
ಸಂಜೆವಾಣಿ ವಾರ್ತೆ
ತಿ.ನರಸೀಪುರ ಸೆ.3:- ಸಚಿವರಿಂದಲೇ ನೇರವಾಗಿ ಸಾಲ ಸೌಲಭ್ಯ, ಸಹಾಯಧನ ಕೊಡಿಸುವುದಾಗಿ ತಾಲೂಕಿನ ಕೊಳತ್ತೂರು ಗ್ರಾಮದ ಮಹಿಳೆಯೊಬ್ಬರು 27 ಲಕ್ಷ ರೂಗಳನ್ನು ಅದೇ ಗ್ರಾಮದ ನೂರಾರು ಮಹಿಳೆಯರು ಮತ್ತು ಯುವಕರಿಗೆ ವಂಚಿಸಿದ್ದು, ಆಕೆಯ ವಿರುದ್ಧ ತಲಕಾಡು ಪೆÇಲೀಸ್ ಠಾಣೆಯಲ್ಲಿ ಮಂಗಳವಾರ ವಂಚನೆಗೊಳಗಾದವರು ದೂರು ಸಲ್ಲಿಸಿದ್ದು, ವಂಚಕಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ತಾಲೂಕಿನ ತಲಕಾಡು ಪೆÇಲೀಸ್ ಠಾಣೆಯ ಮುಂಭಾಗ ಜಮಾವಣೆಗೊಂಡಿದ್ದ ಕೊಳತ್ತೂರು ಗ್ರಾಮದ ನೂರಾರು ಮಹಿಳೆಯರು, ಯುವಕರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಂದ ಸಹಾಯ ಧನದಡಿ ಸಾಲ ಸೌಲಭ್ಯದ ಮಂಜೂರು ಮಾಡಿರುವ ಆಮಿಷವೊಡ್ಡಿ ಗ್ರಾಮದಲ್ಲಿ 27 ಲಕ್ಷ ಹಣವನ್ನು ವಸೂಲಿ ಮಾಡಿ, ಪರಾರಿಯಾಗಿರುವ ಜೋಕ್ಸ್ ಕುಳ್ಳಯ್ಯನ ರಮೇಶ ಎಂಬುವರ ಪತ್ನಿ ಜ್ಯೋತಿ ಎಂಬುವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕೂಡಲೇ ಆಕೆಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದು ಕೆಲ ನಿಮಿಷ ಪ್ರತಿಭಟನೆ ನಡೆಸಲು ಮುಂದಾದರು.
ಗ್ರಾ.ಪಂ ಮಾಜಿ ಅಧ್ಯಕ್ಷ ಆರ್.ಸೋಮಣ್ಣ ಮಾತನಾಡಿ, ಕೊಳತ್ತೂರು ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತೆಯೂ ಅಲ್ಲದ ಜ್ಯೋತಿ ಎಂಬಾಕೆ ಸಚಿವರ ಹೆಸರನ್ನು ಹೇಳಿಕೊಂಡು ಮಹಿಳಾ ಸ್ವಸಹಾಯ ಸಂಘಗಳ ಗುಂಪುಗಳಿಗೆ ಸಬ್ಸಿಡಿ ಸಾಲ ಕೊಡಿಸುತ್ತೇನೆ ಎಂದು 170 ರಿಂದ 180 ಮಹಿಳೆಯರ ಬಳಿ ತಲಾ 1,200 ರೂಗಳನ್ನ ವಸೂಲಿ ಮಾಡಿದ್ದಾಳೆ. ಹತ್ತಾರು ಯುವಕರಿಗೆ ಕಾರ್ ಲೋನ್, ಇಟ್ಟಿಗೆ ಕಾರ್ಖಾನೆಗೆ ಶಕ ಕೊಡಿಸುವುದಾಗಿ ತಲಾ 50 ಸಾವಿರ ಹಣ ವಸೂಲಿ ಮಾಡಿದ್ದಾರೆ. ಇಷ್ಟಲ್ಲದೆ ಪಕ್ಕದ ದೊಡ್ಡೇಬಾಗಿಲು ಗ್ರಾಮ ಸೇರಿದಂತೆ ತಲಕಾಡು ಪೆÇಲೀಸ್ ಠಾಣೆಯ ಸರಹದ್ದಿನ ಹೆಮ್ಮಿಗೆ, ಮಾವಿನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲೂ ಆಮಿಷವೊಡ್ಡಿ ವಸೂಲಿಗೆ ಇಳಿದಿದ್ದಾಳೆ. ಕೂಡಲೇ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಕರುನಾಡು ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕಿ ನೇತ್ರಾವತಿ ಮಾತನಾಡಿ, ನಿತ್ಯವೂ ಕೊಲಿಗೆ ದುಡಿಯುವ ಅಕ್ಷರದ ಅರಿವಿಲ್ಲದ ನೂರಾರು ಮಹಿಳೆಯರಿಗೆ ಸರ್ಕಾರದ ಸಾಲ ಸೌಲಭ್ಯ ಕೊಡಿಸುತ್ತೇನೆಂದು ನಂಬಿಸಿ, ಹಣ ವಸೂಲಿ ಮಾಡಿ ವಂಚಿಸಿದ್ದಾರೆ. ಕೆಲವು ಮೈಕ್ರೋ ಫೈನಾನ್ಸ್ ಗಳಲ್ಲೂ ಸಬ್ಸಿಡಿ ಸಾಲ ಕೊಡುತ್ತಿದ್ದಾರೆಂದು ಕರೆದೊಯ್ದು, ಅವರವರ ಖಾತೆಗೆ ಜಮೆಯಾಗಿದ್ದ ಹಣವನ್ನು ಡ್ರಾ ಮಾಡಿಸಿಕೊಂಡು ಈಗ ಆಕೆ ನಾಪತ್ತೆಯಾಗಿದ್ದಾಳೆ. ಮೈಕ್ರೋ ಫೈನಾನ್ಸ್ ನವರ ಸಾಲ ಕಟ್ಟುವಂತೆ ಮನೆ ಮುಂದೆ ನಿಲ್ಲುತ್ತಿದ್ದಾರೆ. ದುಡಿದು ಜೀವನ ಮಾಡೋರು ಲಕ್ಷಾಂತರ ಸಾಲದ ಸುಳಿಗೆ ಸಿಲುಕಿಕೊಂಡಿದ್ದಾರೆ ಎಂದು ದೂರಿದರು.
ದೂರು ಸ್ವೀಕರಿಸಿದ ಎಎಸ್ಐ ಕೆ.ಪಿ.ನಾಗೇಂದ್ರಸ್ವಾಮಿ ಮಾತನಾಡಿ, ಕೊಳತ್ತೂರು ಗ್ರಾಮದಲ್ಲಿ ನೂರಾರು ಮಹಿಳೆಯರು ಹಾಗೂ ಯುವಕರಿಗೆ ವಂಚಿಸಿರುವ ಮಹಿಳೆ ಜ್ಯೋತಿ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸಲು ಕ್ರಮ ಕೈಗೊಳ್ಳುತ್ತೇವೆ. ದೂರು ಸ್ವೀಕರಿಸಿದ ಬಳಿಕ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸುತ್ತೇವೆ. ಅಲ್ಲಿಯವರೆಗೂ ವಂಚನೆಗೊಳಗಾದ ಮಹಿಳೆಯರು ಹಾಗೂ ಯುವಕರು ಕಾಲಾವಕಾಶ ನೀಡಬೇಕೆಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷ ರವಿಪ್ರಸಾದ್, ಮಾಜಿ ಉಪಾಧ್ಯಕ್ಷ ಕೆ.ಶಂಕರ, ಮಾಜಿ ಸದಸ್ಯ ಕೆ.ಎಂ.ಮಹದೇವಸ್ವಾಮಿ, ದಸಂಸ ಸಂಚಾಲಕ ಕೆ.ಎಂ.ಮಂಜುನಾಥ್, ಮುಖಂಡ ದೊಡ್ಡೇಬಾಗಿಲು ಮಹದೇವಯ್ಯ, ಯಜಮಾನರುಗಳಾದ ನಂಜಯ್ಯ, ನಂಜುಂಡಯ್ಯ, ವಿಷಕಂಠಯ್ಯ, ಅಂಗಡಿ ಕೈಲಾಸ ಮೂರ್ತಿ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಯುವಕರು ಇದ್ದರು.