
ಬೆಂಗಳೂರು,ಮಾ.೩೧-ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು ಸೇರಿ ೧೧ಮಂದಿ ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಿ ೫.೧೪ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ಜಪ್ತಿ ಮಾಡುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ೫.೧೪ ಕೋಟಿ ಮೌಲ್ಯದ ೨ ಕೆ.ಜಿ ೦೭ ಗ್ರಾಂ ಎಂಡಿಎಂಎ, ೩೧ ಕೆ.ಜಿ ೩೯೬ ಗ್ರಾಂ ಗಾಂಜಾ, ೨೨೦ ಗ್ರಾಂ ಹೈಡ್ರೋಗಾಂಜಾ, ೧೬೨ ಗ್ರಾಂ ಹೆರಾಯಿನ್ ೧ ದ್ವಿ-ಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಯಲಹಂಕ ಉಪನಗರ, ಆಡುಗೋಡಿ, ಭಾರತಿನಗರ, ಜಾಲಹಳ್ಳಿ ಹಾಗೂ ಪುಲಿಕೇಶಿನಗರ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿಯನ್ನು ಆಧರಿಸಿ ದಾಳಿ ನಡೆಸಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಹಾಗೂ ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದರು.
ಯಲಹಂಕ ಪೊಲೀಸರು ಇಸ್ರೋ ಲೇಔಟ್ ಬಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾದ ಸ್ಯಾಮ್ಯುಯೆಲ್ (೪೪)ಬಂಧಿಸಿ ೨ ಕೋಟಿ ಮೌಲ್ಯದ ೨ಕೆಜಿ ತೂಕದ ಎಂಡಿಎಂಎ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಆಡುಗೋಡಿ ಪೊಲೀಸರು ಇಬ್ಬರು ಅಂತರರಾಜ್ಯ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೩೨.೪೦ ಲಕ್ಷ ಮೌಲ್ಯದ ೧೬೨ ಗ್ರಾಂ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಡಿವಾಳ ಪೊಲೀಸರು ಮೂವರು ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೨೨ಲಕ್ಷ ಮೌಲ್ಯದ ೨೮ ಕೆಜಿ ಗಾಂಜಾ ೨೨೦ ಗ್ರಾಂ ಹೈಡ್ರೋಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಭಾರತೀನಗರ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಪುಲಕೇಶಿನಗರದ ರೌಡಿ ಶ್ಯಾಮ್ ಪವನ್ ಅಲಿಯಾಸ್ ಪವನ್ (೨೩)ಕಮ್ಮನಹಳ್ಳಿಯ ಅಲನ್ ಕೆಣ್ಣಡಿ(೩೦)ಯನ್ನು ಬಂಧಿಸಿ ೧೩ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಈ ಕಾರ್ಯಾಚರಣೆಗಳನ್ನು ಡಿಸಿಪಿಗಳಾದ ಜಿ.ಕೆ.ಮಿಥುನ್ ಕುಮಾರ್, ಮೊಹಮ್ಮದ್ ಸುಜೀತ.ಎಂ.ಎಸ್, ಡಾ.ವಿಕ್ರಮ್ ಆಮಟೆ, ಬಾಬಾ ಸಾಹೇಬ ನೇಮಗೌಡ,ನೇತೃತ್ವದ ಅಧಿಕಾರಿ ಸಿಬ್ಬಂದಿಯ ತಂಡ ಕೈಗೊಂಡಿದೆ ಎಂದು ಹೇಳಿದರು.






























