ಮಹಿಳಾ ವಿಶ್ವಕಪ್ ಕ್ರಿಕೆಟ್ ಸೆಮಿಫೈನಲ್‌ಗೆ ಭಾರತ

ಮುಂಬೈ, ಅ.೨೪ : ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಚೇತೋಹಾರಿ ಪ್ರದರ್ಶನ ನೀಡದ ಭಾರತ ಮಹಿಳಾ ತಂಡವು ಡಕ್ವರ್ತ್ ಲೂಯಿಸ್ ನಿಯಮದನ್ವಯ ೫೩ ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿದೆ. ಇದರೊಂದಿಗೆ ೩ ಗೆಲುವುಗಳೊಂದಿಗೆ ೬ ಅಂಕಗಳನ್ನು ಕಲೆಹಾಕಿದ ಭಾರತ, ೨೦೨೫ರ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ.


ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಸ್ಮೃತಿ ಮಂಧಾನ (೧೦೯; ೯೫ ಎಸೆತ ) ಮತ್ತು ಪ್ರತೀಕಾ ರಾವಲ್ (೧೨೨; ೧೩೪ ಎಸೆತ) ಅವರ ಅದ್ಭುತ ಶತಕಗಳ ಜತೆಗೆ ಜೆಮಿಮಾ ರೋಡ್ರಿಗಸ್ (೭೬; ೫೫ ಎಸೆತ) ಅವರ ಮಿಂಚಿನ ಅರ್ಧ ಶತಕದ ಸಾಹಸದಿಂದ ಭಾರತ ೪೯ ಓವರ್ (ಮಳೆಯಿಂದ ಕಡಿತ) ೩ ವಿಕೆಟ್ ನಷ್ಟಕ್ಕೆ ೩೪೦ ರನ್ ಕಲೆಹಾಕಿತು.


ಮಳೆಯಿಂದಾಗಿ ಸುಮಾರು ಒಂದೂವರೆ ಗಂಟೆ ತಡವಾಗಿ ಇನಿಂಗ್ಸ್ ಆರಂಭಿಸಲು ಸಜ್ಜಾದ ನ್ಯೂಜಿಲೆಂಡ್ ಗೆ ೪೪ ಓವರ್ ಗಳಲ್ಲಿ ೩೨೫ ರನ್ ಗಳ ಪರಿಷ್ಕೃತ ಗುರಿ ನೀಡಲಾಯಿತು. ತನ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಕಿವೀಸ್ ೮ ವಿಕೆಟ್ ನಷ್ಟಕ್ಕೆ ೨೭೧ ರನ್ ಗಳಿಸಲಷ್ಟೇ ಶಕ್ತಗೊಂಡಿತು. ಬ್ರೂಕ್ ಹ್ಯಾಲಿಡೆ (೮೧; ೮೪ ಎಸೆತ) ಮತ್ತು ಇಸಾಬೆಲ್ಲಾ ಗಾಝಾ (೬೫; ೫೧ ಎಸೆತ) ತಂಡದ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಇದಕ್ಕೂ ಮುನ್ನ ಸ್ಮೃತಿ ಮಂಧಾನ, ಅಮೆಲಿಯಾ ಕೆರ್ (೪೫) ಅವರ ಕ್ಯಾಚ್ ಪಡೆದು ಪ್ರವಾಸಿ ತಂಡದ ಮೇಲೆ ಒತ್ತಡ ಹೇರಲು ನೆರವಾದರು.


ಆತಿಥೇಯ ಭಾರತ ಅಕ್ಟೋಬರ್ ೩೦ರಂದು ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ಇದೇ ೨೬ರಂದು ತನ್ನ ಅಂತಿಮ ಲೀಗ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.ಹಾಲಿ ೨೦ ವಿಶ್ವಕಪ್ ಚಾಂಪಿಯನ್ ನ್ಯೂಜಿಲೆಂಡ್ , ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲೇ ಹೋರಾಟ ಮುಗಿಸಿದರೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ಭಾರತ ನಾಲ್ಕರ ಘಟ್ಟ ಪ್ರವೇಶಿಸಿವೆ.


ನ್ಯೂಜಿಲೆಂಡ್ ತಂಡ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದರೂ ಟೂರ್ನಿಯಲ್ಲಿ ಮೂರು ಗೆಲುವು ಕಾಣದ ಕಾರಣ ಉಪಾಂತ್ಯದ ಹಾದಿಯಿಂದ ನಿರ್ಗಮಿಸಿದೆ. ಎರಡು ಪಂದ್ಯಗಳಲ್ಲಿ ಅಂಕ ಹಂಚಿಕೊಂಡಿರುವುದು ಕಿವೀಸ್ ಗೆ ಹಿನ್ನಡೆಯಾಗಿದೆ. ದಾಖಲೆ ವೀಕ್ಷಣೆ: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ನಿರ್ಣಾಯಕ ಪಂದ್ಯವನ್ನು ದಾಖಲೆ ಸಂಖ್ಯೆಯಲ್ಲಿ ವೀಕ್ಷಿಸಲಾಗಿದೆ. ಗುರುವಾರ ನಡೆದ ಈ ಪಂದ್ಯವನ್ನು ೨೫ ಸಾವಿರದ ೧೬೬ ಪ್ರೇಕ್ಷಕರು ಕ್ರೀಡಾಂಗಣದಲ್ಲಿ ವೀಕ್ಷಿಸಿದ್ದಾರೆ.

ಇದು ಕ್ರೀಡಾಂಗಣದಲ್ಲಿ ಹಾಲಿ ವಿಶ್ವಕಪ್ ನ ಪಂದ್ಯವೊಂದರ ಗರಿಷ್ಠ ವೀಕ್ಷಣೆಯಾಗಿದೆ.ಅಲ್ಲದೆ ವಿಶ್ವಕಪ್ ಇತಿಹಾಸದಲ್ಲಿ ಭಾರತದ (೩೪೦ಕ್ಕೆ ೩) ಗರಿಷ್ಠ ಸ್ಕೋರ್ ಇದಾಗಿದೆ.
ಹಲವು ದಾಖಲೆ ಸೃಷ್ಟಿಸಿದ ಮಂಧಾನ ಮೊದಲ ವಿಕೆಟ್ ಗೆ ೨೦೨ ಎಸೆತಗಳಲ್ಲಿ ೨೧೨ ರನ್ ಗಳ ಪಾಲುದಾರಿಕೆ ಆಟ ನಿರ್ವಹಿಸಿದ ಮಂಧಾನ ಮತ್ತು ಪ್ರತೀಕಾ, ಹಲವು ದಾಖಲೆಗಳನ್ನು ಬರೆದಿದ್ದಾರೆ. ಇದು ಅವರ ಎರಡನೇ ಡಬಲ್ ಸೆಂಚುರಿಯಾಗಿದೆ. ೨೩ ಏಕದಿನ ಪಂದ್ಯಗಳಲ್ಲಿ ೭ನೇ ಶತಕದ ಜತೆಯಾಟವಾಗಿದೆ. ಇದಲ್ಲದೆ, ಮಹಿಳಾ ಏಕದಿನದಲ್ಲಿ ಭಾರತದ ಪರ ಗರಿಷ್ಠ ರನ್ ಗಳ ಜತೆಯಾಟವಾಗಿದೆ. ೨೦೨೨ರಲ್ಲಿ ಹ್ಯಾಮಿಲ್ಟನ್ ನಲ್ಲಿ ಮಂಧಾನ ಮತ್ತು ಹರ್ಮನ್ ಪ್ರೀತ್ ಕೌರ್ ೧೮೪ ರನ್ ಗಳಿಸಿದ್ದು, ತಂಡದ ಇದುವರೆಗಿನ ಗರಿಷ್ಠ ರನ್ ಗಳ ಜತೆಯಾಟವಾಗಿತ್ತು.


೨೦೨೫ ರ ಕ್ಯಾಲೆಂಡರ್ ವರ್ಷದಲ್ಲಿ ೧೫೫೭ ರನ್ ಕೂಡಿಸಿದ ಮಂಧಾನ- ಪ್ರತೀಕಾ, ೧೯೯೮ರಲ್ಲಿ ಸಚಿನ್ ಮತ್ತು ಗಂಗೂಲಿ ಗಳಿಸಿದ್ದ ೧೬೩೫ ರನ್ ಗಳ ದಾಖಲೆಯ ಹಿಂದಿದ್ದಾರೆ. ೮೮ ಎಸೆತಗಳಲ್ಲಿ ಶತಕ ಪೂರೈಸಿದ ಮಂಧಾನ, ಏಕದಿನದಲ್ಲಿ ೧೪ನೇ ಹಾಗೂ ಒಟ್ಟಾರೆ ೧೭ ಶತಕ ದಾಖಲಿಸಿದ್ದಾರೆ. ಆಸ್ಟ್ರೇಲಿಯಾದ ಮೆಗ್ ಲೆನ್ನಿಂಗ್ ಏಕದಿನ ಮಾದರಿಯಲ್ಲಿ ೧೫ ಶತಕ ಗಳಿಸಿದ್ದು, ಒಟ್ಟಾರೆ ೧೭ ಶತಕಗಳನ್ನು ಗಳಿಸಿದ್ದಾರೆ.