ಶಾಸಕ ಸಿ.ಪುಟ್ಟರಂಗಶೆಟ್ಟಿಯಿಂದ ಸರ್ಕಾರದ ಅನುದಾನ ದುರ್ಬಳಕೆ: ನಿಜಗುಣರಾಜು ಆರೋಪ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.03:-
ಚಾ.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿದ್ದು, ಸರ್ಕಾರ ನೀಡಿರುವ 50 ಕೋಟಿ ರೂ. ಗಳ ಅನುದಾನವನ್ನು ನಿಯಮ ಬಾಹಿರವಾಗಿ ಕೆಐಆರ್‍ಡಿಎಲ್‍ಗೆ ನೀಡಿ, ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಹಾಗೂ ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು ದೂರಿದರು.


ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ಬಾರಿಯಿಂದ ಕ್ಷೇತ್ರದ ಶಾಸಕರಾಗಿರುವ ಪುಟ್ಟರಂಗಶೆಟ್ಟರು ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶೂನ್ಯ. ಸÀರ್ಕಾರವು ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕ ಸಿ.ಪುಟ್ಟರಂಗಶೆಟ್ಟರಿಗೆ 50 ಕೋಟಿ ರೂ. ಅನುದಾನ ನೀಡಿದೆ. ಈ ಅನುದಾನವನ್ನು ಕ್ಷೇತ್ರದ ಅಭಿವೃದ್ದಿಗೆ ವಿನಿಯೋಗಿಸುವ ಸಲುವಾಗಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಗ್ರಾಮೀಣಾಭಿವೃದ್ದಿ ಇಲಾಖೆಗೆ ನೀಡಿ. ಅಲ್ಲಿಂದ ಟೆಂಡರ್ ಮೂಲಕ ಕಾಮಗಾರಿಯನ್ನು ನಿರ್ವಹಣೆ ಮಾಡಬೇಕು. ಆದರೆ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕಾಮಗಾರಿಗಳನ್ನು ನಿರ್ವಹಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.


ಪುಟ್ಟರಂಗಶೆಟ್ಟರು ಕ್ಷೇತ್ರದ ಅಭಿವೃದ್ದಿಗಾಗಿ ನೀಡಿರುವ 50 ಕೋಟಿ ರೂ.ಗಳ ಪೈಕಿ 10 ಕೋಟಿ ಮಾತ್ರ ಪಿಡಬ್ಲ್ಯುಡಿಗೆ ನೀಡಿದ್ದು, ಉಳಿದ 40 ಕೋಟಿ ಹಣವನ್ನು ಕೆಆರ್‍ಐಡಿಎಲ್‍ಗೆ ನೀಡಿದ್ದಾರೆ. ಇಲ್ಲಿ ಗುತ್ತಿಗೆ ನಿರ್ವಹಣೆ ಮಾಡುತ್ತಿರುವವರು ಹೊರ ಜಿಲ್ಲೆ ಹಾಗೂ ತಾಲೂಕಿನವರಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಗುತ್ತಿಗೆದಾರರಿಗೆ ವಂಚನೆ ಮಾಡಿದ್ದಾರೆ. ಈ ಅನುದಾನ ಬಳಕೆಗೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ ಎಂದು ಆಗ್ರಹಿಸಿದರು.


ಅಲ್ಲದೇ ಇತ್ತೀಚೆಗೆ ವೀರನಪುರ ಕ್ರಾಸ್ ಬಳಿ ಅವರು 20 ಎಕರೆಗೆ ಹೆಚ್ಚು ಜಮೀನು ಖರೀದಿ ಮಾಡಿದ್ದು, ಈ ಜಮೀನಿಗೆ ಹೋಗುವ ರಸ್ತೆಯನ್ನು ಡಾಂಬರ್ ರಸ್ತೆಯನ್ನಾಗಿಸಲು ತಮ್ಮ ಅನುದಾನದಲ್ಲಿ 2 ಕೋಟಿ ರೂ. ನೀಡಿದ್ದಾರೆ. ಇದಕ್ಕೆ ಯಾವುದೇ ಟೆಂಡರ್ ಇಲ್ಲ. ಯಾರು ಗುತ್ತಿಗೆ ಮಾಡುತ್ತಿದ್ದಾರೆ ಎಂಬುವುದೇ ಮಾಹಿತಿಲ್ಲ. ಇವರು ಖರೀದಿ ಮಾಡಿರುವ 25 ಎಕರೆ ಆಸ್ತಿಯ ವ್ಯಾಪ್ತಿಯಲ್ಲಿ 5 ಎಕರೆ ಖರಾಬು ಜಮೀನು ಇದ್ದು, ಇದನ್ನು ಸಹ ತಮ್ಮದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಕ್ಷೇತ್ರದಲ್ಲಿ ಬಹಳಷ್ಟು ಹಳ್ಳಿಗಳಿಗೆ ಸಂಪರ್ಕ ರಸ್ತೆಗಳು ಗುಂಡಿ ಬಿದ್ದಿವೆ ಎಂದು ದೂರಿದರು.
ಚಾಮರಾಜನಗರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಕಳೆದ 20 ವರ್ಷಗಳ ಇವರ ಆಡಳಿತದಲ್ಲಿ ಕ್ಷೇತ್ರದ ಸಂಪೂರ್ಣವಾಗಿ ಹಾಳಾಗಿದೆ. ಶಾಸಕರು ಕ್ಷೇತ್ರದ ಅಭಿವೃದ್ಧಿಕ್ಕಿಂತ ಸ್ವ ಹಿತಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ ಎಂಬುದಕ್ಕೆ ಅವರು ಚುನಾವಣೆಯಲ್ಲಿ ಸಲ್ಲಿಸಿರುವ ಪ್ರಮಾಣ ಪತ್ರಗಳು ಹೇಳುತ್ತಿವೆ. ಕಮಿಷನ್ ಅಸೆಯಿಂದ ತಮಗೆ ಬೇಕಾದ ಏಜೆನ್ಸಿ ಮೂಲಕ ಕಾಮಗಾರಿ ನಡೆಸುವ ಮೂಲಕ ಸ್ಥಳೀಯ ಎಸ್ಸಿ, ಎಸ್ಟಿ, ಒಬಿಸಿ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಅಲ್ಲದೇ ಜಿಲ್ಲೆಯಲ್ಲಿನ ಅಧಿಕಾರಿಗಳು ಶಾಸಕರ ಹಿಡಿತದಲ್ಲಿಲ್ಲ. ಮೈಸೂರಿನಿಂದ ಓಡಾಡುವ ಅಧಿಕಾರಿಗಳಿಂದ ಯಾವುದೇ ಅಭಿವೃದ್ದಿ ಕೆಲಸಗಳನ್ನು ನಿರೀಕ್ಷೆ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.


ಬ್ಯಾಂಡ್ ತಂಡದಿಂದ ಹೇಳಿಕೆ ವ್ಯಂಗ್ಯ : ಶಾಸಕ ಪುಟ್ಟರಂಗಶೆಟ್ಟ ವಿರುದ್ದ ನಾನು ಕ್ಷೇತ್ರದ ಅಭಿವೃದ್ದಿಯಾಗಿಲ್ಲ ಎಂದು ಆಧಾರಿತ ಸಹಿತವಾಗಿ ಆರೋಪ ಮಾಡಿದರೆ, ಇದಕ್ಕೆ ಉತ್ತರಿಸಿದ ಶಾಸಕರು ತಮ್ಮ ಬ್ಯಾಂಡ್‍ಸೆಟ್ ಗಿರಾಕಿಗಳನ್ನು ಕೂರಿಸಿ, ಇಲ್ಲಸಲ್ಲದ ಆರೋಪಮಾಡಿಸುತ್ತಾರೆ. ಅದು ಬಿಟ್ಟು ನನ್ನ ಆರೋಪಗಳಿಗೆ ನೇರವಾಗಿ ಉತ್ತರಲಿಸಲಿ. ಮಾಜಿ ಸಚಿವರಾದ ದಿ.ವಿ. ಶ್ರೀನಿವಾಸಪ್ರಸಾದ್, ದಿ.ಎಚ್.ಎಸ್. ಮಹದೇವ ಪ್ರಸಾದ್, ದಿ. ಆರ್. ಧ್ರುವನಾರಾಯಣ್ ಅವರ ಅವಧಿಯಲ್ಲಿ ಬಹಳಷ್ಟು ಒಳ್ಳೆಯ ಕೆಲಸಗಳಾಗಿವೆ. ಇದು ಹೊರತು ಪಡಿಸಿ, ಕ್ಷೇತ್ರದ ಶಾಸಕರ 20 ವರ್ಷಗಳ ಕೊಡುಗೆ ಏನು? ಈ ಬಗ್ಗೆ ಬಹಿರಂಗ ಚರ್ಚೆಗೆ ಶಾಸಕರು ಬರಲಿ ಎಂದು ನಿಜಗುಣರಾಜು ಸವಾಲು ಹಾಕಿದರು.


ನಗರದ ನ್ಯಾಯಾಲಯ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ರಸ್ತೆ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿದೆ. ನಗರಸಭೆ ಅಧ್ಯಕ್ಷರು, ಸದಸ್ಯರ ಅಧಿಕಾರವಧಿ ಮುಗಿದಿದ್ದು ಸಾರ್ವಜನಿಕರ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಬೇಕು. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬಿಜೆಪಿ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ನಾಕೂಡು ಪ್ರಕಾಶ್, ಗ್ರಾಮಾಂತರ ಮಂಡಲದ ಅಧ್ಯಕ್ಷ ಕಾಡಹಳ್ಳಿ ಕುಮಾರ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸೂರ್ಯಕುಮಾರ್, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಣ್ಣ, ಮುಖಂಡರಾದ ಚಂದ್ರಶೇಖರ್, ಪ್ರವೀಣ್ ನಾಯಕ್, ನಿಂಗನಾಯಕ ಇತರರು ಇದ್ದರು.