
ಬೆಂಗಳೂರು,ಫೆ.೧೪-ರೌಡಿ ಶಿವಕುಮಾರ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹಾಗೂ ಮಾಜಿ ಸಚಿವ ಭೈರತಿ ಬಸವರಾಜ್ ಅವರ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ.
ಇಸಿಜಿಯಲ್ಲಿ ವ್ಯತ್ಯಾಸ ಕಂಡು ಬಂದ ಕೂಡಲೇ ಜಯದೇವ ಆಸ್ಪತ್ರೆಯಲ್ಲಿ ಬಸವರಾಜ್ ಅವರಿಗೆ ಆಂಜಿಯೋಗ್ರಾಂ ನಡೆಸಲಾಗಿದೆ.
ಇಸಿಜಿಯಲ್ಲಿ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಬಸವರಾಜ್ ಅವರನ್ನು ಐಸಿಯು ವಾರ್ಡ್ನ ಎ ಬ್ಲಾಕ್ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಿ ಬಳಿಕ ಆಂಜಿಯೋಗ್ರಾಂ ನಡೆಸಲಾಗಿದ್ದು ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
ಆಸ್ಪತ್ರೆಯಲ್ಲಿರುವ ಬಸವರಾಜ್ ಅವರ ಕೊಠಡಿ ಬಳಿ ಯಾರಿಗೂ ಪ್ರವೇಶವಿಲ್ಲ. ಸಿಐಡಿಯ ಓರ್ವ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಒಂದು ತಂಡವೊಂದು ನಿಗಾವಹಿಸಿ ಸ್ಥಳೀಯ ತಿಲಕ್ ನಗರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಈಗಾಗಲೇ ರಕ್ತವನ್ನು ಪರೀಕ್ಷೆಗೆ ಪಡೆಯಲಾಗಿದೆ. ಆಂಜಿಯೋಗ್ರಾಂ ವರದಿ ಬಂದ ಬಳಿಕ ನ್ಯಾಯಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ವಶಕ್ಕೆ ಕೇಳಿದ ಸಿಐಡಿ:
ರೌಡಿ ಬಿಕ್ಲು ಶಿವನ ಹತ್ಯೆ ಪ್ರಕರಣದ ೫ನೇ ಆರೋಪಿಯಾಗಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಕೇಳಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ನ್ಯಾಯಾಲಯದ ಮುಂದೆ ರಿಮ್ಯಾಂಡ್ ಅರ್ಜಿ ಸಲ್ಲಿಸಲಾಗಿದ್ದು, ಬಸವರಾಜ್ ಅವರನ್ನು ಕಸ್ಟಡಿಗೆ ಪಡೆಯಲು ೯ ಪ್ರಮುಖ ಕಾರಣಗಳನ್ನು ಉಲ್ಲೇಖಿಸಿರುವುದಾಗಿ ಸಿಐಡಿ ಮೂಲಗಳು ಮಾಹಿತಿ ನೀಡಿವೆ.
ಈ ಹಿಂದೆ ಭಾರತೀನಗರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಆರೋಪಿ ಬೈರತಿ ಬಸವರಾಜ್ ಅವರು ಸತ್ಯಾಂಶಗಳನ್ನು ಮರೆಮಾಚಿದ್ದು, ಹೆಚ್ಚಿನ ಮಾಹಿತಿ ಕಲೆಹಾಕಲು ಕಸ್ಟಡಿ ಅಗತ್ಯವಿದೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ವಿವರ:
ಕಳೆದ ಜುಲೈ ೧೫ರಂದು ಕಾರಿನಲ್ಲಿ ಬಂದಿದ್ದ ೮-೯ ಜನ ದುಷ್ಕರ್ಮಿಗಳು ಭಾರತೀನಗರದಲ್ಲಿರುವ ಮನೆಯ ಮುಂದೆಯೇ ರೌಡಿಶೀಟರ್ ಶಿವಪ್ರಕಾಶ್ನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಕಾಲ್ಕಿತ್ತಿದ್ದರು. ಕೃತ್ಯದ ಬಳಿಕ ಶಿವನ ತಾಯಿ ವಿಜಯಲಕ್ಷ್ಮಿ ನೀಡಿದ ದೂರಿನ ಮೇರೆಗೆ ಶಾಸಕ ಬೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಫೆ.೧೨ರಂದು ಅಂದರೆ, ಘಟನೆ ನಡೆದ ಏಳು ತಿಂಗಳ ಬಳಿಕ ಸಿಐಡಿ ಅಧಿಕಾರಿಗಳು ಬೈರತಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಮುಖ ಕಾರಣಗಳು:
*ತನಿಖೆ ವೇಳೆ ದೊರೆತ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಕೂಲಂಕಷ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಳ್ಳಬೇಕಿದೆ.
*ಹತ್ಯೆಗೂ ಮುನ್ನ ಆರೋಪಿಯ ಚಲನವಲನಗಳ ಬಗ್ಗೆ ಅವರಿಂದಲೇ ಮಾಹಿತಿ ಸಂಗ್ರಹಿಸಬೇಕಾಗಿದೆ.
*ಆರೋಪಿ ಬೈರತಿ ಬಸವರಾಜ್ ಅವರನ್ನು ಬಂಧಿಸಿದ ಸಮಯದಲ್ಲಿ ಅವರು ಬಳಸುತ್ತಿದ್ದ ಮೊಬೈಲ್ಗಳು ಪತ್ತೆಯಾಗಿಲ್ಲ. ಅವುಗಳನ್ನು ವಶಕ್ಕೆ ಪಡೆದುಕೊಳ್ಳಬೇಕಿದೆ.
*ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ, ಆರೋಪಿಯ ಹೇಳಿಕೆಗಳು ಸಮಂಜಸವಾಗಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿದೆ.
*ಆರೋಪಿಯ ಮನೆ ಹಾಗೂ ಗೃಹ ಕಚೇರಿಯಲ್ಲಿ ಶೋಧ ನಡೆಸಿ, ಕೃತ್ಯಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಿದೆ.
- ಆರೋಪಿಯು ಘಟನೆಗೂ ಮುನ್ನ ಇತರ ಆರೋಪಿಗಳೊಂದಿಗೆ ಸೇರಿ ಪಿತೂರಿ ನಡೆಸಿದ ಸ್ಥಳಗಳನ್ನು ಅವರಿಂದ ಗುರುತಿಸಬೇಕಾಗಿದೆ.
*ಆರೋಪಿಯು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವುದು ತಿಳಿದುಬಂದಿದ್ದು, ಈ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ.
*ಆರೋಪಿಯು ಎ-೧ ಮತ್ತು ಎ-೨೦ ಆರೋಪಿಗಳ ಜೊತೆ ಸೇರಿಕೊಂಡು ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಬೆಂಬಲ ನೀಡುತ್ತಿರುವ ಬಗ್ಗೆ ತನಿಖೆಯ ವೇಳೆ ತಿಳಿದುಬಂದಿದೆ. ಈ ಬಗ್ಗೆ ಆರೋಪಿಯಿಂದ ಮಾಹಿತಿ ಪಡೆದು ತನಿಖೆ ಕೈಗೊಳ್ಳಬೇಕಾಗಿದೆ.
*ಕೊಲೆಯಾದ ಬಿಕ್ಲು ಶಿವನಿಗೆ ಎ-೧ ಜಗ್ಗ ಮತ್ತು ಎ-೫ ಬಸವರಾಜ್ ಅವರಿಂದ ಜೀವ ಬೆದರಿಕೆ ಸಂಬಂಧ ದಾಖಲಾಗಿದ್ದ ದೂರುಗಳ ಬಗ್ಗೆ ವಿಚಾರಣೆ ನಡೆಸಬೇಕಿದೆ.
ಈ ಎಲ್ಲಾ ಪ್ರಮುಖ ಕಾರಣಗಳ ಹಿನ್ನೆಲೆಯಲ್ಲಿ, ಬೈರತಿ ಬಸವರಾಜ್ ಅವರನ್ನು ಕಸ್ಟಡಿಗೆ ನೀಡುವಂತೆ ಸಿಐಡಿ ಅಧಿಕಾರಿಗಳು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.


























