲ್ಲಿರುವ ಎಲ್ಲರೂ ಹೈಕಮಾಂಡ್ ಮಾತನ್ನು ಕೇಳಲೇಬೇಕು ಎಂದರು.


ನೀವು ಹೈಕಮಾಂಡ್ ಎಂದು ಹೇಳುತ್ತೀರಿ. ಆದರೆ, ನಿಮ್ಮ ಪಕ್ಷದ ನಾಯಕರೇ ಶ್ರಮಕ್ಕೆ ಫಲ ಸಿಗುತ್ತದೆ ಎಂದು ಟ್ವೀಟ್ ಮಾಡುತ್ತಿದ್ದಾರೆ. ಹಾಗೆಯೇ ಕೆಲ ಶಾಸಕರು ಶಿವರಾತ್ರಿ ನಂತರ ಶುಭಸುದ್ದಿ ಎಂದು ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ಹೈಕಮಾಂಡ್ ನವರು ಆ ರೀತಿ ಟ್ವೀಟ್ ಮಾಡಿದ್ದಾರಾ, ಹೀಗಿರುವಾಗ ಈ ರೀತಿ ಪ್ರಶ್ನೆಗಳು ಅನಗತ್ಯ ಎಂದರು.


ನಿಮ್ಮ ಪುತ್ರ ಯತೀಂದ್ರ ಸಿದ್ಧರಾಮಯ್ಯ ಅವರು ನಮ್ಮ ತಂದೆಯವರೇ ಐದು ವರ್ಷ ಸಿಎಂ ಎಂದು ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಅದಕ್ಕೆಲ್ಲಾ ನಾನು ಉತ್ತರ ಕೊಡಲ್ಲ. ಹೈಕಮಾಂಡ್‌ನವರು ಕರೆದಾಗ ನಾನು ಹೋಗುತ್ತೇನೆ. ಪದೇ ಪದೇ ಈ ಪ್ರಶ್ನೆ ಕೇಳಬೇಡಿ ಎಂದರು.


ವರದಾ-ಬೇಡ್ತಿ ನದಿ ಜೋಡಣೆ ಬಗ್ಗೆ ಉತ್ತರ ಕನ್ನಡ ಜಿಲ್ಲೆಯವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಸ್ತಾವನೆಯನ್ನು ನಾವು ಕೇಂದ್ರಕ್ಕೆ ಕಳುಹಿಸಿದ್ದೇವೆ. ಕೇಂದ್ರದವರು ಯಾವುದರ ಮೇಲೂ ನಿರ್ಣಯ ಕೊಡುತ್ತಿಲ್ಲ. ಹಾಗಾಗಿ ನಮಗೆ ಕೇಂದ್ರದ ಮೇಲೆ ಭರವಸೆಯೇ ಹೋಗಿದೆ ಎಂದರು.


ಈ ತಿಂಗಳಲ್ಲಿ ಜಾತಿಗಣತಿ ವರದಿ


ಕಳೆದ ಎರಡು ತಿಂಗಳ ಹಿಂದೆ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಯನ್ನು ಈ ತಿಂಗಳಲ್ಲೇ ಹಿಂದುಳಿದ ವರ್ಗಗಳ ಶಾಶಾತ್ವ ಆಯೋಗ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಅವರು ಹೇಳಿದರು.


ರಾಜ್ಯದ ಕಾಂಗ್ರೆಸ್ ಸರ್ಕಾರದ ಸಾರ್ಥಕ ಸಮಾವೇಶವನ್ನು ಬಿಜೆಪಿಯವರು ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಏನು ಮಾಡಲಿಲ್ಲ. ಹಾಗಾಗಿ ಹೊಟ್ಟೆಕಿಚ್ಚಿನಿಂದ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರ ಆರೋಪಗಳು ಸುಳ್ಳು ಎಂದರು.


ನಾವು ಈ ಹಿಂದೆ ಅಧಿಕಾರದಲ್ಲಿದ್ದಾಗ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇವೆ. ಈಗಲೂ ನುಡಿದಂತೆ ನಡೆಯುತ್ತಿದ್ದೇವೆ. ಅದೇ ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಅವರು ಕೊಟ್ಟ ಭರವಸೆಯಲ್ಲಿ ಶೇ. ೧೦ ರಷ್ಟು ಭರವಸೆಯನ್ನು ಈಡೇರಿಸರಿಲಿಲ ಹಾಗಾಗಿ ಅವರಿಗೆ ನಮ್ಮನ್ನು ಟೀಕಿಸುವ ನೈತಿಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.


ಬಡವರು, ದಲಿತರು, ಹಿಂದುಳಿದವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರನ್ನಾಗಿಸಲು ನಾವು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅದರಂತೆ ಸಾರ್ಥಕ ಸಮಾವೇಶವನ್ನು ಆಯೋಜಿಸಿದ್ದೇವೆ. ಇಲ್ಲಿಯವರೆಗೂ ಮಾತು ಕೊಟ್ಟಂತೆ ನಡೆದುಕೊಂಡಿದ್ದವೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಜವಳಿ, ಸಕ್ಕರೆ, ಎಪಿಸಿ ಎಂಸಿ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಕಾನೂನು ಸಚಿವ ಹೆಚ್.ಕೆ.ಪಾಟೀಲ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ವಿಧಾನಪರಿಷತ್‌ನ ಮುಖ್ಯ ಸಚೇತಕ ಸಲೀಂ ಅಹಮದ್ ಸೇರಿದಂತೆ ಹಲವು ಶಾಸಕರು, ಸಂಸದರು ಉಪಸ್ಥಿತರಿದ್ದರು.