ಪಕ್ಷ ಸಂಘಟನೆ ಮತ್ತು ನಿಷ್ಠೆ ಪರಿಗಣಿಸಿ ಸಂಬಣ್ಣಿಗೆ ವಿಡಿಎ ಅಧ್ಯಕ್ಷ ಸ್ಥಾನ:ಸಚಿವ ಎಂ. ಬಿ. ಪಾಟೀಲ

ಸಂಜೆವಾಣಿ ವಾರ್ತೆ,
ವಿಜಯಪುರ, ಫೆ. ೧೦: ಪಕ್ಷ ಸಂಘಟನೆ ಮತ್ತು ನಿಷ್ಠೆಯನ್ನು ಪರಿಗಣಿಸಿ ಡಾ. ಗಂಗಾಧರ ಸಂಬಣ್ಣಿ ಅವರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಅವರು ಜನ ಮೆಚ್ಚುವ ಕೆಲಸ ಮಾಡುವ ವಿಶ್ವಾಸವಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದ್ದಾರೆ.
ಸಂಬಣ್ಣಿ ಅವರನ್ನು ವಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ಹಿನ್ನೆಲೆಯಲ್ಲಿ ಸೋಮವಾರ ಸಚಿವರ ಗೃಹ ಕಚೇರಿಯಲ್ಲಿ ಲಿಂಗಾಯಿತ ಆದಿ ಬಣಜಿಗ ಮತ್ತು ನಾನಾ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಸಚಿವ ಎಂ. ಬಿ. ಪಾಟೀಲ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ ಅವರು, ಸಂಬಣ್ಣಿ ಅವರು ಕಳೆದ ೨೭ ವರ್ಷಗಳಿಂದ ಕೆಳಹಂತದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಾಮಾಣಿಕವಾಗಿ ಪಕ್ಷ ಸಂಘಟನೆ ಶ್ರಮಿಸಿದ್ದಾರೆ. ನನ್ನ ಕುಟುಂಬದೊAದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಪಕ್ಷದಲ್ಲಿ ಎನ್.ಎಸ್.ಯು.ಐ, ಯವ ಕಾಂಗ್ರೆಸ್, ಸೇವಾದಳ ಸೇರಿದಂತೆ ನಾನಾ ಘಟಕಗಳಲ್ಲಿ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ. ಇವರ ನೇಮಕಾತಿಯಿಂದ ವಿಡಿಎ ಅಧ್ಯಕ್ಷ ಪದವಿಗೂ ಗೌರವ ಬಂದಿದೆ. ನೂತನ ಅಧ್ಯಕ್ಷರು ವಿಜಯಪುರ ನಗರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ಜನ ಮೆಚ್ಚುವ ಕೆಲಸ ಮಾಡಬೇಕು. ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ಅಗತ್ಯ ಮಾರ್ಗದರ್ಶನ ಮಾಡುತ್ತೆವೆ. ಅತ್ಯುತ್ತಮ ಕೆಲಸದ ಮೂಲಕ ಶಾಶ್ವತವಾಗಿ ಉಳಿಯುವ ಕೆಲಸ ಮಾಡಬೇಕು ಎಂದು ಸಚಿವರು ಹೇಳಿದರು.
ಖ್ಯಾತ ವೈದ್ಯ ಮತ್ತು ಜೋರಾಪುರ ಬಡಾವಣೆ ನಿವಾಸಿ ಡಾ. ಸತೀಶ ಜಿಗಜಿನ್ನಿ ಮತ್ತು ಕಲಾವಿದ ಎಂ.ಕೆ.ಪತ್ತಾರ ಮಾತನಾಡಿ, ಸರಳ ಮತ್ತ ಸಜ್ಜನಿಕೆಯ ನಡತೆಯ ವ್ಯಕ್ತಿಯನ್ನು ಪಾರದರ್ಶಕವಾಗಿ ವಿಡಿಎ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದರಿಂದ ನಮ್ಮ ಬಡಾವಣೆ ಮಾತ್ರವಲ್ಲ ಇಡೀ ನಗರದ ಜನತೆಗೆ ಸಂತಸ ತಂದಿದೆ.
ಶ್ರೀ ಸಿದ್ಧೇಶ್ವರ ಸಹಕಾರಿ ಬ್ಯಾಂಕ್ ನಿರ್ದೇಶಕ ಸುರೇಶ ಗಚ್ಚಿನಕಟ್ಟಿ ಮಾತನಾಡಿ, ಸಚಿವ ಎಂ.ಬಿ.ಪಾಟೀಲ ಅವರು ವಿಜಯಪುರ ನಗರದ ಅಭಿವೃದ್ಧಿಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಅವರು ಪ್ರಾರಂಭಿಸಿದ ಯೋಜನೆ ಹೆಮ್ಮರವಾಗಿ ಬೆಳೆದಿವೆ. ಸಂಬಣ್ಣಿ ಅವರನ್ನು ವಿಡಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ಎಲ್ಲರ ಪರವಾಗಿ ಸಚಿವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಾನಾ ಸಂಘಟನೆಗಳ ಮುಖಂಡರಾದ ಪ್ರಕಾಶ ಪಾಟೀಲ ಹಾಲಳ್ಳಿ, ಪಂಚಪ್ಪ ಕಲಬುರ್ಗಿ, ಎಸ್.ಪಿ.ಬಿರಾದಾರ ಕಡ್ಲೆವಾಡ, ಶ್ರೀಪತಿಗೌಡ ಬಿರಾದಾರ, ರಾಜೇಂದ್ರ ಜೋರಾಪುರ, ಅಣ್ಣಾರಾಯ ಬಿರಾದಾರ, ಬಾಬುಗೌಡ ಪಾಟೀಲ ಚಡಚಣ, ರೇವಣಸಿದ್ದ ಜುಮನಾಳ, ಸೋಮನಿಂಗ ಕಟಾವಿ, ಡಾ.ಪ್ರಕಾಶ ಗುಣದಾಳ, ಗುರು ಕವಟಗಿ, ಅರ್ಜುನ ರಾಠೋಡ, ಭೀಮಸೇನ ಕೊಕರೆ, ರಾಜುಗೌಡ ಬಿರಾದಾರ, ಧರೇಪ್ಪ ಮಮದಾಪುರ, ಪೀರಪಟೇಲ ಪಾಟೀಲ, ಬಸವರಾಜ ಜೋರಾಪುರ, ಬಾಬು ಗುಲಗಂಜಿ, ಶಿವಾನಂದ ಇಂಚಗೇರಿ, ನಿಂಗಣ್ಣ ಬೆಳ್ಳುಬ್ಬಿ, ರಾಜು ಸಕ್ರಿ, ರವಿ ಪಾಟೀಲ, ರುದ್ರಗೌಡ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.