Home Lead News ಕಾಲ್ತುಳಿತಕ್ಕೆ ೮ ಮಂದಿ ಬಲಿ

ಕಾಲ್ತುಳಿತಕ್ಕೆ ೮ ಮಂದಿ ಬಲಿ

ಪಾಟ್ನಾ, ಮಾ.೩೧- ಬಿಹಾರದ ನಳಂದ ಜಿಲ್ಲೆಯ ಶೀತ್ಲಾ ದೇವಸ್ಥಾನದಲ್ಲಿ ಧಾರ್ಮಿಕ ಆಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿರುವ ಘಟನೆ ನಡೆದಿದೆ.


ಪೂಜೆಗಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಜಮಾಯಿಸಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಇದರಿಂದಾಗಿ ಜನದಟ್ಟಣೆ ಹೆಚ್ಚಾಗಿದ್ದು, ಹಠಾತ್ ನೂಕು ನುಗ್ಗಲು ಉಂಟಾಗಿ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ
ಘಟನೆಯ ಬಗ್ಗೆ ತನಿಖೆಗೆ ಬಿಹಾರ ಸರ್ಕಾರ ಆದೇಶಿಸಿದೆ


ದೇವಾಲಯದ ಆವರಣದಲ್ಲಿ ಅಸ್ತವ್ಯಸ್ತ ವಾತಾವರಣದ ನಡುವೆಯೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವುದು ದೃಶ್ಯಗಳಲ್ಲಿ ಕಂಡು ಬಂದಿವೆ. ಮಾಹಿತಿ ಪಡೆದ ನಂತರ ಪೊಲೀಸ್ ಅಧಿಕಾರಿಗಳು, ಸ್ಥಳೀಯ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಕೈಗೊಂಡರು.


ಪ್ರತಿ ಮಂಗಳವಾರ ದೇವಾಲಯಕ್ಕೆ ಭಾರಿ ಜನದಟ್ಟಣೆ ಇರುತ್ತದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ, ಪಾಟ್ನಾ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಈ ದುರಂತಕ್ಕೆ ಅನೇಕರು ನಿರ್ವಹಣೆಯ ಕೊರತೆಯೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.


“ನಿರ್ವಹಣೆಯ ಕೊರತೆಯಿಂದಾಗಿ ಕಾಲ್ತುಳಿತದ ಅವಘಡ ಸಂಭವಿಸಿದೆ” ಎಂದು ಒಬ್ಬ ಪ್ರತ್ಯಕ್ಷದರ್ಶಿ ಹೇಳಿದರೆ, ಮತ್ತೊಬ್ಬರು, “ಯಾರೂ ಸರದಿಯಲ್ಲಿ ನಿಲ್ಲಲು ಬಯಸಲಿಲ್ಲ ಮತ್ತು ಎಲ್ಲರೂ ಮೊದಲು ದರ್ಶನ ಪಡೆಯಲು ಪ್ರಯತ್ನಿಸಿದರು. ಚೈತ್ರ ಮಾಸದ ಕೊನೆಯ ಮಂಗಳವಾರವಾದ್ದರಿಂದ, ಜನದಟ್ಟಣೆ ಇನ್ನೂ ಹೆಚ್ಚಾಗಿತ್ತು” ಎಂದು ಹೇಳಿದ್ದಾರೆ.


ನಳಂದದಲ್ಲಿ ರಾಷ್ಡ್ರಪತಿ ದ್ರೌಪದಿ ಮುರ್ಮು


ಈ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಇಂದು ಬಿಹಾರದ ನಳಂದದಲ್ಲಿದ್ದಾರೆ ಮತ್ತು ದುರಂತ ಸಂಭವಿಸಿದ ಶೀತ್ಲಾ ಮಾತಾ ದೇವಾಲಯದಿಂದ ಸ್ವಲ್ಪ ದೂರದಲ್ಲಿರುವ ಹತ್ತಿರದ ನಳಂದಕ್ಕೆ ಭೇಟಿ ನೀಡಲಿದ್ದಾರೆ.


ಘಟನೆಯ ಸಮಯದಲ್ಲಿ, ನಳಂದದ ಎಲ್ಲಾ ಹಿರಿಯ ಆಡಳಿತ ಅಧಿಕಾರಿಗಳು ರಾಷ್ಟ್ರಪತಿಗಳ ಕಾರ್ಯಕ್ರಮದ ಸಿದ್ಧತೆಗಳಲ್ಲಿ ತೊಡಗಿದ್ದರು ಎಂದು ಹೇಳಲಾಗಿದೆ.


ಡಿಸಿಎಂ ಸಂತಾಪ


ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಎಕ್ಸ್ ಖಾತೆಯಲ್ಲಿ ಘಟನೆಗೆ ಸಂತಾಪ ಸೂಚಿಸಿದ್ದು, ಕಾಲ್ತುಳಿತವನ್ನು “ಅತ್ಯಂತ ಹೃದಯವಿದ್ರಾವಕ” ಎಂದು ಕರೆದಿದ್ದಾರೆ.


ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಪರಿಹಾರವನ್ನು ನೀಡುತ್ತಿದೆ ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿದೆ ಎಂದು ಅವರು ಹೇಳಿದ್ದಾರೆ


“ನಳಂದದ ಮಾತಾ ಶೀತ್ಲಾ ದೇವಸ್ಥಾನದಲ್ಲಿ ನಡೆದ ದುರಂತ ಕಾಲ್ತುಳಿತ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಮತ್ತು ಗಾಯಗೊಂಡ ಎಲ್ಲಾ ಭಕ್ತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.


ತನಿಖೆಗೆ ಆದೇಶ : ಸಿಎಂ


ದೇವಾಲಯದ ದುರಂತದ ನಂತರ, ಬಿಹಾರ ಸರ್ಕಾರ ಘಟನೆಯ ತನಿಖೆಗೆ ಆದೇಶಿಸಿದೆ. ವಿವರವಾದ ತನಿಖೆ ನಡೆಸಲು ಮತ್ತು ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
ಪರಿಸ್ಥಿತಿಯನ್ನು ಆದಷ್ಟು ಬೇಗ ಸಾಮಾನ್ಯ ಸ್ಥಿತಿಗೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಪಾಟ್ನಾ ಪೊಲೀಸ್ ಆಯುಕ್ತತಿಗೆ ಪರಿಸ್ಥಿತಿಯ ಮೇಲ್ವಿಚಾರಣೆಗೆ ಕಳುಹಿಸಲಾಗಿದೆ ಎಂದಿದ್ದಾರೆ.


ಘಟನೆಯಲ್ಲಿ ಸಾವನ್ನಪ್ಪಿದವರ ಹತ್ತಿರದ ಸಂಬಂಧಿಕರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ತಲಾ ೬ ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ, ಇದರಲ್ಲಿ ವಿಪತ್ತು ನಿರ್ವಹಣಾ ಇಲಾಖೆಯಿಂದ ೪ ಲಕ್ಷ ರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ೨ ಲಕ್ಷ ರೂ. ಸೇರಿದೆ.