
ಸಂಜೆವಾಣಿ ವಾರ್ತೆ
ಹುಣಸೂರು, ಜು.22:– ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ ಸರಳ ಪತ್ರಿಕಾ ದಿನಾಚರಣೆಯನ್ನು ಗಿಡಕ್ಕೆ ನೀರು ಹಾಕುವ ಮೂಲಕ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಉದ್ಘಾಟಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಉದ್ಘಾಟನಾ ಭಾಷಣ ಮಾಡಿದ ವಿಶ್ವನಾಥ್ ಅವರು ಇಂದು ಸಮಾಜದ ಎಷ್ಟೋ ಕ್ರಾಂತಿಕಾರಿ ಕಾರ್ಯಗಳ ಉಗಮಕ್ಕೆ ಪತ್ರಕರ್ತರ ಪಾತ್ರವೂ ಅನನ್ಯವಾದದ್ದು, ಎಲ್ಲಿವರೆಗೂ ಪತ್ರಕರ್ತರು ಸುಭದ್ರವಾಗಿರುತ್ತಾರೋ ಅಲ್ಲಿವರೆಗೆ ಸಮಾಜ ಸುಭದ್ರವಾಗಿರುತ್ತದೆ ಎಂದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ಮಾತನಾಡಿ ಪ್ರಸ್ತುತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದಿಂದ ಪತ್ರಕರ್ತರಿಗೂ ಕಂಟಕ ಏರ್ಪಟ್ಟಿದ್ದು, ಇದನ್ನು ಮೀರಿ ವಿಭಿನ್ನವಾಗಿ ನಮ್ಮ ಆಲೋಚನೆಗಳನ್ನು ಮಾರ್ಪಾಡು ಮಾಡಿಕೊಂಡು ನಮ್ಮ ವೃತ್ತಿಪರತೆಯಲ್ಲಿ ಅಳವಡಿಸಿಕೊಳ್ಳುವ ಅನಿವಾರ್ಯತೆ ಏರ್ಪಟ್ಟಿದೆ ಎಂದರು.
ನಂತರ ಮಾತನಾಡಿದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ ಸಮಾಜದಲ್ಲಿ ಸ್ವಾಸ್ಥ ಹದಗೆಟ್ಟಾಗ ಮಾತ್ರ ಅದನ್ನು ಪತ್ರಕರ್ತರ ತಲೆಗೆ ಕಟ್ಟುವ ಸಮಾಜ, ಪತ್ರಕರ್ತನ ಹಾಗೂ ಅವರ ಕುಟುಂಬದ ಸ್ವಾಸ್ಥದ ಬಗ್ಗೆ ಕಾಳಜಿ ವಹಿಸದೆ ಇರುವುದು ದುರಂತ. ಪತ್ರಿಕೆಗಳು ದಿನಗಳಂತೆ ತನ್ನ ಪ್ರಸರಣ ಸಂಖ್ಯೆಯನ್ನು ಕಳೆದುಕೊಳ್ಳುತ್ತಿದೆ ಓದುಗರು ಕೂಡ ಡಿಜಿಟಲ್ ಮಾಧ್ಯಮಕ್ಕೆ ಮಾರುಹೋಗಿದ್ದಾರೆ ಇಂತಹ ದುಸ್ಥಿತಿಯಲ್ಲಿ ಪತ್ರಕರ್ತರು ನಿರ್ಭಯವಾಗಿ ಹೇಗೆ ಕಾರ್ಯನಿರ್ವಹಿಸುವುದು ಎಂದು ಆತಂಕ ವ್ಯಕ್ತಪಡಿಸಿದ ಅವರು, ಸರ್ಕಾರಗಳು ಪತ್ರಕರ್ತರ ನಿರ್ಭಯ ಕಾರ್ಯನಿರ್ವಣೆಗೆ ಅನುವು ಮಾಡಿಕೊಡುವುದರ ಜೊತೆಗೆ ಅವರ ಕುಟುಂಬದ ಜವಾಬ್ದಾರಿಗಳಿಗೆ ಸ್ಪಂದಿಸುವಂತಹ ಕಾರ್ಯಕ್ರಮಗಳನ್ನು ರೂಪಿಸುವಂತೆ ಒತ್ತಾಯಿಸಿದರು.
ದಿನೇ ದಿನೇ ಪತ್ರಿಕೆಗಳು ನಶಿಸಿ ಹೋಗುತ್ತಿರುವ ಇಂತಹ ಸಂದರ್ಭದಲ್ಲಿ ಪತ್ರಕರ್ತರು ಕೂಡ ಇದನ್ನೇ ನೆಚ್ಚಿಕೊಳ್ಳದೆ ತಮ್ಮ ಆರ್ಥಿಕ ಬಲವರ್ಧನೆಗೆ ಪರ್ಯಾಯ ಮಾರ್ಗ ಹುಡುಕುವ ಅನಿವಾರ್ಯತೆ ಇದೆ ಎಂದರು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್ ಆರ್ ಕೃಷ್ಣಕುಮಾರ್ ಸಂಘದ ಅಭಿವೃದ್ಧಿ ಹಾಗೂ ಮುಂದಿನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಸ್ತಾವಿಕ ಭಾಷಣದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು ಜೊತೆಗೆ ಹಿರಿಯ ಪತ್ರಕರ್ತರುಗಳಾದ ರಘು, ಹನಗೋಡು ದೀಪು ಹಾಗೂ ಹಿರಿಯ ಪತ್ರಿಕಾ ವಿತರಕರಾದ ಎಚ್.ಎಂ.ವಾಸು ರವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಹುಣಸೂರು ರೋಟರಿ ಸಂಸ್ಥೆಗೆ ಅಧ್ಯಕ್ಷರಾಗಿ ಆಯ್ಕೆಯಾದ ಹುಣಸೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್. ಆರ್. ಕೃಷ್ಣಕುಮಾರ್ ರವರನ್ನು ತಾಲೂಕು ಪತ್ರಕರ್ತರು ಹಾಗೂ ಗಣ್ಯರು ಸನ್ಮಾನಿಸಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಘವೇಂದ್ರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಪದಾಧಿಕಾರಿಗಳಾದ ದಾ.ರಾ. ಮಹೇಶ್, ಹನಗೋಡು ನಟರಾಜ್, ವೆಂಕಟಪ್ಪ ಸೇರಿದಂತೆ ಹಿರಿಯ ಪತ್ರಕರ್ತರುಗಳು ಹಾಗೂ ಪತ್ರಿಕಾ ವಿತರಕರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.