ಸಂಜೆ ದುರ್ಗಮ್ಮ ಸಿಡಿಬಂಡಿ ರಥೋತ್ಸವ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.24: ನಗರದ ಆರಾಧ್ಯ ದೇವತೆ ದುರ್ಗಮ್ಮ ದೇವಸ್ಥಾನದ ಸಿಡಿಬಂಡಿ ರಥೋತ್ಸವ ಇಂದು ಸಂಜೆ 5.30 ಕ್ಕೆ ಜರುಗಲಿದೆ. ಇದಕ್ಕಾಗಿ ದೇವಾಲಯ ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿದೆ.

ಇಂದು ಬೆಳಗಿನ ಜಾವದಿಂದಲೇ ನೂರಾರು ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇದಕ್ಕಾಗಿ ಸಕಲ ರೀತಿಯ ವ್ಯವಸ್ಥೆ ಮಾಡಿದೆ. ದರ್ಶದನ ಪಡೆದು ಬರುವ ಜನತೆಗೆ ದೇವಸ್ಥಾನದ ಆವರಣ ಮತ್ತು ಹೊರ ಭಾಗದಲ್ಲಿ ಭಕ್ತರಿಂದ ಪ್ರಸಾದ, ಮಜ್ಜಿಗೆ ವಿತರಣೆ ನಡೆಯುತ್ತಿದೆ. ದೇವಸ್ಥಾನದಿಂದಲೂ ಅನ್ನ ಸಂತರ್ಪಣೆ ನಡೆದಿದೆ.

ಜನತೆ ಸುಗಮವಾಗಿ ದೇವಸ್ಥಾನಕ್ಕೆ ಬಂದು ಹೋಗಲು ಟ್ರಾಫಿಕ್ ನ್ನು ದೇವಸ್ಥಾನಕ್ಕೆ ಬರುವ ರಸ್ತೆಗಳಲ್ಲಿ ಪೊಲೀಸರಿಂದ ನಿಯಂತ್ರಿಸಲಾಗಿದೆ.

ಅಲಂಕೃತ ಸಿಡಿ ಬಂಡಿಯನ್ನು ನಿನ್ನೆ ಸಂಜೆ ಕೌಲ್ ಬಜಾರ್ ಪ್ರದೇಶದಿಂದ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ಕರೆತರಲಾಗಿದೆ. ದೇವಸ್ಥಾನಕ್ಕೆ ಬಂದ ಭಕ್ತರು ಸಿಡಿಬಂಡಿಗೆ ಕಾಯಿ, ಹೂಹಣ್ಣು ಅರ್ಪಿಸುವ ಕೆಲವರು ಜೀವಂತ ಕೋಳಿಗಳನ್ನು ಎಸೆದು ತಮ್ಮ ಭಕ್ತಿ ಸಮರ್ಪಿಸಿದ್ದು ಕಂಡು ಬಂತು.

ಸಿಡಿಬಂಡಿಯನ್ನು ಸಂಜೆ ಮೂರು ಜೊತೆ ಎತ್ತುಗಳಿಂದ ದೇವಸ್ಥಾನದ ಸುತ್ತ ಮೂರು ಬಾರಿ ಪ್ರದಕ್ಷಿಣಿ ಹಾಕಿಸಲಾಗುತ್ತದೆ. ನಂತರ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನವೂ ಇದೆ.

ಸಿಡಿಬಂಡಿ ನೋಡಲು ವಿವಿದಢೆಯಿಂದ ಸಾವಿರಾರು ಜನರು ನಗರಕ್ಕೆ ಬರಲಿದ್ದಾರೆ.