
ವಾಡಿ: ಸೆ.25:ಪಟ್ಟಣದ ಪುರಸಭೆ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವರ್ಷಗಟ್ಟಲೆ ಕಚೇರಿಗೆ ಅಲೆದರೂ ಸಾರ್ವಜನಿಕರ ಆಸ್ತಿ ದಾಖಲೆಗಳು ಕ?ಸೇರುತ್ತಿಲ್ಲ. ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆಗೆ ಜನರು ಬೇಸತ್ತಿದ್ದಾರೆ. ಪುರಸಭೆಯ ಸೇವೆಗಳು ಸರಳವಾಗಿ ಜನರಿಗೆ ತಲುಪಲು ಕ್ರಮಕ?ಗೊಳ್ಳಬೇಕು ಎಂದು ಜನಧ್ವನಿ ಜಾಗೃತ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಈ ಕುರಿತು ಮಂಗಳವಾರ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹ್ಮದ್ ಮುನಾವರ್ ದೌಲೆ ಅವರನ್ನು ಭೇಟಿ ಮಾಡಿ ಮನವಿಪತ್ರ ಸಲ್ಲಿಸಿದ ಜನಧ್ವನಿ ಮುಖಂಡರು, ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳು ತಮ್ಮ ಜವಾಬ್ದಾರಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಮುಖ್ಯಾಧಿಕಾರಿಗಳು ಇದ್ದೂ ಇಲ್ಲದಂತಿದ್ದಾರೆ. ಸಾರ್ವಜನಿಕರು ಸಮಸ್ಯೆ ಹೇಳಿಕೊಂಡು ಕಚೇರಿಗೆ ಬರುತ್ತಾರಾದರೂ ಕಷ್ಟ ಹೇಳಿಕೊಳ್ಳಲು ಮುಖ್ಯಾಧಿಕಾರಿಯೇ ಇರುವುದಿಲ್ಲ. ಕರೆ ಮಾಡಿದಾಗಲೊಮ್ಮೆ ಮೀಟಿಂಗ್ ಇದೆ ಕಲಬುರಗಿಗೆ ಬಂದಿದ್ದೇನೆ ನಾಳೆ ಬನ್ನಿ ಎಂಬ ಸಿದ್ಧ ಉತ್ತರ ನೀಡುತ್ತಾರೆ. ನೊಂದಣಿಯಾದ ನಿವೇಶನ ದಾಖಲೆಯ ಮೊಟೇಷನ್, ಕಟ್ಟಡ ಪರವಾನಿಗೆ, ಆಸ್ತಿ ಮಾರಾಟಕ್ಕೆ ಸಂಬಂದಪಟ್ಟಂತೆ ಖಾತಾ ನಕಲು ಕೇಳಿದರೆ ಕೆಲವರಿಗೆ ನಾಲ್ಕು ತಿಂಗಳು ಇನ್ನೂ ಕೆಲವರಿಗೆ ವರ್ಷಗಟ್ಟಲೇ ಅಲೆದಾಡಿಸುತ್ತಾರೆ. ಲಂಚ ಕೊಟ್ಟರೆ ಮಾತ್ರ ಸರಿಯಾದ ಸಮಯದಲ್ಲಿ ಆಸ್ತಿ ದಾಖಲೆಗಳು ಕೈಸೇರುತ್ತವೆ. ಇಲ್ಲದಿದ್ದರೆ ಇಲ್ಲ ಎಂಬಂತಹ ಕೆಟ್ಟ ಪರಸ್ಥಿತಿ ಸೃಷ್ಠಿಯಾಗಿದೆ ಎಂದು ಆರೋಪಿಸಿದರು.
ಕಳೆದ ಮೂರು ವರ್ಷಗಳಿಂದ ಬಡಾವಣೆಗಳ ಅಭಿವೃದ್ಧಿ ಸ್ಥಗಿತಗೊಂಡಿದೆ. ಹೂಳು ತುಂಬಿ ಚರಂಡಿಗಳು ಗಬ್ಬೆದ್ದು ನಾರುತ್ತಿವೆ. ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಹಲವು ಬಡಾವಣೆಗಳಲ್ಲಿ ಗಿಡಗಂಟಿ ಬೆಳೆದು ಹಾವು ಚೇಳು ಹರಿದಾಡುತ್ತಿವೆ. ಪಟ್ಟಣದ ಯಾವೂದೇ ಸ್ಥಳದಲ್ಲಿ ಸಾರ್ವಜನಿಕ ಮೂತ್ರಾಲಯ ಸೌಲಭ್ಯ ಇಲ್ಲ. ಹೊರಗಿನಿಂದ ಬರುವ ಜನರಿಗಾಗಿ ಸುಲಭ ಶೌಚಾಲಯ ಇಲ್ಲ. ಬೀದಿ ದೀಪಗಳ ನಿರ್ವಹಣೆ ವ್ಯವಸ್ಥೆ ಸರಿಯಿಲ್ಲ. ವಿವಿಧ ಬಡಾವಣೆಗಳು ಸೇರಿದಂತೆ ಮುಖ್ಯ ರಸ್ತೆಗೆ ಅಳವಡಿಸಿರುವ ಸಾಲು ಸಾಲು ಬೀದಿ ದೀಪಗಳು ಮೂರು ವರ್ಷ ಕಳೆದರೂ ಬೆಳಕು ನೀಡುತ್ತಿಲ್ಲ. ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಯಾವ ದಾಖಲೆ ಪಡೆಯಲು ಎಷ್ಟು ಶುಲ್ಕ ಭರಿಸಬೇಕು ಎಂಬ ನಾಮಫಲಕ ಅಳವಡಿಸಿಲ್ಲ. ಸ್ಥಳೀಯರಿಗೆ ಇತರೇ ಸರ್ಕಾರಿ ಸೌಲಭ್ಯಗಳನ್ನು ಒದಗಿಸದೆ ಅಧಿಕಾರಿಗಳು ವಂಚಿಸಿದ್ದಾರೆ ಎಂದು ದೂರಿದ್ದಾರೆ.
ಪುರಸಭೆಯ ಮುಖ್ಯಾಧಿಕಾರಿ ಹಾಗೂ ಸಿಬ್ಬಂಧಿಗಳಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಇವರಿಗೆ ಹೇಳೋರು ಕೇಳೋರು ಯಾರೂ ಇಲ್ಲದಂತಾಗಿದೆ. ಕೂಡಲೇ ತಾವು ಪುರಸಭೆ ಕಛೇರಿಗೆ ಭೇಟಿ ನೀಡಿ ಆಡಳಿತ ವ್ಯವಸ್ಥೆಯನ್ನು ಸರಿ ದಾರಿಗೆ ತರಬೇಕು. ಪುರಸಭೆ ಕಚೇರಿಯಲ್ಲಿ ಯಾವ ದಾಖಲೆಗೆ ಎಷ್ಟು ಶುಲ್ಕ ಮತ್ತು ಎಷ್ಟು ದಿನದಲ್ಲಿ ದಾಖಲೆ ಕೈಸೇರುತ್ತವೆ ಎಂಬ ಕುರಿತು ನಾಮಫಲಕ ಕಚೇರಿಯಲ್ಲಿ ಅಳವಡಿಸಬೇಕು. ಲಂಚಾವತಾರ ತಡೆಗಟ್ಟಬೇಕು. ಜನರಿಗೆ ಸಕಲಾದಲ್ಲಿ ಸೇವೆ ಸಿಗುವಂತೆ ನೋಡಿಕೊಳ್ಳಬೇಕು. ವ್ಯವಸ್ಥೆ ಹೀಗೆಯೇ ಜನವಿರೋಧಿಯಾಗಿ ಕಾನೂನು ಬಾಹಿರವಾಗಿ ಮುಂದು ವರೆದರೆ ಜನಧ್ವನಿ ಜಾಗೃತ ವೇದಿಕೆ ಹೋರಾಟ ರೂಪಿಸುವುದು ಅನಿವಾರ್ಯವಾಗುತ್ತದೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.
ಜನಧ್ವನಿ ಜಾಗೃತ ಸಮಿತಿಯ ಅಧ್ಯಕ್ಷ ವೀರಭದ್ರಪ್ಪ ಆರ್. ಕೆ, ಕಾರ್ಯದರ್ಶಿ ಶೇಖ ಅಲ್ಲಾಭಕ್ಷ್, ಉಪಾಧ್ಯಕ್ಷ ಸಿದ್ಧಯ್ಯಶಾಸ್ತ್ರೀ ನಂದೂರಮಠ, ಮುಖಂಡರಾದ ಯುಸ್ಯೂಪ್ ಮುಲ್ಲಾ ಕಮರವಾಡಿ, ವಿಠ್ಠಲ್ ರಾಠೋಡ, ಶಿವಪ್ಪ ಮುಂಡರಗಿ, ಚಂದ್ರು ಕರಣಿಕ, ಮಹೆಬೂಬ ನದಾಫ್, ಆರ್.ಎನ್.ಆನಂದ ನಿಯೋಗದಲ್ಲಿ ಇದ್ದರು