ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕಳಪೆ ಸಾಧನೆ ತೋರಿದರೆ ಶಿಸ್ತುಕ್ರಮ

ಕೋಲಾರ,ಫೆ,೧೨- ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಇಲಾಖೆ ಎಲ್ಲಾ ಅಗತ್ಯ ನೆರವು ಸಹಕಾರ ನೀಡಲಿದೆ, ಇಷ್ಟರ ನಡುವೆಯೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗುವ ಶಾಲೆಗಳ ಮುಖ್ಯಶಿಕ್ಷಕರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಅಲ್ಮಾಸ್ ಫರ್ವೀನ್ ತಾಜ್ ಎಚ್ಚರಿಸಿದರು.


ನಗರದ ಜಿಲ್ಲಾ ಸ್ಕೌಟ್ಸ್‌ಭವನದಲ್ಲಿ ಸೋಮವಾರ ತಾಲ್ಲೂಕಿನ ಸರ್ಕಾರಿ,ಅನುದಾನಿತ,ಅನುದಾನರಹಿತ ಪ್ರೌಢಶಾಲೆಗಳ ಮುಖ್ಯಶಿಕ್ಷಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.


ಗುಣಾತ್ಮಕ ಫಲಿತಾಂಶ ಇಂದಿನ ಅಗತ್ಯವಾಗಿದೆ, ಯಾವುದೇ ಮಗು ಅನುತ್ತೀರ್ಣವಾಗಬಾರದು ಎಂಬುದು ಸರ್ಕಾರದ ಆಶಯವಾಗಿದೆ, ಈ ಹಿನ್ನಲೆಯಲ್ಲಿ ಶಾಲೆಯಲ್ಲಿ ಶಿಕ್ಷಕರು ಬದ್ದತೆಯಿಂದ ಕೆಲಸ ಮಾಡಬೇಕು, ಮುಖ್ಯಶಿಕ್ಷಕರು ಸಹಶಿಕ್ಷಕರ ಸಹಕಾರ ಪಡೆಯಬೇಕು, ಮಕ್ಕಳಲ್ಲಿ ಕಲಿಕಾಸಕ್ತಿ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಕುರಿತು ನಿಮ್ಮದೇ ಆದ ಚಿಂತನೆ ಕಾರ್ಯಗತಗೊಳಿಸಿ ಎಂದು ಸಲಹೆ ನೀಡಿದರು.


ಜಿಲ್ಲಾ ಶಿಕ್ಷಣಾಧಿಕಾರಿ ವೀಣಾ ಮಾತನಾಡಿ, ಕೋಲಾರ ಜಿಲ್ಲೆಯ ಕಳೆದ ವರ್ಷ ಹೊರತುಪಡಿಸಿ ೧೦ ವರ್ಷಗಳಿಂದ ಫಲಿತಾಂಶದಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದೆ, ಇದೀಗ ಅದೇ ಘನತೆ ಪುನರಾವರ್ತನೆಯಾಗಬೇಕು, ಶಾಲಾವಾರು ಕ್ರಿಯಾಯೋಜನೆ ತಯಾರಿಸಿ ಅದರಂತೆ ಕೆಲಸ ಮಾಡಿ, ತಾಯಂದಿರ,ಪೋಷಕರ ಸಭೆ ಕರೆದು ಮಕ್ಕಳಿಗೆ ಮನೆಯಲ್ಲಿ ಓದಲು ಪೂರಕ ವಾತಾವರಣ ಸೃಷ್ಟಿಗೆ ಮಾರ್ಗದರ್ಶನ ನೀಡಿ ಎಂದು ಕಿವಿಮಾತು ಹೇಳಿದರು.


ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ಮಾತನಾಡಿ, ಪ್ರತಿ ಶಾಲೆಯಲ್ಲಿ ನಿತ್ಯ ಬೆಳಗ್ಗೆ ೯ ರಿಂದ ೧೦ ರವರೆಗೂ ವಿಶೇಷ ತರಗತಿ ನಡೆಸುವುದು ಕಡ್ಡಾಯವಾಗಿದೆ, ಮುಖ್ಯಶಿಕ್ಷಕರ ಅಗತ್ಯ ಕ್ರಮ ಕೈಗೊಳ್ಳಬೇಕು, ಇದು ಒಬ್ಬರು ಮಾಡುವ ಕೆಲಸವಲ್ಲ ಎಲ್ಲಾಶಿಕ್ಷಕರೊಂದಿಗೆ ತಂಡದೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು ಎಂದರು.


ಶಿಕ್ಷಕರು ವಿಧ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ದಾಖಲೆ ಇಡಿ, ಪರೀಕ್ಷೆಯಲ್ಲಿ ಅನುತ್ತಿರ್ಣರಾದ ವಿಧ್ಯಾರ್ಥಿಗಳನ್ನು ಮರು ದಾಖಲಿಸಿಕೊಂಡು ಅವರಿಗೆ ವಿಶೇಷ ಗಮನ ನೀಡುವುದು ಅತಿ ಮುಖ್ಯ ಎಂದರು.


ಈ ಸಂದರ್ಭದಲ್ಲಿ ವಿಷಯ ಪರಿವೀಕ್ಷಕ ಸಮೀವುಲ್ಲಾ, ತಾಲ್ಲೂಕು ನೋಡಲ್ ಅಧಿಕಾರಿ ರಾಧಾ, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ರಮೇಶ್‌ಗೌಡ ಸೇರಿದಂತೆ ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯಶಿಕ್ಷಕರು ಹಾಜರಿದ್ದರು.