Home ಮುಖಪುಟ ಸುದ್ದಿ ಎಇಇ ಅಜಯಸಿಂಗ್ ಬಳಿ ೧೪ ಕೋಟಿ ಅಕ್ರಮ ಆಸ್ತಿ ಪತ್ತೆ

ಎಇಇ ಅಜಯಸಿಂಗ್ ಬಳಿ ೧೪ ಕೋಟಿ ಅಕ್ರಮ ಆಸ್ತಿ ಪತ್ತೆ

ಬೆಳಗಾವಿ,ಏ.೧೧- ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅಜಯಸಿಂಗ್ ರಜಪೂತಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ಲೋಕಾಯುಕ್ತ ದಾಳಿಯಲ್ಲಿ ೧೪ ಕೋಟಿ ರೂಗಳಿಗೂ ಅಧಿಕ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.


ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಏಪ್ರಿಲ್ ೯ರಂದು ಆಂಜನೇಯ ನಗರದ ಮನೆ, ಕಚೇರಿ, ಬ್ಯಾಂಕ್ ಲಾಕರ್ ಸೇರಿದಂತೆ ಸೇರಿದಂತೆ ಒಟ್ಟು ಏಳು ಕಡೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳು ಶೋಧ ನಡೆಸಿದ್ದರು. ದಾಳಿ ಅಂತ್ಯಗೊಂಡಿದ್ದು, ಈ ವೇಳೆ ಏನೆಲ್ಲಾ ಆಸ್ತಿ ಪತ್ತೆಯಾಗಿದೆ ಎಂಬುದರ ಕುರಿತು ಬೆಳಗಾವಿ ಲೋಕಾಯುಕ್ತ ಎಸ್‌ಪಿ ಪ್ರಕಟಣೆ ಹೊರಡಿಸಿದ್ದಾರೆ.


ಆಸ್ತಿ ವಿವರ: ಅಧಿಕಾರಿಯ ಪರಿಶೀಲನೆ ಸಂದರ್ಭದಲ್ಲಿ ೫ ಕೆಜಿ ೯೬೦ ಗ್ರಾಂ ಚಿನ್ನಾಭರಣ, ೫ ಕೆಜಿ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ಇದಲ್ಲದೇ ೩.೧೨ ಕೋಟಿ ರೂಪಾಯಿ ಬ್ಯಾಂಕ್ ಠೇವಣಿ ಇಟ್ಟಿರುವುದು ಬೆಳಕಿಗೆ ಬಂದಿದೆ. ಬೆಳಗಾವಿಯಲ್ಲಿ ೩ ಮನೆಗಳು. ಸವದತ್ತಿ, ಹುಕ್ಕೇರಿ ಹಾಗೂ ಹುಬ್ಬಳ್ಳಿಯಲ್ಲಿ ೫ ನಿವೇಶನಗಳನ್ನು ಅಜಯಸಿಂಗ್ ಖರೀದಿಸಿರುವುದು ದಾಖಲೆಗಳಿಂದ ಕಂಡುಬಂದಿದೆ. ಮನೆಯಲ್ಲಿ ಜೊತೆಗೆ ಕಾರುಗಳು ಮತ್ತು ಬೈಕ್ ಸೇರಿ ೧೪ ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ಪತ್ತೆಯಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.


ಲೋಕಾಯುಕ್ತ ಅಧಿಕಾರಿಗಳು ನೀಡಿದ ಅಧಿಕೃತ ಮಾಹಿತಿ ಪ್ರಕಾರ, ಅಜಯಸಿಂಗ್ ಅವರು ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಸದ್ಯಕ್ಕೆ ಎಲ್ಲಾ ದಾಖಲೆಗಳು ಮತ್ತು ನಗದನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.


ಇತ್ತೀಚೆಗೆ, ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ೮ ಸರ್ಕಾರಿ ನೌಕರರ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ಅಕ್ರಮ ಚರ ಹಾಗೂ ಸ್ಥಿರಾಸ್ತಿಗಳನ್ನು ಪತ್ತೆ ಮಾಡಿದ್ದರು.