
ಪುತ್ತೂರು:ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆಚ್ಚುವರಿಯಾಗಿ ೬ ಡಯಾಲಿಸೀಸ್ ಯಂತ್ರಗಳನ್ನು ಅಳವಡಿಸಲಾಗಿದ್ದು ಮಾ.೩೦ರಂದು ರಾತ್ರಿ ಶಾಸಕ ಅಶೋಕ್ ಕುಮಾರ್ ರೈ ಅವರು ಚಾಲನೆ ನೀಡಿದರು.
ಶಾಸಕನಾಗುವ ಮೊದಲೇ ಡಯಾಲಿಸೀಸ್ ವ್ಯವಸ್ಥೆ ಬಗ್ಗೆ ನಾನು ಕಾಳಜಿ ವಹಿಸಿದ್ದೆ.ಡಯಾಲಿಸೀಸ್ ದೊರೆಯದೇ ಯಾರೂ ಕೂಡ ಬಲಿಯಾಗಬಾರದು ಎಂಬ ಉದ್ದೇಶದಿಂದ ಆರೋಗ್ಯ ಇಲಾಖೆಯ ಆಯುಕ್ತರು, ವೈದ್ಯರಲ್ಲಿ ಚರ್ಚಿಸಿ ತುರ್ತಾಗಿ ೬ ಡಯಾಲಿಸೀಸ್ ಯಂತ್ರಗಳಿಗೆ ಇದೀಗ ಚಾಲನೆ ನೀಡಲಾಗುತ್ತಿದ್ದು ಜನರ ಜೀವ ಉಳಿಸುವುದಕ್ಕಾಗಿ ಇಂದಿನಿಂದಲೇ ಕಾರ್ಯನಿರ್ವಹಿಸಲಿವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಸರಕಾರಿ ಆಸ್ಪತ್ರೆಯಲ್ಲಿ ೧೭ ಡಯಾಲಿಸೀಸ್ ಯಂತ್ರಗಳು ಈಗಾಗಲೇ ಕಾರ್ಯರ್ನಿಹಿಸುತ್ತಿದ್ದು ೧೫೭ ಮಂದಿ ರೋಗಿಗಳು ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.ರಾತ್ರಿ ಹಗಲು ಡಯಾಲಿಸೀಸ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.೪೮ ಮಂದಿ ವೈಟಿಂಗ್
ಲಿಸ್ಟ್ನಲ್ಲಿದ್ದಾರೆ.೬ ಯಂತ್ರಗಳು ಸೇರ್ಪಡೆಗೊಂಡಿದ್ದು ಈಗ ಒಟ್ಟು ೨೩ ಯಂತ್ರಗಳಾಗಿದೆ.ಇದರಿಂದ ವೈಟಿಂಗ್ ಲಿಸ್ಟ್ನಲ್ಲಿರುವ ೪೮ ಜನರಿಗೂ ಉಚಿತ ಸೇವೆ ದೊರೆಯಲಿದೆ.ಖಾಸಗಿಯಾಗಿ ಡಯಾಲಿಸೀಸ್ ಮಾಡಿಸುವುದಾದರೆ ರೂ.೧೬೫೦ ನೀಡಬೇಕಾಗಿದ್ದು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸೀಸ್ ಮಾಡಿಸುವ ರೋಗಿಗಳಿಗೆ ಸರಕಾರವೇ ಒಂದು ಡಯಾಲಿಸೀಸ್ಗೆ ರೂ.೧೫೦೦ ನೀಡುತ್ತಿದ್ದು ಇದು ಬಡವರಿಗೆ ಸರಕಾರ ನೀಡುವ ದೊಡ್ಡ ವರದಾನವಾಗಿದೆ ಎಂದವರು ತಿಳಿಸಿದರು.
ಹಿಂದಿನ ಸರಕಾರದ ಅವಧಿಯಲ್ಲಿ ಡಯಾಲಿಸೀಸ್ ವ್ಯವಸ್ಥಿತವಾಗಿ ನಡೆಯುತ್ತಿರಲಿಲ್ಲ.ಒಂದು ಕಿಟ್ನಲ್ಲಿ ಎರಡು ಮೂರು ಡಯಾಲಿಸೀಸ್ ಮಾಡಲಾಗುತ್ತಿತ್ತು.ಉತ್ತರ ಕರ್ನಾಟಕದವರಿಗೆ ಏಜೆನ್ಸಿ ನೀಡಲಾಗಿದ್ದು ಅವರು ಯಾರ ಮಾತೂ ಕೇಳುತ್ತಿರಲಿಲ್ಲ.ನಮ್ಮ ಸರಕಾರ ಬಂದ ಬಳಿಕ ಹೊಸ ಏಜೆನ್ಸಿ ಮಾಡಿ ಒಂದು ಕಿಟ್ನಲ್ಲಿ ೧ ಡಯಾಲಿಸಿಸ್ ಮಾತ್ರ ಮಾಡಲಾಗುತ್ತಿದೆ ಎಂದು ಹೇಳಿದ ಶಾಸಕರು,ಕಡಬದಲ್ಲಿ ಮೂರು ಯಂತ್ರ ಅಳವಡಿಸಲಾಗಿದ್ದು ಅಲ್ಲಿಂದ ಇಲ್ಲಿ ಬರಬೇಕಾಗಿದ್ದವರಿಗೆ ಇದರಿಂದ ಅನುಕೂಲವಾಗಲಿದೆ.ಅಲ್ಲದೆ ಇಲ್ಲಿನ ಒತ್ತಡವೂ ಕಡಿಮೆಯಾಗಲಿದ್ದು ರಾತ್ರಿ ೧೦ ಗಂಟೆಯ ಒಳಗಡೆ ಸೇವೆ ನೀಡಲು ಪ್ರಯತ್ನಿಸಲಾಗುವುದು.ಹೆಚ್ಚುವರಿಯಾಗಿ ಯಂತ್ರ ಅಳವಡಿಸಲಾಗಿದ್ದು ಡಯಾಲಿಸೀಸ್ಗೆ ರಾತ್ರಿ ಬರುತ್ತಿದ್ದವರಿಗೂ ಒಂದು ತಿಂಗಳಲ್ಲಿ ಪರಿಹಾರ ನೀಡಲಾಗುವುದು ಎಂದರಲ್ಲದೆ, ಸರಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ನಗುಮೊಗದಿಂದ ಖಾಸಗಿ ಆಸ್ಪತ್ರೆಯ ಮಾದರಿಯಲ್ಲಿ ಸೇವೆ ನೀಡುತ್ತಿದ್ದಾರೆ ಎಂದು ಹೇಳಿದರು.
ಸರಕಾರಿ ಆಸ್ಪತ್ರೆಯ ಸುರಕ್ಷಾ ಸಮಿತಿ ಸದಸ್ಯರಾದ ಅರುಣಾ ದಿನಕರ ರೈ, ಸಿದ್ದೀಕ್, ಆಡಳಿತ ವೈದ್ಯಾಧಿಕಾರಿ ಡಾ.ಯದುರಾಜ್,ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪಕ್ಷದ ಪ್ರಮುಖರಾದ ರವೀಂದ್ರ ರೈ ನೆಕ್ಕಿಲು, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಸನತ್ ರೈ, ಜಯಪ್ರಕಾಶ್ ಬದಿನಾರು, ಫಾರೂಕ್ ಬಾಯಬೆ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಡಯಾಲಿಸೀಸ್ಗೆ ಬರುವವರಲ್ಲಿ ಬಹುತೇಕ ಮಂದಿ ಪೈನ್ ಕಿಲ್ಲರ್ ಮಾತ್ರೆ ತಿಂದು ಕಿಡ್ನಿಯನ್ನು ಕಳೆದುಕೊಂಡವರು.ಪೈನ್ ಕಿಲ್ಲರ್ ತಗೊಳ್ಳುವುದರಿಂದ ಆರು ತಿಂಗಳಲ್ಲಿ ಕಿಡ್ನಿ ಹೋಗುತ್ತದೆ.ವೈದ್ಯರ ಸಲಹೆ ಇಲ್ಲದೆ ಯಾರೂ ಪೈನ್ ಕಿಲ್ಲರ್ ಅಥವಾ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು.ತೆಗೆದುಕೊಂಡದ್ದೇ ಆದರೆ ನಂತರ ಜೀವಮಾನವಿಡೀ ಪಶ್ಚಾತ್ತಾಪ ಪಡಬೇಕಾದ ಪರಿಸ್ಥಿತಿ ಬರಲಿದೆ.ಸರ್ಕಾರ ಇದರ ಬಗ್ಗೆ ಅರಿವು ಮೂಡಿಸಬೇಕು.ವೈದ್ಯರ ಸಲಹೆ ಇಲ್ಲದೆ ಸ್ವಂತ ಇಚ್ಚೆಯಲ್ಲಿ ಮೆಡಿಕಲ್ನಿಂದ ಔಷ? ಪಡೆದು ಸೇವಿಸಬಾರದು.
-ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು
























