Home ಜಿಲ್ಲೆ ಮೈಸೂರು ೨೫ ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ವಶ

೨೫ ಕೆ.ಜಿ. ಸಿಂಥೆಟಿಕ್ ಡ್ರಗ್ಸ್ ವಶ

ಹುಣಸೂರು,ಮಾ.೨೮-ಮೈಸೂರು, ಬೆಂಗಳೂರಿನಂತಹ ಮಹಾ ನಗರಗಳ ನಂತರ ಡ್ರಗ್ಸ್ ಮಾಫಿಯಾ ಕಾಲಿಟ್ಟಿದೆ.


ಹುಣಸೂರು ತಾಲೂಕಿನ ರತ್ನಪುರಿ ಬಳಿಯ ದಾಸನಪುರ ಗ್ರಾಮದ ಮದ್ಯೆ ಇರುವ ತೋಟದ ಮನೆಯಲ್ಲಿ ಬಾರೀ ಪ್ರಮಾಣದ ಸಿಂಥೆಟಿಕ್ ಡ್ರಗ್ಸ್ ಪ್ಯಾಕೆಟ್ ತಯಾರು ಮಾಡುತ್ತಿದ್ದ ಘಟಕದ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಪ್ರಕರಣವನ್ನು ಭೇದಿಸಿದ್ದಾರೆ.


ಹುಣಸೂರು ನಗರದ ರಹಮತ್ ಮೊಹಲ್ಲಾದ ಇರ್ಫಾನ್ ಎಂಬುವವರಿಗೆ ಸೇರಿದ ತೋಟದಲ್ಲಿ ಈ ಕೃತ್ಯ ನಡೆದಿದ್ದು, ಸುಮಾರು ೨೫ ಕೆ.ಜಿ.ಗೂ ಹೆಚ್ಚು ಸಿಂಥೆಟಿಕ್ಸ್ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.


ತೋಟದ ಮಾಲಿಕ ಹುಣಸೂರಿನ ಇರ್ಫಾನ್ ಹಾಗೂ ಮೈಸೂರಿನ ಇರ್ಫಾನ್ ಎಂಬಾತ ಸೇರಿಕೊಂಡು ಈ ದುಷ್ಕೃತ್ಯ ನಡೆಸಿದ್ದಾರೆಂದು ತಿಳಿದು ಬಂದಿದ್ದು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದವರನ್ನು ಸುಮಾರು ೧೦ ಕಿ.ಮೀ.ವರೆಗೆ ಚೇಸ್ ಮಾಡಿ ನಗರಕ್ಕೆ ಸಮೀಪದ ಸಲೀಂ ಪ್ಯಾಲೆಸ್ ಬಳಿ ಬಂಧಿಸಿದ್ದಾರೆ.


ವಿಷಯ ತಿಳಿದು ಸ್ಥಳಕ್ಕೆ ಎಸ್.ಪಿ.ಮಲ್ಲಿಕಾರ್ಜುನ ಬಾಲದಂಡಿ, ಡಿ.ವೈ.ಎಸ್.ಪಿ ರವಿ ಭೇಟಿ ಇತ್ತು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟದ ಮಾಲಿಕ ಇರ್ಫಾನ್‌ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟೆ ಹೆಚ್ಚಿನ ಮಾಹಿತಿ ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಲಾಡ್ಜ್ ಒಂದರಲ್ಲಿ ತಂಗಿದ ಖದೀಮರು ಪರಾರಿ
ರತ್ನಪುರಿ ಲಾಡ್ಜ್ ಒಂದರಲ್ಲಿ ಹೊರ ರಾಜ್ಯದ ನಾಲ್ವರು ಕೆಲದಿನಗಳಿಂದ ರೂಂ ಮಾಡಿಕೊಂಡಿದ್ದವರು, ಪೊಲೀಸರು ತೋಟಕ್ಕೆ ದಾಳಿ ನಡೆಸುತ್ತಿದ್ದಂತೆ ನಾಪತ್ತೆಯಾಗಿದ್ದಾರೆ. ಇವರು ಈ ಪ್ರಕರಣದಲ್ಲಿ ಶಾಮಿಲು ಆಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


ಡ್ರಗ್ಸ್ ಜಾಲ ಹಳ್ಳಿಗಳಿಗೂ ಪಸರಿಸಿ ಇರುವುದು ಆತಂಕಕ್ಕೀಡು ಮಾಡಿದು, ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೆ ಪದೇ ಪದೇ ಡ್ರಗ್ಸ್ ಪತ್ತೆಯಾಗುತ್ತಿರುವುದು ರಾಜ್ಯಕ್ಕೆ ಕಳಂಕವಾಗಿದೆ.