ಬಸ್‌ಗೆ ಬೆಂಕಿ ೨೦ ಸಾವು

ಆಂಧ್ರ ಪ್ರದೇಶದಲ್ಲಿ ಕರ್ನೂಲಿನಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಖಾಸಗಿ ಬಸ್ ಸಂಪೂರ್ಣ ಸುಟ್ಟು ಕರಕಲಾಗಿರುವುದು.

ಕರ್ನೂಲ್,ಅ.೨೪-ಹೈದರಾಬಾದ್‌ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕಾವೇರಿ ಟ್ರಾವೆಲ್ಸ್ ಗೆ ಸೇರಿದ ಐಷಾರಾಮಿ ವೋಲ್ವೋ ಬಸ್ ಇಂದು ನಸುಕಿನಲ್ಲಿ ಜಿಲ್ಲೆಯಲ್ಲಿ ಬೆಂಕಿಗಾಹುತಿಯಾಗಿ ೨೦ ಮಂದಿ ಸಜೀವ ದಹನಗೊಂಡು ಹಲವರು ಗಾಯಗೊಂಡಿದ್ದಾರೆ.


ಕರ್ನೂಲ್ ಉಪನಗರ ಚಿನ್ನಟೇಕೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ೪೪ ರಲ್ಲಿ ವೇಮುರಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ವೋಲ್ವೋ ಬಸ್ ಬೆಂಕಿಗಾಹುತಿಯಾಗಿ ಬಸ್‌ನಲ್ಲಿದ್ದ ೪೧ ಮಂದಿಯಲ್ಲಿ, ೨೦ಕ್ಕೂ ಹೆಚ್ಚು ಮಂದಿ ಸಜೀವ ದಹನವಾದರೆ, ೧೯ ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.


ನತದೃಷ್ಟ ಬಸ್ಸಿನಲ್ಲಿ ೩೯ ಮಂದಿ ವಯಸ್ಕರು ಮತ್ತು ಇಬ್ಬರು ಚಿಕ್ಕ ಮಕ್ಕಳು ಸೇರಿ ೪೧ ಜನ ಇದ್ದರು. ಈವರೆಗೆ ೧೧ ಶವಗಳನ್ನು ಹೊರತೆಗೆಯಲಾಗಿದ್ದು, ಅವರನ್ನು ಗುರುತಿಸುವ ಪ್ರಕ್ರಿಯೆ ಮುಂದುವರೆದಿದೆ. ಸುರಕ್ಷಿತವಾಗಿರುವ ೧೯ ಜನರನ್ನು ಗುರುತಿಸಲಾಗಿದ್ದು, ಅವರಲ್ಲಿ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಐಜಿ ಪ್ರವೀಣ್ ಮಾಹಿತಿ ನೀಡಿದ್ದಾರೆ.


ರಾತ್ರಿ ೧೦.೩೦ಕ್ಕೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್‌ಗೆ ಕರ್ನೂಲ್ ನಗರದ ಹೊರವಲಯದಲ್ಲಿರುವ ಉಲಿಂದಕೊಂಡ ಬಳಿ ನಸುಕಿನ ೩.೩೦ರ ವೇಳೆ ಹಿಂದಿನಿಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಬಸ್‌ನ ಕೆಳಗೆ ಹೋಗಿ ಇಂಧನ ಟ್ಯಾಂಕ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಬಸ್ ಸುಟ್ಟು ಕರಕಲಾಗಿದೆ.


ಗಾಢ ನಿದ್ರೆಯಲ್ಲಿದ್ದ ಪ್ರಯಾಣಿಕರು ಎಚ್ಚರಗೊಂಡು, ಕೆಲವರು ಸಹಾಯಕ್ಕಾಗಿ ಕಿರುಚಿಕೊಂಡು, ಬಸ್ಸಿನ ತುರ್ತು ಬಾಗಿಲು ಮುರಿದು ಹೊರಬಂದರೆ, ಇನ್ನೂ ಹಲವರು ಬೆಂಕಿಯಲ್ಲಿ ಸಿಲುಕಿಕೊಂಡು ಸಜೀವ ದಹನವಾಗಿದ್ದಾರೆ.


ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಕರ್ನೂಲ್ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಡೀ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿದ್ದು, ಹೆಚ್ಚಿನ ಪ್ರಯಾಣಿಕರು ಹೈದರಾಬಾದ್ ನಗರದವರಾಗಿದ್ದಾರೆ.


ಅಪಘಾತ ನಡೆದ ತಕ್ಷಣ ಬಸ್ ಚಾಲಕ ಹಾಗೂ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದು, ಬೈಕ್ ಸವಾರ ಕೂಡ ಸಾವನ್ನಪ್ಪಿದ್ದಾನೆ.


ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಬರುತ್ತಿದ್ದ ಹೈಮಾ ರೆಡ್ಡಿ, ಬಸ್‌ಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿ ಬಸ್ ನಿಲ್ಲಿಸಿದ್ದಾರೆ. ನಂತರ ಪೊಲೀಸರಿಗೂ ಮಾಹಿತಿ ನೀಡಿದ್ದು, ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡರು.


ಸ್ಥಳೀಯರ ಮಾಹಿತಿ ಆಧರಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ರಕ್ಷಣಾ ಪರಿಹಾರ ಕಾರ್ಯಾಚರಣೆ ಕೈಗೊಂಡರು. ಆದರೆ ಅದಾಗಲೇ ತೀವ್ರ ಬೆಂಕಿಯಿಂದಾಗಿ ಬಸ್ ಸಂಪೂರ್ಣವಾಗಿ ಸುಟ್ಟುಹೋಗಿತ್ತು.


ರಾಮಿ ರೆಡ್ಡಿ, ವೇಣುಗೋಪಾಲ್ ರೆಡ್ಡಿ, ಸತ್ಯನಾರಾಯಣ, ಶ್ರೀಲಕ್ಷ್ಮಿ, ನವೀನ್ ಕುಮಾರ್, ಅಖಿಲ್, ಜಶ್ಮಿತಾ, ಅಕಿರಾ, ರಮೇಶ್, ಜಯಸೂರ್ಯ ಮತ್ತು ಸುಬ್ರಮಣಿಯಂ ಅಪಘಾತದಲ್ಲಿ ಬದುಕುಳಿದರು. ಹಿಂದೂಪುರದ ನವೀನ್ ತಮ್ಮ ಕಾರಿನಲ್ಲಿ ಆರು ಗಾಯಾಳುಗಳನ್ನು ಕರ್ನೂಲ್ ಆಸ್ಪತ್ರೆಗೆ ಕರೆದೊಯ್ದರು. ಘಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.


ಸಿಎಂ ನಾಯ್ಡು ಆಘಾತ:


ಘಟನೆ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಘಾತ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಕ್ಷಣ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದು, ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಮತ್ತು ಮೃತರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡುವಂತೆ ನಿರ್ದೇಶಿಸಿದ್ದಾರೆ.

ಡಿಕ್ಕಿ ಹೊಡೆದ ಬೈಕ್ ಬಸ್ ಇಂಜಿನ್ ಗೆ ಸಿಲುಕಿ ಬೆಂಕಿ


ವೋಲ್ವೋ ಬಸ್ ಗೆ ಹಿಂದಿನಿಂದ ವೇಗವಾಗಿ ಬಂದ ಬೈಕ್‌ಗೆ ಡಿಕ್ಕಿ ಹೊಡೆದು ಬಸ್ ಅಡಿ ನುಗ್ಗಿ ಇಂಜಿನ್ ಬಳಿ ಸಿಲುಕಿ ನೆಲಕ್ಕೆ ಉಜ್ಜಿದ್ದರಿಂದ ಬೆಂಕಿ ಹೊತ್ತಿಕೊಂಡು ಚಾಲಕನ ಗಮನಕ್ಕೆ ಬರುವಷ್ಟರಲ್ಲಿ ಇಡೀ ಬಸ್ ಅನ್ನೇ ಆವರಿಸಿದ್ದು,ಅದಾಗಲೇ ಬೈಕ್ ಸವಾರ ಮೃತಪಟ್ಟಿದ್ದನು.


ಬೈಕ್ ಡಿಕ್ಕಿ ಹೊಡೆದ ಸ್ಥಳದಲ್ಲೇ ಬಸ್ ನಿಲ್ಲಿಸಿದ್ದರೆ,ಇಷ್ಟೊಂದು ಪ್ರಮಾಣದ ಸಾವು ನೋವು ಸಂಭವಿಸುತ್ತಿರಲಿಲ್ಲ. ಬಸ್ ಚಾಲಕ ಬದಲಿ ಚಾಲಕನನ್ನು ಎಬ್ಬಿಸಿ ಪ್ರಯಾಣಿಕರನ್ನು ಬಸ್‌ನಿಂದ ಕೆಳಗೆ ಇಳಿಸುವ ಪ್ರಯತ್ನ ಮಾಡಿದರೂ ಇಂಜಿನ್ ಗೆ ಬೆಂಕಿ ತಗುಲಿದ್ದರಿಂದ,ಕೆಲವೇ ನಿಮಿಷಗಳಲ್ಲಿ ಇಡೀ ಬಸ್ ಆವರಿಸಿದೆ
ಮುಚ್ಚಿದ್ದ ಕಿಟಕಿಗಳನ್ನು ಒಡೆದು ಪ್ರಯಾಣಿಕರನ್ನು ಹೊರತರಲಾಯಿತು. ಅಷ್ಟರೊಳಗೆ ಹಲವು ಪ್ರಯಾಣಿಕರು ಉಸಿರುಚೆಲ್ಲಿದ್ದಾರೆ,
ಪ್ರತ್ಯಕ್ಷದರ್ಶಿಗಳು ಹೇಳುವಂತೆ ಬೆಂಕಿ ಎಷ್ಟು ಬೇಗನೆ ಹರಡಿತೆಂದರೆ, ಹೆಚ್ಚಿನ ಪ್ರಯಾಣಿಕರು ಏನಾಗುತ್ತಿದೆ ಎಂದು ಅರಿತುಕೊಳ್ಳುವ ಮೊದಲೇ ಬೆಂಕಿಯಲ್ಲಿ ಬೆಂದುಹೋಗಿದ್ದಾರೆ,ಕೆಲವರು ಸುಟ್ಟಗಾಯಗಳಿಂದ ಮತ್ತೆ ಕೆಲವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.


ಅಗ್ನಿಶಾಮಕ ದಳ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಲು ಮತ್ತು ಅವಶೇಷಗಳನ್ನು ಹೊರತೆಗೆಯಲು ಹೆಣಗಾಡಿದವು. ಅಧಿಕಾರಿಗಳು ಇನ್ನೂ ಸಾವಿನ ಸಂಖ್ಯೆಯನ್ನು ದೃಢಪಡಿಸಿಲ್ಲ.

೧೬ ಬಾರಿ ಸಂಚಾರ ಉಲ್ಲಂಘನೆ


ಬೆಂಕಿಗಾಹುತಿಯಾದ ಬಸ್ ಮೇಲೆ ೧೬ ಚಲನ್ ಗಳಿದ್ದು, ೨೩,೧೨೦ ರೂ ದಂಡ ಬಾಕಿ ಇದೆ. ಈ ಬಸ್ ಜನವರಿ ೨೭, ೨೦೨೪ ರಿಂದ ಅಕ್ಟೋಬರ್ ೯, ೨೦೨೫ ರವರೆಗೆ ೧೬ ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ. ಪ್ರವೇಶ ನಿಷೇಧಿತ ವಲಯವನ್ನು ಒಂಬತ್ತು ಬಾರಿ ಪ್ರವೇಶಿಸಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಜೊತೆಗೆ ಅತಿ ವೇಗ ಮತ್ತು ಅಪಾಯಕಾರಿ ಚಾಲನಾ ಉಲ್ಲಂಘನೆಗಾಗಿ ಚಲನ್‌ಗಳನ್ನು ಸಹ ನೀಡಲಾಗಿತ್ತು
ಈ ಬಸ್ ಡಿಡಿ೦೧ ಎನ್ ೯೪೯೦ ಸಂಖ್ಯೆಯೊಂದಿಗೆ ನೋಂದಾಯಿಸಲಾಗಿದೆ ಎಂದು ಆಂಧ್ರಪ್ರದೇಶ ಸಾರಿಗೆ ಇಲಾಖೆ ಬಹಿರಂಗಪಡಿಸಿದೆ. ಜೊತೆಗೆ ಬಸ್ ಫಿಟ್ ಆಗಿತ್ತು. ಆದರೆ ಬೈಕ್‌ಗೆ ಜೊತೆಗಿನ ರಭಸದ ಡಿಕ್ಕಿಯಿಂದಾಗಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಒಂದೇ ಕುಟುಂಬದ ನಾಲ್ವರು ಸಾವು


ಬಸ್ ಸುಟ್ಟು ಕರಕಲಾದ ದುರಂತದಲ್ಲಿ ಒಂದೇ ಕುಟುಂಬದ ನಾಲ್ವರು ಸಜೀವ ದಹನವಾಗಿದ್ದಾರೆ. ನೆಲ್ಲೂರ್ ಜಿಲ್ಲೆಯ ಗೊಲ್ಲಾವರಿಪಲ್ಲಿಯ ಗೊಲ್ಲಾ ರಮೇಶ್ (೩೫), ಅನುಷಾ (೩೦), ಮನ್ವಿತಾ (೧೦) ಮತ್ತು ಮನಿಶ್ (೧೨) ಮೃತ ಕುಟುಂಬಸ್ಥರು .

ಬಸ್ಸಿನಲ್ಲಿದ್ದ ಪ್ರಯಾಣಿಕರು:


ಅಶ್ವಿನ್ ರೆಡ್ಡಿ (೩೬), ಜಿ. ಧಾತ್ರಿ (೨೭), ಕೀರ್ತಿ (೩೦), ಪಂಕಜ್ (೨೮), ಯುವನ್ ಶಂಕರ್ ರಾಜು (೨೨), ತರುಣ್ (೨೭), ಆಕಾಶ್ (೩೧), ಗಿರಿರಾವ್ (೪೮), ಬುನಾ ಸಾಯಿ (೩೩), ಗಣೇಶ್ (೩೦), ಜಯಂತ್ ಪುಷ್ವಾಹ (೨೭), ಪಿಲ್ವಾಮಿನ್ ಬೇಬಿ (೬೪), ಕಿಶೋರ್ ಕುಮಾರ್ (೪೧), ರಮೇಶ್ (೩೦), ಅನುಷಾ (೨೨), ಮೊಹಮ್ಮದ್ (೫೧), ದೀಪಕ್ ಕುಮಾರ್ (೨೪), ಆಂದೋಜ್ ನವೀನ್ ಕುಮಾರ್ (೨೬), ಪ್ರಶಾಂತ್ (೩೨), ಎಂ. ಸತ್ಯನಾರಾಯಣ (೨೮), ಮೇಘನಾಥ್ (೨೫), ವೇಣು ಗುಂಡ (೩೩), ಚರಿತ್ (೨೧), ಚಂದನಾ ಮಂಗಾ (೨೩), ಸಂಧ್ಯಾರಾಣಿ ಮಂಗಾ (೪೩), ಗ್ಲೋರಿಯಾ ಎಲ್ಲೆಸಾ ಶ್ಯಾಮ್ (೨೮), ಸೂರ್ಯ (೨೪), ಹರಿಕಾ (೩೦), ಶ್ರೀಹರ್ಷ (೨೪), ಶಿವ (೨೪), ಶ್ರೀನಿವಾಸ ರೆಡ್ಡಿ (೪೦), ಸುಬ್ರಹ್ಮಣ್ಯಂ (೨೬), ಕೆ.ಅಶೋಕ್ (೨೭), ಎಂ.ಜಿ. ರಾಮರೆಡ್ಡಿ (೫೦), ಉಮಾಪತಿ (೩೨), ಅಮೃತ್ ಕುಮಾರ್ (೧೮), ವೇಣುಗೋಪಾಲ್ ರೆಡ್ಡಿ (೨೪)

೨೦ ಶವಗಳು ಹೊರಕ್ಕೆ


ಬಸ್ಸಿನಲ್ಲಿ ಒಟ್ಟು ೪೩ ಜನರಿದ್ದರು. ಈ ಪೈಕಿ ೪೧ ಪ್ರಯಾಣಿಕರು ಮತ್ತು ಇಬ್ಬರು ಚಾಲಕರು. ೪೧ ಪ್ರಯಾಣಿಕರಲ್ಲಿ ೩೯ ವಯಸ್ಕರು ಮತ್ತು ಇಬ್ಬರು ಚಿಕ್ಕ ಮಕ್ಕಳು. ಈ ಪೈಕಿ ೧೦ ಮಹಿಳೆಯರಿದ್ದರು. ಇಲ್ಲಿಯವರೆಗೆ, ವಿಧಿವಿಜ್ಞಾನ ತಂಡವು ಬಸ್ಸಿನಿಂದ ೨೦ ಶವಗಳನ್ನು ಹೊರತೆಗೆದಿದ್ದು, ಅವರನ್ನು ಗುರುತಿಸುವ ಪ್ರಕ್ರಿಯೆ ಮುಂದುವರೆದಿದೆ.

ಸುರಕ್ಷಿತವಾಗಿರುವ ೧೯ ಜನರನ್ನು ಗುರುತಿಸಲಾಗಿದೆ ಮತ್ತು ಅವರಲ್ಲಿ ಹಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಐಜಿ ಕೋಯ ಪ್ರವೀಣ್ ಅವರು ಮಾಹಿತಿ ನೀಡಿದ್ದಾರೆ

೨ ಲಕ್ಷ ರೂ. ಪರಿಹಾರ


ಕರ್ನೂಲ್‌ನಲ್ಲಿ ಖಾಸಗಿ ಬಸ್ ಬೆಂಕಿ ಹೊತ್ತಿಕೊಂಡು ಮೃತಪಟ್ಟ ೨೦ ಮಂದಿ ಕುಟುಂಬ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ತಲಾ ಎರಡು ಲಕ್ಷ ರೂ. ಪರಿಹಾರ ಪ್ರಕಟಿಸಿದ್ದಾರೆ.


ಈ ಕುರಿತು ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಘಟನೆಯ ಬಗ್ಗೆ ತೀವ್ರ ಸಂತಾಪ ವ್ಯಕ್ತಪಡಿಸಿ, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

ಗಣ್ಯರ ಕಂಬನಿ


ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಬಸ್ ಅಗ್ನಿದುರಂತದಲ್ಲಿ ಮೃತಪಟ್ಟವರಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಗಣ್ಯರು ದುಃಖ ವ್ಯಕ್ತಪಡಿಸಿದ್ದಾರೆ.


ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಲವರು ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿ, ಮೃತಪಟ್ಟವರ ಕುಟುಂಬಕ್ಕೆ ಸಾಂತ್ವಾನ ಹೇಳಿ ಗಾಂiiಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದಾರೆ.

೨೪ ಲೀಡ್ ಬಾಕ್ಸ್

ಬೆಂಗಳೂರಿನ ಯುವತಿ ಸಜೀವ ದಹನ


ಆಂಧ್ರಪ್ರದೇಶದ ಕರ್ನೂಲ್ ನಲ್ಲಿ ಸಂಭವಿಸಿದ ಖಾಸಗಿ ಬಸ್ ಅಗ್ನಿ ದುರಂತದಲ್ಲಿ ಬೆಂಗಳೂರಿನ ೨೨ ವರ್ಷದ ಯುವತಿ ಸಜೀವ ದಹನವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.


ಯಾದ್ರಾದಿಯ ನಿವಾಸಿ ೨೨ ವರ್ಷದ ಅನುಷಾ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಿ ನಿನ್ನೆ ರಾತ್ರಿ ಬಸ್ ಹತ್ತಿದ್ದರು.


ಇಂದು ಮುಂಜಾನೆ ಕರ್ನೂಲ್ ಹೊರವಲಯದ ಉಳಿಂದಪಾಡು ಎಂಬಲ್ಲಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಬೆಂಕಿಗೆ ಆಹುತಿಯಾಗಿದ್ದು, ಮೃತಪಟ್ಟವರ ಸಂಖ್ಯೆ ೨೦ಕ್ಕೆ ಏರಿಕೆಯಾಗಿದೆ ಎಂದು ವರದಿಯಾಗಿದೆ.


ಘಟನೆಯಲ್ಲಿ ಮೃತಪಟ್ಟ ೧೧ ಜನರ ಗುರುತು ಪತ್ತೆ ಹಚ್ಚಲಾಗಿದೆ. ಎಂದು ಜಿಲ್ಲಾಧಿಕಾರಿ ಡಾ. ಎ. ಸಿರಿ ದೃಢಪಡಿಸಿದ್ದಾರೆ, ಇಬ್ಬರೂ ಚಾಲಕರು ಬಸ್ನಿಂದ ಸುರಕ್ಷಿತವಾಗಿ ಹೊರಬರುವಲ್ಲಿ ಯಶಸ್ವಿಯಾದರು ಮತ್ತು ಎಲ್ಲಾ ೧೧ ಶವಗಳನ್ನು ಗುರುತಿಸಲಾಗಿದೆ.


ಅಪಘಾತ ಸಂಭವಿಸಿದಾಗ ವಿ ಕಾವೇರಿ ಟ್ರಾವೆಲ್ಸ್ ಬಸ್ ಸುಮಾರು ೪೦ ಪ್ರಯಾಣಿಕರು ಮತ್ತು ಇಬ್ಬರು ಚಾಲಕರೊಂದಿಗೆ ಹೈದರಾಬಾದ್ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿತ್ತು. ಡಿಕ್ಕಿಯ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಹಲವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ಪ್ರಯಾಣಿಕರು ೩೫ ರಿಂದ ೪೦ ವರ್ಷ ವಯಸ್ಸಿನವರಾಗಿದ್ದರು ಮತ್ತು ಹಲವರು ತುರ್ತು ಕಿಟಕಿಗಳನ್ನು ಮುರಿದು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.