
ತುಮಕೂರು, ಜ. ೨೪- ಪರಿಶುದ್ಧ ರಾಜಕಾರಣ, ಪರಿಶುದ್ಧ ವ್ಯಕ್ತಿತ್ವ ಮತ್ತು ಪರಿಶುದ್ಧ ಕೌಟುಂಬಿಕ ಜೀವನ ಹೊಂದಿರುವ ರಾಜಕಾರಣಿ ಸಾಧನೆ, ವ್ಯಕ್ತಿತ್ವಗಳನ್ನು ಮಾದರಿಯಾಗಿರಿಸಿಕೊಂಡು ನಮ್ಮ ಜನಾಂಗದ ಎರಡನೇ ಸಾಲಿನ ನಾಯಕರನ್ನು ಸಿದ್ದಗೊಳಿಸುವ ಗುರಿಯನ್ನು ಹೊಂದಿರುವ ನಮ್ಮ ಸಮುದಾಯದ ಅಗ್ರಗಣ್ಯ ನಾಯಕರಾದ ಸಚಿವ ಆರ್.ಬಿ. ತಿಮ್ಮಾಪುರ ಅವರ ಮೇಲೆ ಲಂಚದ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದು ಮಾಜಿ ಶಾಸಕ ಗಂಗಹನುಮಯ್ಯ ಹೇಳಿದ್ದಾರೆ.
ಲಂಚ ಪ್ರಕರಣದ ಹಿನ್ನೆಲೆ ಮತ್ತು ಅದರ ಹಿಂದಿರುವ ಷಡ್ಯಂತ್ರ ಮತ್ತು ಸಂಚನ್ನು ಇನ್ನೊಂದು ಆಯಾಮದಲ್ಲಿ ನೋಡಬೇಕಿದ್ದು, ಅಬ್ದಾರಿ ಇಲಾಖೆಗೆಯಲ್ಲಿ ಪಾರದರ್ಶಕತೆ ಜಾರಿಗೆ ತಂದದ್ದೇ ಅವರ ವಿರುದ್ದ ಲಂಚ ಆರೋಪದ ಷಡ್ಯಂತ್ರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಂಪುಟದಲ್ಲಿರುವ ದಲಿತ ಸಚಿವರ ಮೇಲೆ ಅವ್ಯಾಹತವಾಗಿ ಆಪಾದನೆಗಳು, ಆರೋಪಗಳು ಅಸಹಜವೆನಿಸುವಷ್ಟು ಮಟ್ಟಿಗೇ ಉದ್ದೇಶ ಪೂರ್ವಕವಾಗಿ ನಡೆಯುತ್ತಿದ್ದು, ಇದು ದಲಿತ ನಾಯಕರನ್ನೇ ಗುರಿಯಾಗಿಸಿಕೊಂಡು ಅವರ ರಾಜಕೀಯ ಭವಿಷ್ಯವನ್ನು ನಾಶಪಡಿಸುವ ಪಡೆ ಸಕ್ರಿಯವಾಗಿರುವುದು ಸ್ಪಷ್ಟ. ಈ ಘಟನೆ ಬಗ್ಗೆ ಕೂಲಂಕುಶ ತನಿಖೆ ನಡೆದು ತಿಮ್ಮಾಪುರ್ ರವರಿಗೆ ನ್ಯಾಯ ಸಿಗಬೇಕು ಮತ್ತು ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ಸಿಲುಕಿಸಿ ಸಂಪುಟದಿಂದ ಕೈ ಬಿಡಬಾರದು ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ಯಾವುದೇ ರಾಜ್ಯದ ಖಜಾನೆಗೆ ಗರಿಷ್ಠ ಆದಾಯ ತರುವ ಇಲಾಖೆ ಅಬಕಾರಿ ಇಲಾಖೆ. ಅಬಕಾರಿ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ತನಿಖೆಯೂ ನಡೆಯುತ್ತಿದೆ. ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಈ ಸುದ್ದಿಗಳು ಪ್ರಕರಣದ ನಂತರದ ಕ್ರಮಗಳು ಎಂದಿದ್ದಾರೆ. ಆದರೆ, ಇದ್ದಕ್ಕಿದ್ದಂತೆ ಅಬಕಾರಿ ಸಚಿವರು ಇದರಲ್ಲಿ ಶಾಮೀಲಾಗಿದ್ದಾರೆ. ಅವರ ಪುತ್ರನಿಗೂ ಇದರಲ್ಲಿ ಪಾಲಿದೆ ಎಂದು ಪ್ರಕರಣ ದಾಖಲಾಗಿದೆ ಎನ್ನುವುದು ಆಘಾತಕಾರಿ ಸುದ್ದಿ. ಈ ಪ್ರಕರಣವಾಗಲಿ, ಆರೋಪವಾಗಲಿ ಇಲ್ಲಿ ಮುಖ್ಯವಲ್ಲ. ಈ ಪ್ರಕರಣದ ಹಿನ್ನೆಲೆ ಮತ್ತು ಅದರ ಹಿಂದಿರುವ ಷಡ್ಯಂತ್ರ ಮತ್ತು ಸಂಚನ್ನು ಇನ್ನೊಂದು ಆಯಾಮದಲ್ಲಿ ನೋಡಬೇಕು ಎಂದು ಅವರು ಹೇಳಿದ್ದಾರೆ.
ಪರಿಶಿಷ್ಟ ಮತ್ತು ದಲಿತ ನಾಯಕರನ್ನು ಮುಗಿಸುವ ಹುನ್ನಾರದೊಂದಿಗೆ ಲಂಚ ಪ್ರಕರಣದಲ್ಲಿ ಸಿಲುಕಿಸಲು ಸಂಚು ನಡೆದಿದೆ. ದಲಿತ ನಾಯಕರನ್ನೇ ಗುರಿಯಾಗಿಸಿಕೊಂಡು ಅವರ ರಾಜಕೀಯ ಭವಿಷ್ಯವನ್ನು ನಾಶಪಡಿಸುವ ಷಡ್ಯಂತ್ರವೂ ನಡೆಯುತ್ತಿದೆ. ಈ ಪಡೆಯ ಬಗ್ಗೆ ತನಿಖೆ ಆಗಬೇಕಿದೆ ಎಂದಿದ್ದಾರೆ.
ಒಂದು ಸುಳ್ಳನ್ನು ನೂರು ಬಾರಿ ಹೇಳಿ ಜನತೆಗೆ ಇದು ನಿಜವೇ ಎನ್ನುವಂತೆ ವರ್ಣಿಸಿ ದಲಿತ ಮಂತ್ರಿಗಳನ್ನು ತೇಜೋವಧೆ ಮಾಡುತ್ತಿರುವುದು ಯಾವ ನ್ಯಾಯ? ಎಸ್ಸಿ, ಎಸ್ಟಿ ಹಣವನ್ನು ಆಂಧ್ರದ ಬ್ಯಾಂಕ್‌ನಲ್ಲಿ ವ್ಯವಹಾರ ಮಾಡಿ ಹಣವನ್ನೆಲ್ಲ ಲೂಟಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೆ ಆಗಾಗ ಪ್ರಸ್ತಾಪಿಸುತ್ತಲೇ ಇರುವ ನಾಯಕರುಗಳು ಯಾವ ಅವಧಿಯಲ್ಲಿ ಆಂಧ್ರದಲ್ಲಿ ಖಾತೆ ತೆರೆದಿದೆ ಎಂದು ಪರಿಶೀಲನೆ ಮಾಡಬೇಕಲ್ಲವೇ ಇನ್ನು ಮುಂದಾದರೂ ಪರಿಶಿಷ್ಠ ಜಾತಿಯ ರಾಜಕೀಯ ನಾಯಕರುಗಳ ಮೇಲೆ ಆಪಾದನೆ ಮಾಡುವುದು ನಿಲ್ಲಲಿ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.






























