
ಕಲಬುರಗಿ:ಅ.14:ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ವಿವಿಧ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಆಯಾ ವಿಷಯಗಳ ಬೋಧನಾ ಅವಧಿಯು ವಾರಕ್ಕೆ ಕೇವಲ 5 ಗಂಟೆಯಾಗಿದೆ.ಇದರಿಂದಾಗಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ವಿಷಯವನ್ನು ಆಳವಾಗಿ ಅಧ್ಯಯನ ಮತ್ತು ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ. ಅಂದರೆ ವಿಶ್ವವಿದ್ಯಾಲಯವು ಈಗಿರುವ 5 ಗಂಟೆಗಳ ಬೋಧನಾ ಅವಧಿಯನ್ನು 6 ಗಂಟೆಗೆ ಹೆಚ್ಚಿಸಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ತಮ್ಮಲ್ಲಿ ಆಗ್ರಹಿಸುತ್ತದೆ. ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ತಮ್ಮ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ವಿವಿಧ ವಿಷಯಗಳ ಬೋಧನಾ ಅವಧಿಯನ್ನು 6 ಗಂಟೆಗೆ ಹೆಚ್ಚಿಸಿ ಈಗಾಗಲೇ ಆದೇಶ ಹೊರಡಿಸಿವೆ. ಆದ್ದರಿಂದ ಸ್ನಾತಕ ಪದವಿಯ ರಾಜ್ಯ ಶಿಕ್ಷಣ ನೀತಿ(ಎಸ್ಇಪಿ) ಅಡಿಯಲ್ಲಿ ಮಾನವಿಕ ವಿಜ್ಞಾನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) ವಿಷಯಗಳ ಪ್ರಥಮ ಮತ್ತು ಮೂರನೇ ಸೆಮೆಸ್ಟರ್ಗಳವರೆಗಿನ ಬೋಧನಾ ಅವಧಿಯು ಕೇವಲ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಮಾತ್ರ 5 ಗಂಟೆಗಳ ಬೋಧನಾ ಅವಧಿ ನಿಗಧಿ ಮಾಡಿರುವದರಿಂದ ವಿವಿಧ ವಿಷಯಗಳ ವಿವರವಾದ ಭೋಧನೆಗೆ ಸಮಯ ಸಾಕಾಗುತ್ತಿಲ್ಲ. ಇದರಿಂದಾಗಿ ಹಲವು ವಿಷಯಗಳ ಆಳವಾದ ಬೋಧನೆಗೆ ಅವಕಾಶವಿಲ್ಲದೆ ಅನ್ಯಾಯ ಮಾಡಿದಂತಾಗುತ್ತಿದೆ.
ಆದ್ದರಿಂದ ಈಗಿರುವ 5 ಗಂಟೆಯ ಬೋಧನಾ ಅವಧಿಯಲ್ಲಿ ವಿವಿಧ ವಿಷಯಗಳನ್ನು ಪರಿಪೂರ್ಣವಾಗಿ ಪಠ್ಯಕ್ರಮ ಬೋಧನೆ ಮಾಡಿ ಪೂರ್ಣಗೊಳಿಸಲು ಕಷ್ಟಸಾಧ್ಯ. ಹೀಗಾಗಿ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಮಾನವಿಕ ವಿಜ್ಞಾನ ವಿಷಯಗಳ (ಭಾರತೀಯ ಸಂವಿಧಾನ ಮತ್ತು ಪರಿಸರ ಅಧ್ಯಾಯನ ಕಡ್ಡಾಯ ಪತ್ರಿಕೆ ಸೇರಿದಂತೆ) ಬೋಧನಾ ಅವಧಿಯು 6 ಗಂಟೆಗೆ ಹೆಚ್ಚಿಸಿರುತ್ತವೆ. ಆದ್ದರಿಂದ ಗುಲಬರ್ಗಾ ವಿಶ್ವವಿದ್ಯಾಲಯವು ಸಹ ತಕ್ಷಣವೇ ವಿವಿಧ ನಿಕಾಯಗಳ ಬೋರ್ಡ ಆಫ್ ಸ್ಟಡಿಗಳ ಸಭೆ ಕರೆದು ಈಗಿರುವ 5 ಗಂಟೆಗಳ ಬೋಧನಾ ಅವಧಿಯನ್ನು 6 ಗಂಟೆಗಳಿಗೆ ಹೆಚ್ಚಿಸಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ವಿವಿಧ ವಿಷಯಗಳ ಆಳವಾದ ಬೋಧನೆಗೆ ಅವಕಾಶ ಕಲ್ಪಿಸಿ ಆಯಾ ವಿಷಯಗಳಿಗೆ ನ್ಯಾಯ ಕೊಡಬೇಕೆಂದು ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತದೆ. ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಪ್ರೊ.ರಮೇಶ ಲಂಡನ್ಕರ್ ಅವರಿಗೆ ನಿಯೋಗದ ಮೂಲಕ ಮನವಿ ಸಲ್ಲಿಸಲಾಯಿತು. ನಿಯೋಗದಲ್ಲಿ ಡಾ.ಶರಣಪ್ಪ ಸೈದಾಪೂರ. ಡಾ.ದಶರಥ ಮೇತ್ರೆ, ಡಾ.ನಿರ್ಮಲಾ ಸಿರಗಾಪೂರ, ಡಾ.ದತ್ತು ರಾಂಪೂರ, ಡಾ.ಜ್ಞಾನಮಿತ್ರ, ಡಾ.ವಿಜಯಕುಮಾರ ಕಾಂಬಳೆ, ಡಾ.ವಿಠಲ್, ಪ್ರೊ.ವಿರೇಂದ್ರ, ಪ್ರೊ.ಸಿದ್ಧಲಿಂಗರೆಡ್ಡಿ, ಡಾ.ಮಹಾದೇವ ಇನ್ನಿತರರು ಇದ್ದರು.