
ಕಲಬುರಗಿ,ಫೆ.9- ಓದುವ, ಬರೆಯುವ ಪರಿಪಾಠ ಕಡಿಮೆಯಾಗಿರುವ ಈ ದಿನಗಳಲ್ಲಿ ಪುಸ್ತಕ ಸಂಸ್ಕøತಿ ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ
ಪುಸ್ತಕಗಳು ಬಿಡುಗಡೆಯಾಗುತ್ತಿರುವುದು, ಪ್ರಕಟವಾಗುತ್ತಿರುವುದು ಅಭಿಮಾನದ ಸಂಗತಿ ಎಂದು ವಿಶ್ರಾಂತ ಪ್ರಾಧ್ಯಾಪಕಿ ಡಾ. ನೀಲಾಂಬಿಕಾ ಪೆÇಲೀಸ್ ಪಾಟೀಲ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ನಗರದ ಕನ್ನಡ ಭವನದಲ್ಲಿ ನಿನ್ನೆ ಭಾನುವಾರ ಸಂಜೆ ಆಯೋಜಿಸಿದ್ದ ಸುದ್ದಿಮೂಲ ಕನ್ನಡ ದಿನಪತ್ರಿಕೆಯ ಸಂಪಾದಕ ಬಸವರಾಜ ಸ್ವಾಮಿ ವಿರಚಿತ “ಬಸವಗೀತೆ” ಸತ್ಯಸಂವಾದ (9 ಸಂಪುಟಗಳ ಗುಚ್ಛ) ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕಲಬುರಗಿ ಈಗ ಪುಸ್ತಕ ಹಬ್ ಆಗುತ್ತಿದೆ. ಭವಿಷ್ಯತ್ತಿನಲ್ಲಿ ಪುಸ್ತಕಗಳ ಸ್ಥಾನಮಾನ ಏನು? ಎಂಬುದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು ಎಂದು ತಿಳಿಸಿದರು.
ಪುಸ್ತಕಗಳ ಕುರಿತು ಮಾತನಾಡಿದ ಡಾ. ಶ್ರೀಶೈಲ ನಾಗರಾಳ ಅವರು, ಬಸವಣ್ಣ ಹಾಗೂ ಆತನ ಸಮಕಾಲೀನರು ಪರಸ್ಪರ ನಡೆಸಿರುವ ಸತ್ಯ ಸಂವಾದ ಬಹಳ ಅಪರೂಪದ್ದಾಗಿದೆ. ಮಾಂತ್ರಿಕ ವಾಸ್ತವಿಕ ತಂತ್ರ ಬಳಸಿ ಬರೆದಿರುವ ಈ ಕೃತಿ ಕನ್ನಡದಲ್ಲಿ ಹೊಸ ಪ್ರಯೋಗ ಎಂದರು.
1571 ಪುಟಗಳ ವ್ಯಾಪ್ತಿಯ ಈ ಸಂಪುಟದಲ್ಲಿ ಬಸವಣ್ಣ ಹಾಗೂ ಆತನ ಸಮಕಾಲೀನ ಶರಣರು ನಡೆಸಿದ ಪ್ರಶ್ನೋತ್ತರಗಳಿವೆ. ಬದುಕಿನ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತಿವೆ. ಓದುಗರೊಡನೆ ಅನುಶೀಲನೆ ಮಾಡಿ ಬಿಡುವು ಕೊಟ್ಟು ಮತ್ತೊಂದು ವಿಷಯದ ಕಡೆಗೆ ಎಳೆದೊಯ್ಯುವಂತಿದೆ ಎಂದು ತಿಳಿಸಿದರು.
ಪ್ರಗತಿಪರ ಚಿಂತಕ ಪೆÇ್ರ. ಆರ್.ಕೆ. ಹುಡಗಿ ಮುಖ್ಯ ಅತಿಥಿಯಾಗಿದ್ದರು. ಕೃತಿಕಾರ ಬಸವರಾಜ ಸ್ವಾಮಿ ಮಾತನಾಡಿ, ಮನೋಕಾಯವನ್ನು ಜ್ಞಾನಕಾಯವನ್ನಾಗಿ ಮಾಡಿಕೊಂಡಿದ್ದ ಶರಣರು ದೇಹಧರ್ಮ, ಪ್ರಕೃತಿಧರ್ಮದ ಬಗ್ಗೆ ಮಾತನಾಡಿದ್ದಾರೆ. ಮಹಾಪುರುಷರದ್ದು ಧರ್ಮ ಸ್ಥಾಪನೆಯ ಗುರಿಯಾಗಿರಲಿಲ್ಲ ಅವರು ಸ್ಥಾಪಿಸಿದ್ದು ಮನುಷ್ಯ ಧರ್ಮ, ಸಹಜ ಧರ್ಮ, ಸರಳ ಧರ್ಮ ಎಂದು ಅವರು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಡಾ. ಶಿವರಂಜನ ಸತ್ಯಂಪೇಟೆ ಪ್ರಾಸ್ತಾವಿಕ ಮಾತನಾಡಿ, ವಚನಗಳ ಅಧ್ಯಯನ, ಸಂಗ್ರಹ, ಸಂಶೋಧನೆ ಕಾರ್ಯದ ಜೊತೆಗೆ ವಚನಗಳ ವಿವಿಧ ಆಯಾಮಗಳ ಬಗ್ಗೆ ಗುರುತಿಸಲಾಗುತ್ತಿದೆ. ಆದರೆ ವಚನಗಳ ಆಳ-ಅಗಲಕ್ಕೆ ಈವರೆಗೆ ಏರಲಾಗುತ್ತಿಲ್ಲ. ವಚನಗಳ ಬೆಳಕು, ಬೆಡಗು ಬೆರಗು ಮೂಡಿಸುವಂಥದ್ದಾಗಿದೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ ಯಡ್ರಾಮಿ, ಸಂಘದ ಮಾಜಿ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ ವೇದಿಕೆಯಲ್ಲಿದ್ದರು. ಜಿಲ್ಲಾ ಕಸಾಪ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಅಧ್ಯಕ್ಷತೆ ವಹಿಸಿದ್ದರು.
ಶಿವರಾಜ ಅಣಜಗಿ ನಿರೂಪಿಸಿದರು. ಸೋಮೇಶಗೌಡ ನಂದಿಕೂರ ಸ್ವಾಗತಿಸಿದರು. ಬಾಬುರಾವ ಕೋಬಾಳ ಪ್ರಾರ್ಥನೆಗೀತೆ ಹಾಡಿದರು. ಶ್ರೇಯಾ, ಸಹಸ್ರಾ ವಚನ ನೃತ್ಯ ಪ್ರದರ್ಶಿಸಿದರು.
ರವೀಂದ್ರ ಶಾಬಾದಿ, ಧರ್ಮಣ್ಣ ಧನ್ನಿ, ಎಸ್.ಎಸ್. ಪಾಟೀಲ, ಶರಣು ನೀರಡಗಿ, ಚಂದ್ರಕಾಂತ ತಡಪಳ್ಳಿ, ಡಾ. ಅಶೋಕ ದೊಡ್ಡಮನಿ, ವಿನೋದ ಜನೆವೆರಿ, ನಿಜಲಿಂಗ ದೊಡ್ಡಮನಿ, ಪಿಡ್ಡಪ್ಪ ಜಾಲಗಾರ, ವಿಠ್ಠಲ ಚಿಕಣಿ, ಶಿವಕುಮಾರ ತೊಟ್ನಳ್ಳಿ, ಸಂಜೀವಕುಮಾರ ಕಾಂಬಳೆ, ದೇವೇಂದ್ರಪ್ಪ ಅವಂಟಿ ಇತರರು ಉಪಸ್ಥಿತರಿದ್ದರು.
…………………………………..
ಭಗವದ್ಗೀತೆಗೆ ಪ್ರತಿರೋದಂತಿರುವ ಬಸವಗೀತೆ ಪ್ರತಿಯೊಬ್ಬರ ಮನೆಯಲ್ಲಿರಬೇಕಾದ ಪುಸ್ತಕವಾಗಿದೆ. ಪುಸ್ತಕ ಸಂಸ್ಕೃತಿ ಸ್ವರೂಪದಲ್ಲಿ ಬದಲಾಗಿರಬಹುದು. ಆದರೆ ಪುಸ್ತಕ ಸಂಸ್ಕೃತಿ ನಾಶವಾಗದು.
-ಪೆÇ್ರ. ಆರ್.ಕೆ. ಹುಡಗಿ, ಕಲಬುರಗಿ





















