
ಸಂಜೆವಾಣಿ ವಾರ್ತೆ
ಸಂಡೂರು, ಫೆ.14:. ಸುಸ್ಥಿರ ಮತ್ತು ಲಾಭದಾಯಕ ಸಮಗ್ರ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ ಜೆ ಎಸ್ ಡಬ್ಲ್ಯೂ ಫೌಂಡೇಶನ್ ತೋರಣಗಲ್ಲು ಒಪಿಜೆ ಕೇಂದ್ರದಲ್ಲಿ ಸಸಿಗಳು ಮತ್ತು ಕೃಷಿ ಉಪಕರಣಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಂಡೂರು ಭಾಗದ ಆಯ್ದ ಗ್ರಾಮಗಳ 300 ರೈತರನ್ನು ಮಾದರಿ ಪ್ರಗತಿಪರ ರೈತರನ್ನಾಗಿಸಲು ರೂಪಿಸಲಾದ ಸಮಗ್ರ ಕೃಷಿ (ಐ,ಎಫ್,ಎಸ್) ಯೋಜನೆಯಡಿ ಈಗಾಗಲೇ ರೈತರಿಗೆ ಕೃಷಿ ಪ್ರವಾಸ, ತರಬೇತಿ ಕಾರ್ಯಕ್ರಮಗಳು ಹಾಗೂ ಮಣ್ಣಿನ ಪರೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ. ತರಕಾರಿ ಬೀಜಗಳು ಹಾಗೂ ಹೆರೆಹುಳು ಗೊಬ್ಬರ ಬೆಡ್ಗಳನ್ನು ಈಗಾಗಲೇ ವಿತರಿಸಲಾಗಿದ್ದು, ಇಂದು ನಡೆದ ಕಾರ್ಯಕ್ರಮದಲ್ಲಿ ಕೃಷಿ ಉಪಕರಣಗಳು ಹಾಗೂ ವಿವಿಧ ಹಣ್ಣು ಮತ್ತು ಅರಣ್ಯ ಸಸಿಗಳನ್ನು ವಿತರಿಸಲಾಯಿತು.
ಯೋಜನೆಯಂತೆ ಒಟ್ಟು 14,000ಕ್ಕೂ ಹೆಚ್ಚು ವಿವಿಧ ಜಾತಿಯ ಸಸಿಗಳನ್ನು ಸಂಗ್ರಹಿಸಲಾಗಿದ್ದು, ಮಾವು, ಪೇರಲೆ, ಸಪೋಟಾ, ತೆಂಗು, ನೇರಳೆ, ರಕ್ತ ಚಂದನ, ನಿಂಬೆ, ಅಡಿಕೆ ಸೇರಿದಂತೆ 25ಕ್ಕೂ ಹೆಚ್ಚು ತಳಿಗಳ ಸಸಿಗಳನ್ನು ಹಂತ ಹಂತವಾಗಿ ರೈತರಿಗೆ ನೀಡಲಾಗುತ್ತಿದೆ. ಇಂದು ದರೋಜಿ ಮತ್ತು ಮಾದಾಪುರ ಗ್ರಾಮದ ರೈತರಿಗೆ ಪ್ರಾಯೋಗಿಕವಾಗಿ ಸಸಿಗಳನ್ನು ಹಸ್ತಾಂತರಿಸಲಾಯಿತು.
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಕೃಷಿ ಪರಿಕರ ಮತ್ತು ಸಸಿಗಳನ್ನು ವಿತರಿಸಿ ಮಾತನಾಡಿದ ಜೆ ಎಸ್ ಡಬ್ಲ್ಯೂ ಸ್ಟೀಲ್ ಲಿಮಿಟೆಡ್ ನ್ ಹಿರಿಯ ಉಪಾಧ್ಯಕ್ಷ ಸುನಿಲ್ ರಾಲ್ಫ್ “ಸಮಗ್ರ ಕೃಷಿ ಪದ್ಧತಿ ರೈತರಿಗೆ ನಿರಂತರ ಆದಾಯದ ಮೂಲವಾಗುತ್ತದೆ. ಹಣ್ಣು, ಅರಣ್ಯ ಹಾಗೂ ಪಶುಸಂಗೋಪನೆ ಆಧಾರಿತ ಚಟುವಟಿಕೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಆರ್ಥಿಕ ಸದೃಢತೆ ಸಾಧ್ಯ,” ಎಂದು ತಿಳಿಸಿದರು.
ಜೆ ಎಸ್ ಡಬ್ಲ್ಯೂ ಫೌಂಡೇಶನ್ ದಕ್ಷಿಣ ಭಾರತ ಝೋನಲ್ ಹೆಡ್ ಪೆದ್ದಣ್ಣ ಬೀಡಲಾ ಮಾತನಾಡಿ ” ರೈತರು ಸಸಿಗಳ ರಕ್ಷಣೆ ಮಾಡಿ ಪೋಷಣೆ ಮಾಡಬೇಕಾಗಿದೆ ಮತ್ತು ಎಲ್ಲಾ 300 ರೈತರಿಗೆ ಬಂದಿರುವ ಕೃಷಿ ಪರಿಕರಗಳು ಮತ್ತು ಸಸಿಗಳನ್ನು ಗ್ರಾಮ ಮಟ್ಟದಲ್ಲೇ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ- ಕಾರ್ಯಕ್ರಮದ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು” ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಟ್ರ್ಯಾಕ್ಟರ್ ತಯಾರಿಕಾ ಕಂಪೆನಿಯಾದ ಎಸ್ಕಾರ್ಟ್ಸ್ ಕುಬಟೋ ಲಿಮಿಟೆಡ್ ಹಿರಿಯ ಅಧಿಕಾರಿಯಾದ ಬಿಜು ಜಾರ್ಜ್, ಜೆ ಎಸ್ ಡಬ್ಲ್ಯೂ ಫೌಂಡೇಶನ್ ಕೃಷಿ ಸಂಯೋಜನಾಧಿಕಾರಿ ನಾಗನಗೌಡ, ಅನುಷ್ಠಾನ ಸಂಸ್ಥೆ ಸ್ಕೋಡ್ ವೆಸ್ ನ ರಾಜ ಏನ್ ಪಿ, ಗಂಗಾಧರ, ಹರೀಶ್, ಧನಂಜಯ, ಕಾರ್ತಿಕ್ ಮತ್ತು 50 ಕ್ಕೂ ಅಧಿಕ ರೈತರು ಭಾಗವಹಿಸಿದ್ದರು























