
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.31: ತಾಲೂಕಿನ ಹರಿಹರಪುರ ಗ್ರಾಮದ ಸರ್ವೆ 24 ರಲ್ಲಿನ ಸರ್ಕಾರಿ ಗೋಮಾಳದಲ್ಲಿ ಗ್ರಾಮದ ಬಲ್ಯಾಢ್ಯರು ರಾತ್ರೋರಾತ್ರಿ ಅಕ್ರಮ ಶೆಡ್ಗಳನ್ನು ಹಾಕಿ ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳುತ್ತಿದ್ದು ತಕ್ಷಣವೇ ಕಾನೂನು ಕ್ರಮ ವಹಿಸಿ ಸರ್ಕಾರಿ ಜಾಗವನ್ನು ಸಂರಕ್ಷಿಸುವಂತೆ ಹರಿಹರಪುರ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಗ್ರಾಮದ ಹೆಚ್.ಟಿ.ನಾರಾಯಣ, ನಿಂಗರಾಜು, ಮಂಜುನಾಥ್ ಸೇರಿದಂತೆ ಹಲವರು ಸರ್ಕಾರಿ ಜಾಗ ಅತಿಕ್ರಮವಾಗುತ್ತಿದ್ದರೂ ಅದರ ಸಂರಕ್ಷಣೆಗೆ ಮುಂದಾಗದ ಹರಿಹರಪುರ ಗ್ರಾಮ ಪಂಚಾಯತಿಯ ಕರ್ತವ್ಯ ಲೋಪವನ್ನು ಖಂಡಿಸಿದ್ದಾರೆ.
ಹರಿಹರಪುರ ಗ್ರಾಮಕ್ಕೆ ಸೇರಿಕೊಂಡಂತೆ ಸರ್ವೆ 24 ರಲ್ಲಿ ಸುಮಾರು ಎರಡು ಎಕರೆ ಸರ್ಕಾರಿ ಗೋಮಾಳವಿದೆ. ಹರಿಹರಪುರ ಗ್ರಾಮದೊಳಗೆ ಹಾದು ಹೋಗಿರುವ ಬೆಂಗಳೂರು-ಜಲಸೂರು ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಕಿರಿದಾದ ಕಟ್ಟಡದಲ್ಲಿ ಗ್ರಾಮ ಪಂಚಾಯತಿ ಕಾರ್ಯನಿರ್ವಹಿಸುತ್ತಿದೆ. ಜಲಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಗ್ರಾಮದಲ್ಲಿನ ವಾರದ ಸಂತೆ ನಡೆಯುತ್ತದೆ. ಗ್ರಾಮ ಪಂಚಾಯತಿಯ ಕಟ್ಟಡ ನಿರ್ಮಾಣಕ್ಕೆ, ಸಂತೆಮಾಳ ಮಾಡಲು ಮತ್ತಿತರ ಸಾರ್ವಜನಿಕ ಉದ್ದೇಶಕ್ಕೆ ಸದರಿ ಸರ್ಕಾರಿ ಗೋಮಾಳವನ್ನು ಕಾಯ್ದಿರಿಸಲಾಗಿದೆ.
ಆದರೆ ಕಳೆದ ಮೂರು ದಿನಗಳಿಂದ ಗ್ರಾಮದ ಬಲ್ಯಾಢ್ಯರು ಸರ್ಕಾರಿ ಗೋಮಾಳಕ್ಕೆ ಲಗ್ಗೆಹಿಟ್ಟಿದ್ದು ತಮಗೆ ಬೇಕಾದಂತೆ ಮೂರು ನಾಲ್ಕು ಕಡೆ ಜಾಗ ಗುರುತಿಸಿಕೊಂಡು ಅಕ್ರಮ ಶೆಡ್ ಗಳನ್ನು ಹಾಕಿಕೊಂಡು ಗ್ರಾಮದ ವಸತಿ ರಹಿತರಿಗೂ ಅವಕಾಶ ನೀಡದೆ ಸಂಪೂರ್ಣ ಎರಡು ಎಕರೆ ಸರ್ಕಾರಿ ಗೋಮಾಳವನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಶೆಡ್ ಹಾಕಲು ಸರ್ಕಾರಿ ಜಾಗದಲ್ಲಿದ್ದ ಬೇವು, ಹುಣಸೆ ಮುಂತಾದ ಹತ್ತಾರು ಮರಗಳನ್ನು ಅಕ್ರಮವಾಗಿ ಕಡಿದು ಸಾಗಿಸಿದ್ದಾರೆ. ಸರ್ಕಾರಿ ಜಾಗ ಅತಿಕ್ರಮಣವಾಗುತ್ತಿದ್ದರೂ ಗ್ರಾಮ ಪಂಚಾಯತಿ ಯಾವುದೇ ಕ್ರಮ ವಹಿಸದೆ ಅಕ್ರಮಕ್ಕೆ ಪರೋಕ್ಷ ಸಹಕಾರ ನೀಡುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ತಕ್ಷಣವೇ ಅಕ್ರಮ ಶೆಡ್ಡುಗಳನ್ನು ತೆರವುಗೊಳಿಸಿ ಸರ್ಕಾರಿ ಭೂಮಿಯ ಸಂರಕ್ಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಸರ್ಕಾರಿ ಜಾಗದ ಅತಿಕ್ರಮಣದ ಬಗ್ಗೆ ಪ್ರತಿಕ್ರಿಯಿಸಿರುವ ಹರಿಹರಪುರ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿ ನಾಹಿದ ಅಕ್ತರ್ ಈ ಹಿಂದೆ ಕೆಲವರು ಸರ್ಕಾರಿ ಜಾಗದಲ್ಲಿ ಅಕ್ರಮ ಮನೆ ಕಟ್ಟಿಕೊಂಡಿದ್ದು ಇದರ ಬಗ್ಗೆ ಮಾನ್ಯ ಲೋಕಾಯುಕ್ತಕ್ಕೆ ಕೆಲವರು ದೂರು ನೀಡಿದ್ದು ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಪ್ರಕರಣ ಲೋಕಾಯುಕ್ತ ತನಿಖೆಯಲ್ಲಿದ್ದರೂ ಕೆಲವರು ಕಳೆದ ಒಂದು ವಾರದ ಹಿಂದೆ ಅಕ್ರಮ ಶೆಡ್ ಹಾಕಿದ್ದಾರೆ. ಅಕ್ರಮ ಶೆಡ್ ಹಾಕಿರುವವರು ಯಾರು ಎನ್ನುವ ಸ್ಪಷ್ಠ ಮಾಹಿತಿ ಇಲ್ಲದ ಕಾರಣ ನಿಮಾಣಗೊಂಡಿರುವ ಅಕ್ರಮ ಶೆಡ್ಡುಗಳ ಮೇಲೆ ತೆರವಿಗೆ ಸೂಚಿಸಿ ನೋಟೀಸ್ ಅಂಟಿಸಲಾಗಿದೆ. ಈ ಬಗ್ಗೆ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಗಳಿಗೂ ಲಿಖಿತ ಮಾಹಿತಿ ನೀಡಿದ್ದು ಅವರು ಈಗಾಗಲೇ ಸ್ಥಳ ಪರಿಶೀಲನೆ ಮಾಡಿದ್ದಾರೆ. ಈ ನಡುವೆ ಸರ್ಕಾರಿ ರಜಾ ಅವಧಿಯನ್ನು ನೋಡಿಕೊಂಡು ಮತ್ತಷ್ಟು ಮಂದಿ ಕಲ್ಲು ಕಂಬಗಳನ್ನು ನೆಟ್ಟು ಅಕ್ರಮ ಶೆಡ್ ನಿರ್ಮಿಸುತ್ತಿರುವ ಮಾಹಿತಿಯಿದೆ. ಇದನ್ನು ಇಲಾಖೆಯ ಮೇಲಧಿಕಾರಿಗಳಿಗೆ ವರದಿ ಮಾಡುತ್ತೇನೆ. ಮೇಲಧಿಕಾರಿಗಳ ಸೂಚನೆಗೆ ಅನುಗುಣವಾಗಿ ಅಕ್ರಮ ಶೆಡ್ಡುಗಳ ತೆರವಿಗೆ ಕ್ರಮ ವಹಿಸುತ್ತೇನೆ ಎಂದಿದ್ದಾರೆ.
ಗ್ರಾಮ ಪಂಚಾಯತಿ ಆಡಳಿತಾಧಿಕಾರಿಗಳಾಗಿರುವ ತಾಲೂಕು ಪಶುವೈದ್ಯ ಇಲಾಖೆಯ ಅಧಿಕಾರಿ ಡಾ.ದೇವರಾಜು ಅಕ್ರಮ ಶೆಡ್ಡುಗಳ ನಿರ್ಮಾಣ ಇದೀಗ ನನ್ನ ಗಮನಕ್ಕೆ ಬಂದಿದೆ. ಸ್ಥಳ ಪರಿಶೀಲನೆ ಮಾಡಿ ಸರ್ಕಾರಿ ಆಸ್ತಿ ಸಂರಕ್ಷಣೆಯ ಬಗ್ಗೆ ಅಗತ್ಯ ಕ್ರಮ ವಹಿಸುತ್ತೇನೆ ಎಂದಿದ್ದಾರೆ.






















