ಶಕ್ತಿ ಯೋಜನೆಗೆ ಹೆಚ್ಚುವರಿ ಬಸ್ಸುಗಳನ್ನು ಕಲ್ಪಿಸಲಿ : ನೇಮಿರಾಜ್ ನಾಯ್ಕ್


 ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ. ಜು.15
ಶಕ್ತಿ ಯೋಜನೆಯ ಉದ್ದೇಶ ಒಳ್ಳೆಯದೇ ಇರಬಹುದು, ಆದರೆ ಶಾಲಾ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗುತ್ತದೆ ಎಂದು ಶಾಸಕ ಕೆ ನೇಮಿರಾಜ್ ನಾಯ್ಕ್ ಹೇಳಿದರು.
 ಪಟ್ಟಣದ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ  ಸೋಮವಾರ ಆಯೋಜಿಸಿದ್ದ ಸರ್ಕಾರದ ಶಕ್ತಿ ಯೋಜನೆಯಡಿ 500 ಕೋಟಿ ಟಿಕೆಟ್ ಸಂಭ್ರಮ ಆಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೆಲವು ಅನಾನುಕೂಲಗಳಾಗಿದ್ದು. ಅದನ್ನು ಸರ್ಕಾರ ಕೂಲಂಕುಶವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಶಕ್ತಿ ಯೋಜನೆಯಿಂದ ಓಡಾಡುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು . ಇದರಿಂದ ಶಾಲೆಗೆ ಬರುವಂತಹ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ ಹೆಚ್ಚುವರಿ ಬಸ್ಸುಗಳು ನೀಡುವ ಮೂಲಕ ವಿದ್ಯಾರ್ಥಿಗಳ ಸಮಸ್ಯೆಯನ್ನು ಹೋಗಲಾಡಿಸಬೇಕು. ಕೆಲವು ಕಾಂಗ್ರೆಸ್ ಶಾಸಕರೇ ಗ್ಯಾರಂಟಿ ಯೋಜನೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದ್ದಾರೆ. ಸಾರ್ವಜನಿಕರಿಗೆ  ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ. ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹದಗೆಟ್ಟು ಹೋಗಿವೆ. ಇವುಗಳ ಅಭಿವೃದ್ಧಿಗೆ ಸರ್ಕಾರ ಕೂಡಲೇ ಅನುದಾನ ನೀಡಬೇಕು ಎಂದರು.
 ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಗುರು ಬಸವರಾಜ್ ಸೊನ್ನದ್  ಮಾತನಾಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5 ಗ್ಯಾರಂಟಿಗಳನ್ನು ಸಂಪೂರ್ಣ ಜಾರಿಗೆ ತರುವ ಮೂಲಕ ನುಡಿದಂತೆ ನಡೆದಿದೆ ಎಂದು ಹೇಳಲು ಹೆಮ್ಮೆ ಅನಿಸುತ್ತದೆ. ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಬಹಳ ಅನುಕೂಲವಾಗಿದ್ದು. ಆರ್ಥಿಕ ಮತ್ತು ಸಬಲೀಕರಣಕ್ಕೆ ಸಹಕಾರಿಯಾಗಿದೆ ಎಂದರು.
 ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಪುರಸಭೆಯ ಸದಸ್ಯ ದೀಪಕ್ ಕಠಾರಿ, ಗ್ಯಾರಂಟಿ ಜಿಲ್ಲಾ ಉಪಾಧ್ಯಕ್ಷ ಜಂದಿಸಾಬ್, ಜಿಲ್ಲಾ ಸದಸ್ಯ ಪರಶುರಾಮ್, ಡಿಪೋ ವ್ಯವಸ್ಥಾಪಕ ಜಡೇಶ್, ಡಿಪೋ ಇನ್ಸ್ಪೆಕ್ಟರ್ ಸಂತೋಷ್ ಕುಮಾರ್ ನಾಯ್ಕ್, ಮುಖಂಡರಾದ ಬಾದಾಮಿ ಮೃತ್ಯುಂಜಯ ವೈ ಮಲ್ಲಿಕಾರ್ಜುನ, ಡಿಸ್ ಮಂಜುನಾಥ, ಈ ಕೃಷ್ಣಮೂರ್ತಿ, ಚಿತ್ತವಾಡಗಿ ಪ್ರಕಾಶ ಹಾಗೂ ಡಿಪೋ ಮಹಿಳಾ ಸಿಬ್ಬಂದಿ ಹಾಜರಿದ್ದರು.