ಸರ್ಕಾರಿ ಜಮೀನು ನುಂಗುವವರ ಮೇಲೆ ಕೇಸು ದಾಖಲಿಸಲು ತನಿಖಾ ಸಮಿತಿ ರಚನೆಗೆ ನಿರ್ಧಾರ

Oplus_19005440

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.23: ನಗರದಲ್ಲಿ 11.5 ಎಕರೆ ವಕ್ಫ್ ಆಸ್ತಿಗೆ ಬಿ.ಖಾತ ನೀಡಿ ಭ್ರಷ್ಟಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದು 15 ದಿನವಾದರೂ ಏಕೆ ಸಂಬಂಧಿತ ಆರೋಪಿಗಳನ್ನು ಅಮಾನತು ಮಾಡಿಲ್ಲ ಎಂದು ರಾಜ್ಯ ಸಭಾ ಸದಸ್ಯ ನಾಸೀರ್ ಹುಸೇನ್ ಪ್ರಶ್ನಿಸಿ. ಸಭೆಯಲ್ಲಿದ್ದ ಕೆ.ಎ.ಎಸ್ ಅಧಿಕಾರಿ ಕಂದಾಯ ವಿಭಾಗದ ನಂದೀಶ್ ಅವರನ್ನು ಸಭೆಯಿಂದ ಹೊರ ಕಳಿಸಿದ ಘಟನೆ ನಡೆಯಿತು.

ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು. ಈದಿನ ಸಂಜೆ ಒಳಗೆ ಆಯುಕ್ತರಿಂದ ಅಮಾನತು ಮಾಡಬೇಕು. ನಿಮ್ಮಿಂದ ಅಧಿಕಾರ ಇಲ್ಲದರ ಬಗ್ಗೆ ಮೇಲಾಧಿಕಾರಿಗಳಿಗೆ ಬರೆಯಿರಿ ಎಂದು ಸೂಚಿಸಿದರು.

ಸದಸ್ಯ ಇಬ್ರಾಹಿಂ ಬಾಬು ಮಾತನಾಡಿ ಕಂದಾಯ ಅಧಿಕಾರಿ ನಂದೀಶ್ ಅವರ ಪಾತ್ರ ಇಲ್ಲ ಎಂದರು.

ಇನ್ನು 32 ಲಕ್ಷ ರೂ ನಗದಲ್ಲಿ ಹಣ ನೀಡಿ ವಕ್ಫ್ ಆಸ್ತಿಯನ್ನು ತಮಗೆ ಮಾಡಿಕೊಳ್ಳಲು ಮುಂದಾದ ಪ್ರಭಾವತಿ ಅವರ ಮೇಲೂ ಕೇಸು ದಾಖಲಿಸಬೇಕೆಂದರು.

ಸರ್ಕಾರದ 46 ಎಕರೆಯನ್ನು ಬಿ.ಖಾತಾ ಮಾಡಿಕೊಂಡಿರುವುದೂ ಕಾನೂನಿನ ಪ್ರಕಾರ ತಪ್ಪಾಗಿದೆ ಇದರ ಮೇಲೆ ಕ್ರಮ ಆಗಬೇಕೆಂದರು.

ಪಾಲಿಕೆಗೆ ಸೇರಿದ ಉದ್ಯಾನವನವನ್ನು ಖಾಸಗಿ ವ್ಯಕ್ತಿ ಅಕ್ರಮವಾಗಿ ತಮ್ಮ ಹೆಸರಿಗೆ ಮಸಡಿಕೊಂಡರೂ ಏಕೆ ಮೌನ ಇದೆಂದು ಸದಸ್ಯ ಕೆ.ಹನುಮಂತಪ್ಪ ಪ್ರಶ್ನಿಸಿದರು.

ಸರ್ಕಾರಿ ಆಸ್ತಿ ಕಬಳಿಕೆ ಬಗ್ಗೆ ಒಂದು ಸಮಿತಿಯಿಂದ ತನಿಖೆ ಆಗಲಿ ಎಂದು ಶಾಸಕ ನಾಗೇಂದ್ರ ಹೇಳಿದರು.

ಸದಸ್ಯ ಪ್ರಭಂಜನ್ ಕುಮಾರ್,  ಪಾಲಿಕೆಯಲ್ಲಿ ಶುಲ್ಕ ಯಾವ ಯಾವ ಅಕೌಂಟ್ ನಲ್ಲಿ ಎಷ್ಟು ಹಣ ಉಳಿದಿದೆ ಎಂಬುದನ್ನು ವಿವರವಾಗಿ ತಿಳಿಸಿದರೆ ಅದನ್ನು ಅಭಿವೃದ್ಧಿ ಕಾಮಗಾರಿಗೆ ಬಳಸಬಹುದು. ಇನ್ನು ಅನುದಾನವನ್ನು ಚೆಕ್ ಗಳಲ್ಲಿ ವಿತರಿಸಿವುದು ಸರಿಯಲ್ಲ ಎಂದರು.

ಪ್ರತಿ ಪಕ್ಷದ ನಾಯಕ ಶ್ರೀನಿವಾಸ್ ಮೋತ್ಕರ್ ಮಾತನಾಡಿ, ಉದ್ಯಾನವನಗಳ ಅಭಿವೃದ್ಧಿಗೆ ಕೇವಲ 25 ಲಕ್ಷ ರೂ ಇಟ್ಟಿರುವುದು ಸಾಕಾಗಲ್ಲ ಹೆಚ್ಚಿಸಿ ಎಂದರು. ಅದಕ್ಕೆ ಆಯುಕ್ತರು ಇತರೇ ಅನುದಾನ ನೀಡಲಿದೆಂದರು.

ಫಾರಂ 2 ನೀಡಿ ಏಕೆ ರದ್ದು ಮಾಡಿದೆಂದು ಸದಸ್ಯ ಇಬ್ರಾಹಿಂ ಬಾಬು ಪ್ರಶ್ನಿಸಿದರು.

ಕಳೆದ ವರ್ಷ ಆಸ್ತಿ ತೆರಿಗೆಯಿಂದ 34 ಕೋಟಿ ರೂ ಸಂಗ್ರಹವಾಗಿದೆ. ಬಿ.ಖಾತಾದಿಂದ 15. ಕೋಟಿ ರೂ ನಿರೀಕ್ಷೆ ಮಾಡಲಾಗಿತ್ತು. ಆದರೆ ಕೇವಲ ಎರೆಡು ಕೋಟಿ ರೂ ಮಾತ್ರ ಸಂಗ್ರಹವಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂಬ ಶಂಕೆ ಇದೆ. ಈ ಬಗ್ಗೆ ವಿಚಾರಣೆ ನಡೆಯಬೇಕು ಎಂದು ಆಗ್ರಹಿಸಿದರು. ಅವ್ಯವಹಾರ ಮಾಡಿದವರ ಮೇಲೆ ಯಾಕೆ ಕ್ರಮ ಆಗುತ್ತಿಲ್ಲ.  ಎಲ್ಲರೂ ಕಮೀಷನ್ ನಲ್ಲಿ ಭಾಗಿಯಾ ಎಂದು ಪ್ರಶ್ನಿಸಿದರು.  ಕಳ್ಳರ ಮೇಲೆ ಏಕೆ ಸಹಾನುಭೂತಿ ತೋರಿಸುತ್ತೀರಿ ಎಂದರು.

ಮಿಲ್ಲರ್ ಪೇಟೆ  ಮಸೀದಿಯ 3 ಎಕರೆ ಲಪಟಾಯಿಸಲು ಮುಂದಾಗಿದೆ. ಈ ಬಗ್ಗೆ ವಕ್ಫ ಅಧಿಕಾರಿ ಮೇಲೆ ಕ್ರಮ ಆಗಬೇಕು. ಕಂದಾಯ ಇಲಾಖೆಯಲ್ಲಿನ ನಕಲಿ ರಸೀದಿಗಳ ಬಗ್ಗೆ ಕಠಿಣ ಕ್ರಮ ಜರುಗಬೇಕು ಎಂದರು.ಇದಕ್ಕೆ ಉತ್ತರಿಸಿದ ಮೇಯರ್ ಗಾದೆಪ್ಪ ತನಿಖೆಗೆ ಸಮಿತಿ ರಚಿಸಲಿದೆಂದು ಹೇಳಿದರು.

ಸುರೇಖ ಮಲ್ಲನಗೌಡ ಮಾತನಾಡಿ, ಡ್ರೈನೇಜ್ ಸಮಸ್ಯೆ ಸದಾ ಇರುತ್ತದೆ ಇದನ್ನು ಶಾಶ್ವತವಾಗಿ  ಬಗೆಹರಿಸಬೇಕು ಎಂದರು.

ಸದಸ್ಯ ಹನುಮಂತ ಗುಡಿಗಂಟಿ ಮಾತನಾಡಿ ತಾಳೂರು ರಸ್ತೆಯ ಹರಿಶ್ಚಂದ್ರ ನಗರದ ಸ್ಮಶಾನ ಅಭಿವೃದ್ಧಿಗೆ ಹಣ ನೀಡಿ ಎಂದರು.

ಕೌಲ್ ಬಜಾರ್ ಪ್ರದೇಶಕ್ಕೂ ಒಂದು ಗ್ಯಾಸ್ ಚಿತಾಗಾರ ನಿರ್ಮಾಣ ಮಾಡಲಿದೆಂದು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಸಭೆಗೆ ಹೇಳಿದರು.

ಸಭೆಯಲ್ಲಿ ಪ್ರಶ್ನೆ ಕೇಳುವ ಧಾವಂತ:

ಪಾಲಿಕೆಯ ಸಭೆ ನಿಗಧಿತವಾಗಿ ನಡೆಯುತ್ತಿಲ್ಲ. 9 ತಿಂಗಳ ನಂತರ ಸಭೆ ನಡೆದಿದ್ದರಿಂದ. ನಾನು ಪ್ರಶ್ನೆ ಕೇಳಬೇಕು ನೀನು ಪ್ರಶ್ನೆ ಕೇಳಬೇಕು ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು. ಪ್ರಶ್ನೆ ಕೇಳುವ ಧಾವಂತ ಎಲ್ಲರಲ್ಲಿ ಇತ್ತು.

ಸರ್ಕಾರಿ ಜಾಗಕ್ಕೆ ಬಿ.ಖಾತಾ:

ನಗರ ಶಾಸಕ ಭರತ್ ರೆಡ್ಡಿ ಮಾತನಾಡಿ. ಅಂದ್ರಾಳಿನಲ್ಲಿ 4 ಎಕರೆ ಸರ್ಕಾರಿ ಜಮೀನನ್ನು ಬಿ.ಖಾತಾ ಮಾಡಲಾಗಿದೆ. ಅದನ್ನು ಖಾಸಗೀ ಲೇಔಟ್ ಮಾಡಿ ಮಾಡಲು ಮುಂದಾಗಿದೆ. ಹೇಗೆ ಎಂದು ಪ್ರಶ್ನಿಸಿದರು. ಯಾರು ಲಾಗಿನ್ ನಿಂದ ಇದು ಆಗಿದೆ ಅವರ ಮೇಲೆ ಕ್ರಮ ಆಗಬೇಕು ಎಂದರು.

ಸದಸ್ಯ ಕೆ.ಎಸ್.ಅಶೋಕ್ ಕುಮಾರ್ ಮಾತನಾಡಿ, ಸತ್ಯನಾರಾಯಣ ಪೇಟೆಯ ಕೊಟ್ಟಾಲಪಲ್ಲಿಯ 53 ಮನೆಗಳು ಕೊಳಚೆ ಪ್ರದೇಶಕ್ಕೆ ಸೇರಿದೆ. ಆದರೆ ಅದ ನಮಗೆ ಸೇರಿದ್ದು ಎಂದು ಕೆಲವರು ಬಂದಿದ್ದಾರೆ. ಹತ್ತಾರು ದಶಕಗಳಿಂದ ಅಲ್ಲಿ ವಾಸ ಮಾಡಿರುವವರನ್ನು ತೆರವುಗೊಳಿಸಲು ಮುಂದಾದರೆ ಪಾಲಿಕೆ ಮುತ್ತಿಗೆ ಹಾಕಲಿದೆಂದು ಹೇಳಿದರು. ಅಂತಹ ಪರಿಸ್ಥಿತಿ ಬರಲ್ಲ ಎಂದು ಶಾಸಕ ಭರತ್ ಹೇಳಿದರು.

ಮತ್ತೆ ಸಭೆಗೆ:

ವಕ್ಫ ಆಸ್ತಿ ಪರಭಾರೆ ಕುರಿತ ಪ್ರಕರಣದಲ್ಲಿ ಸಭೆಯಿಂದ ಹೊರ ಹೋಗುವಂತೆ ಹೇಳಿ ಕಳಿಸಿದ್ದ ಕಂದಾಯ ಅಧಿಕಾರಿ ದೀನೇಶ್ ಅವರು ಕೆಲ ಹೊತ್ತು ಹೊರ ಹೋಗಿ ಮತ್ತೆ ಸಭೆಗೆ ಬಂದು ಕುಳಿತರು.

ಆಂದ್ರಾಳಿನ ಸರ್ವೇ ನಂಬರ್ 24, 25 ಕ್ಕೆ ಸೇರಿದ ಖಾಸಗಿ ಲೇಔಟ್ ನಲ್ಲಿ ಅಭಿವೃದ್ಧಿ ಇಲ್ಲದಿದ್ದರೂ ಅಪ್ರೂಲ್ ಕೊಟ್ಟಿದೆ ಇದು ಸರಿಯೇ ಎಂದು ಚಿತ್ರಗಳ ಸಮೇತ ಸಭೆಯ ಗಮನಕ್ಕೆ ತಂದರು ಸದಸ್ಯ ಎಂ.ಪ್ರಭಂಜನ್ ಕುಮಾರ್. ವಾಣಿಜ್ಯ ಕಟ್ಟಡಗಳಿಂದ ಅರ್ಧದಷ್ಟು ಆಸ್ತಿ ತೆರಿಗೆ ಕಟ್ಟಲ್ಲ. ಅವರ ಮೇಲೆ ಕ್ರಮ ಜರುಗಲ್ಲ. ಬಡವರು ಕಟ್ಟದಿದ್ದರೆ ಒತ್ತಡದಿಂದ ಕ್ರಮ ಜರುಗುತ್ತದೆ ಸರಿಯೇ ಎಂದರು.