Home ಜಿಲ್ಲೆ ಮಂಗಳೂರು ಹನುಮಗಿರಿ ಬ್ರಹ್ಮಕಲಶೋತ್ಸವ ಆಮಂತ್ರಣಪತ್ರ ಬಿಡುಗಡೆ

ಹನುಮಗಿರಿ ಬ್ರಹ್ಮಕಲಶೋತ್ಸವ ಆಮಂತ್ರಣಪತ್ರ ಬಿಡುಗಡೆ

ಪುತ್ತೂರು: ಹನುಮಗಿರಿ ಕೋದಂಡರಾಮ ಹಾಗೂ ಪ೦ಚಮುಖಿ ಆಂಜನೇಯ ದೇವರಿಗೆ ಏಕಕಾಲದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಎ.೯ ರಿಂದ ೧೨ ರ ತನಕ ನಡೆಯಲಿದ್ದು, ಆಮಂತ್ರಣ ಪತ್ರಿಕೆ ಬಿಡುಗಡೆ, ನೂತನ ವೆಬ್‌ಸೈಟ್ ಲೋಕಾರ್ಪಣೆ ಹಾಗೂ ಚಪ್ಪರ ಮುಹೂರ್ತ ಕಾರ್ಯಕ್ರಮವು ಯುಗಾದಿ ಹಬ್ಬದ ದಿನ ಗುರುವಾರ ಕ್ಷೇತ್ರದಲ್ಲಿ ನಡೆಯಿತು.
ಹಿರಿಯರಾದ ಶ್ರೀಕೃಷ್ಣ ಭಟ್ ಮುಂಡ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕ್ಷೇತ್ರಕ್ಕೆ ಸಂಬಂಧಿಸಿದ ನೂತನ ವೆಬ್‌ಸೈಟನ್ನು ಪ್ರಗತಿಪರ ಕೃಷಿಕ ಸಂತೋಷ್ ರೈ ಇಳಂತಾಜೆ ಅನಾವರಣಗೊಳಿಸಿದರು. ಚಪ್ಪರ ಮುಹೂರ್ತವನ್ನು ಉದ್ಯಮಿ ಜಯಂತ ನಡುಬೈಲು ನೆರವೇರಿಸಿದರು.
ಬಳಿಕ ಶ್ರೀಕೃಷ್ಣ ಭಟ್ ಮುಂಡ್ಯ ಮಾತನಾಡಿ, ಹಿಂದೂ ಸಮಾಜವನ್ನು ಒಟ್ಟುಗೂಡಿಸುವ ಅಭೂತಪೂರ್ವ ಧಾರ್ಮಿಕ ಕಾರ್ಯಕ್ರಮವಾಗಿ ಹನುಮಗಿರಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಭಕ್ತಿ ಶ್ರದ್ಧೆಯೊಂದಿಗೆ ಯೋಗ ಭಾಗ್ಯಗಳ ಸೇರಿಕೆ ಜತೆಗೆ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲಿದೆ ಎಂದರು.
ಅಧ್ಯಕ್ಷತೆ ವಹಿಸಿದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ, ಬ್ರಹ್ಮಕಲಶೋತ್ಸವಕ್ಕೆ ಸಂಬಂಧಪಟ್ಟಂತೆ ೩೦ ಉಪಸಮಿತಿಗಳನ್ನು ಮಾಡಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಕೋಟಿ ರಾಮತಾರಕ ಜಪಯಜ್ಞಕ್ಕೆ ಸಂಬಂಧಿಸಿ ದೀಕ್ಷೆ, ಪಾರಾಯಣ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿದೆ. ಸುಮಾರು ೧೮೦ ಭಜನಾ ತಂಡಗಳೂ ನೋಂದಣಿ ಮಾಡಿದ್ದಾರೆ. ಅಯೋಧ್ಯೆಯಿಂದ ಆಗಮಿಸಲಿರುವ ಶ್ರೀರಾಮನ ಜ್ಯೋತಿಯನ್ನು ಗ್ರಾಮಗಳಲ್ಲಿ ದೇವಾಲಯಗಳಿಗೆ ನೀಡಿ ಅಲ್ಲಿಂದ ಭಕ್ತರು ಮನೆಗಳಿಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಬ್ರಹ್ಮಕಲಶೋತ್ಸವದ ಸಂದರ್ಭ ಸ್ವಯಂ ಸೇವಕರಾಗಿ ಗ್ರಾಮದಿಂದ ಕನಿಷ್ಠ ೫೦ ಮಂದಿ ನೊಂದಾಯಿಸಿಕೊಳ್ಳಬೇಕು. ಕ್ಷೇತ್ರದಲ್ಲೇ ಬಂದು ಭಕ್ತರು ರಾಮತಾರಕ ಜಪ ಮಾಡಬೇಕು ಎಂದು ಮೂಡೆತ್ತಾಯರು ವಿನಂತಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳಾದ ಆರ್.ಸಿ. ನಾರಾಯಣ ರೆಂಜ, ವಿದ್ಯಾ ಆರ್. ಗೌರಿ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಬೂಡಿಯಾರು ರಾಧಾಕೃಷ್ಣ ರೈ, ಸಾಜ ರಾಧಾಕೃಷ್ಣ ಆಳ್ವ, ರವಿಕಿರಣ್ ಶೆಟ್ಟಿ, ವಿದ್ಯಾಧರ ಜೈನ್, ದಿನೇಶ್ ಮೆದು, ರಾಕೇಶ್ ರೈ ಕೆಡೆಂಜಿ, ಸೀತಾರಾಮ ರೈ ಕೆದಂಬಾಡಿಗುತ್ತು, ಚನಿಲ ತಿಮ್ಮಪ್ಪ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೈಲಜಾ ಪ್ರಾರ್ಥಿಸಿದರು. ಧರ್ಮದರ್ಶಿ ಶಿವರಾಮ ಪಿ.ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ನಹುಷ ವಂದಿಸಿದರು. ಶಿಕ್ಷಕ ದೇವಿಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದರು. ೬೨ ಗ್ರಾಮ ಸಮಿತಿಗಳ ಪದಾಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡರು.