
ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ಚನ್ನರಾಯಪಟ್ಟಣದ 1777 ಎಕರೆ ಭೂಸ್ವಾಧೀನವನ್ನು ಕೈಬಿಟ್ಟಿರುವುದನ್ನು ಕೂಡಲೇ ಗೆಜೆಟ್ ಪ್ರಕರಣ ಹೊರಡಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ನಜರ್‍ಬಾದ್‍ನಲ್ಲಿರುವ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯನ್ನು ಮುಂಬರುವ ಅಧಿವೇಶನದಲ್ಲಿ ವಾಪಸ್ ಪಡೆದು ಎಪಿಎಂಸಿ ಕಾಯ್ದೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ಕೇಂದ್ರದ ನ್ಯಾಷನಲ್ ಕೃಷಿ ಮಾರುಕಟ್ಟೆ ಪ್ರೈಮ್ ವರ್ಕ್ ನೀತಿಯನ್ನು ತಿರಸ್ಕರಿಸಬೇಕು. ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಬಾರದು. ಕಾರ್ಮಿಕ ತಿದ್ದುಪಡಿ ಕೋಡ್‍ಗಳನ್ನು ಜಾರಿಗೊಳಿಸಬಾರದರು. ರಸ ಗೊಬ್ಬರದ ಕೊರತೆ ನೀಗಿಸಬೇಕು. ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು. ಭೂ ಮಂಜೂರಾತಿ ಹಕ್ಕನ್ನು ನೀಡಿ 70 ವರ್ಷದಿಂದ ಸಾಗುವಳಿ ಮಂಜೂರಾತಿ ಸಿಗದ ರೈತರಿಗೆ ಭೂ ಮಂಜೂರಾತಿ ದೊರಕಬೇಕು ಎಂದು ಆಗ್ರಹಿಸಿದರು.
ಭೂ ವಿವಾದಗಳಿಂದಾಗುವ ಸಮಸ್ಯೆಗಳಿಗೆ ದುರಸ್ತಿ ಕಾರ್ಯ ಕಾಲಮಿತಿ ಒಳಗೆ ಪೂರ್ಣಗೊಳಿಸಬೇಕು. ಕೆರೆಕಟ್ಟಿಗಳ ಒತ್ತುವರಿ ತೆರವುಗೊಳಿಸಬೇಕು. ರೈತರ ಪಂಪ್‍ಸೆಟ್‍ಗಳಿಗೆ ವಿದ್ಯುತ್‍ಚ್ಛಕ್ತಿಯನ್ನು ಮೊದಲಿನಂತೆ ಅಕ್ರಮ-ಸಕ್ರಮಗೊಳಿಸಬೇಕು. ಮೈಸೂರು ತಾಲೂಕಿನ ಕೆಂಚಲಗೂಡು ಗ್ರಾಮದ ಸರ್ವೆ ನಂ.14ರಲ್ಲಿ 5 ಎಕರೆ 20 ಗುಂಟೆ ಜಮೀನನ್ನು ಉಳುಮೆ ಮಾಡುತ್ತಿದ್ದ ರೈತರಿಗೆ ನಿವೇಶನಕ್ಕಾಗಿ ಕಾಯ್ದಿರಿಸಿ ಸರ್ಕಾರಕ್ಕೆ ಶಿಪಾರಸ್ಸು ಮಾಡಿ ಅದೇ ಜಾಗವನ್ನು ಎಡಹಳ್ಳಿ ಗ್ರಾಮಸ್ಥರಿಗೆ ಸ್ಮಶಾನಕ್ಕೆ ನೀಡಿರುವುದನ್ನು ಕೈಬಿಡಬೇಕು. 400 ಎಕರೆ ಜಮೀನನ್ನು ಗಾಲ್ಫ್ ಕಂಪನಿಗೆ ನೀಡಿರುವ ಕೋಚನಹಳ್ಳಿ ರೈತರಿಗೆ ಅನ್ಯಾಯವಾಗಿದೆ. ಇದರ ಬಗ್ಗೆ ಗಮನಹರಿಸಬೇಕು. ಮೈಸೂರು ತಾಲ್ಲೂಕು, ಗುರೂರು ಗ್ರಾಮದ ಸರ್ವೆ ನಂ.38ರ ಜಮೀನನ್ನು ಉಳುಮೆ ಮಾಡುವ ರೈತರಿಗೆ ಖಾತೆ ಮಾಡಿಕೊಡಲು ವಿಳಂಬವಾಗುತ್ತಿದ್ದು, ಸಮಸ್ಯೆ ಪರಿಹರಿಸಬೇಕು. ಸರ್ಕಾರಿ ಜಮೀನುಗಳ ಭೂ ಕಬಳಿಕೆ ವಿರುದ್ಧ ದಾವೆಗಳಿದ್ದು, ಸರಿಯಾದ ರೀತಿಯಲ್ಲಿ ನೋಡಿಕೊಂಡು ಸರ್ಕಾರಿ ಜಮೀನುಗಳನ್ನು ವಶಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.