
ಗದಗ,ಫೆ.೫-ರಾಜ್ಯದಲ್ಲಿ ಇಂದು ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ೬ ಮಂದಿ ಮೃತಪಟ್ಟಿದ್ದಾರೆ.
ವೇಗವಾಗಿ ಬಂದ ಕ್ರೂಸರ್ ಹಾಗೂ ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ರೈತ ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿ ೧೫ ಮಂದಿ ಗಾಯಗೊಂಡಿರುವ ದಾರುಣ ಘಟನೆ ರೋಣ ತಾಲೂಕಿನ ಜಿಗಳೂರ ಕ್ರಾಸ್ ಬಳಿ ನಡೆದಿದೆ.
ಗಜೇಂದ್ರಗಡದ ಶಿವಾಜಿಪೇಟೆಯ ಅನ್ನಪೂರ್ಣ (೫೬), ಸಂಗೀತ ಹೊಸಮನಿ (೪೮), ಮರಿಯಂಬೂ ಹುನಗುಂದ (೫೫) ಮೃತಪಟ್ಟವರು, ಗಾಯಾಳುಗಳ ಪೈಕಿ ನಾಗಮ್ಮ ಜಾಧವ್ ಕಾಲು,ತೊಡೆ ಮುರಿದರೆ, ಶಶಿಕಲಾ ಮರಾಠೆ ಕೈ ಮುರಿದಿದೆ. ಲಕ್ಷ್ಮವ್ವ ಹಾಲಕೇರಿ ಅವರ ಕಾಲು ಮುರಿದಿದೆ. ಲಕ್ಷ್ಮೀ ನಾಗಪ್ಪ ಹಾಲಕೇರಿ ಸೇರಿ ೧೫ ಜನರ ತಲೆ, ಕೈ ತಲೆಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನು ಗದಗದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ.
ಗಜೇಂದ್ರಗಡದ ಶಿವಾಜಿನಗರ ನಿವಾಸಿಗಳಾದ ಕೂಲಿ ಕಾರ್ಮಿಕರು ಕ್ರೂಸರ್ ವಾಹನದಲ್ಲಿ ಕೆಲಸಕ್ಕಾಗಿ ರೋಣ ಕಡೆಗೆ ತೆರಳುತ್ತಿದ್ದ ಕಡಳೆ ಕೀಳಲು ಹೋಗುವಾಗ ಲಾರಿ ಡಿಕ್ಕಿಯಾದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕ್ರೂಸರ್ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ಸ್ಥಳಕ್ಕೆ ರೋಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಪಘಾತ ಸ್ಥಳಕ್ಕೆ ಗದಗ ಎಸ್ಪಿ ರೋಹನ್ ಜಗದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಮೂವರ ದುರ್ಮರಣ
ವೇಗವಾಗಿ ಬಂದ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ನಲ್ಲಿ ಮೂವರು ಯುವಕರು ದಾರುಣ ಸಾವನ್ನಪ್ಪಿರುವ ದಾರುಣ ಘಟನೆ ಹಾರೂಗೇರಿಯ ಅಥಣಿ-ಗೋಕಾಕ ರಸ್ತೆಯಲ್ಲಿ ನಡೆದಿದೆ.
ಗಜಾನನ ಮಹಾದೇವ ವಡೆಯರ್(೨೨), ಮಾಳಪ್ಪ ಮಲ್ಲಪ್ಪ ಗೋಲಭಾಂವಿ(೨೨) ಮತ್ತು ಮಹಾದೇವ ಮಲ್ಲಪ್ಪ ಗೋಲಭಾಂವಿ (೨೬) ಮೃತಪಟ್ಟವರು.
ಒಂದೇ ಬೈಕ್ ನಲ್ಲಿ ಹೋಗುತ್ತಿದ್ದ ಮೂವರು ಮುಗಳಖೋಡ್ ನಿಂದ ಹಾರೂಗೇರಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ, ಅಪರಿಚಿತ ವಾಹನ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದೆ. ಡಿಕ್ಕಿಯ ಪರಿಣಾಮ ಗಜಾನನ್ ಮತ್ತು ಮಹಾದೇವ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಾಳಪ್ಪ ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಸಾಗುವ ವೇಳೆ ಮೃತಪಟ್ಟಿದ್ದರು.
ಅಪಘಾತದ ಬಗ್ಗೆ ಮಾಹಿತಿ ಪಡೆದ ನಂತರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರ್ಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.
ಘಟನೆ ಸಂಬಂಧ ಹಾರೂಗೇರಿ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ ೨೮೧ ಮತ್ತು ೧೦೬(೧) ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ ೧೩೪ ಮತ್ತು ೧೮೭ ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.


























