ಮಕ್ಕಳ ಹಾಜರಾತಿ ವ್ಯತ್ಯಾಸದ ವರದಿ ನೀಡಿ

ಸಂಜೆವಾಣಿ ನ್ಯೂಸ್
ಮೈಸೂರು: ಜು.22:-
ಅಂಗನವಾಡಿ ಕೇಂದ್ರಗಳಲ್ಲಿ ಮೂರು ಮತ್ತು ಆರು ವರ್ಷದೊಳಗಿನ ಮಕ್ಕಳ ಹಾಜರಾತಿ ವ್ಯತ್ಯಾಸವಾಗಿರುವ ಕುರಿತು ಮರು ಪರಿಶೀಲನೆ ನಡೆಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯೂ ಆದ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್ ಸೂಚಿಸಿದರು.


ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೂರು ವರ್ಷದ ಮತ್ತು ಆರು ವರ್ಷದೊಳಗಿನ ಮಕ್ಕಳ ಹಾಜರಾತಿಯ ವ್ಯತ್ಯಾಸ ಗಮನಿಸಿ ಪ್ರಶ್ನೆ ಮಾಡಿ ವಿವರ ಪಡೆದ ಮೇಲೆ ಈ ರೀತಿಯ ಸೂಚನೆ ಕೊಟ್ಟರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಬಿ.ಬಸವರಾಜು ಜಿಲ್ಲೆಯಲ್ಲಿ 2933 ಅಂಗನವಾಡಿ ಕೇಂದ್ರಗಳಿದ್ದು, 157128 ಫಲಾನುಭವಿಗಳಿದ್ದಾರೆ. 06-3 ವರ್ಷದೊಳಗಿನ 75536, 03-6 ವರ್ಷದೊಳಗಿನ 47796, ಗರ್ಭಿಣಿಯರು-14880, ಬಾಣಂತಿಯರು-13157 ಮಂದಿ ಇದ್ದಾರೆ ಎಂದು ವಿವರಿಸಿದರು.
ಈ ವೇಳೆ ಮೂರು ಮತ್ತು ಆರು ವರ್ಷದೊಳಗಿನ ಮಕ್ಕಳ ಸಂಖ್ಯೆಯ ಪ್ರಮಾಣದಲ್ಲಿ ಕಡಿಮೆಯಾಗಿರುವುದನ್ನು ಗಮನಿಸಿದ ಎಸ್.ಸೆಲ್ವಕುಮಾರ್, ಆರು ವರ್ಷದೊಳಗಿನ ಮಕ್ಕಳ ಹಾಜರಾತಿ ಕಡಿಮೆಯಾಗಲು ಕಾರಣವೇನು? ಇವರು ಎಲ್ಲಿ ಹೋಗಿದ್ದಾರೆ, ಅವರನ್ನು ಟ್ರ್ಯಾಕ್ ಮಾಡಿಲ್ಲವೇ ಎಂದು ಪ್ರಶ್ನಿಸಿದರು.


ಇದಕ್ಕೆ ಉತ್ತರಿಸಿದ ಬಸವರಾಜು, ಕೊಡಗು ಜಿಲ್ಲೆಗೆ, ಕೇರಳಕ್ಕೆ ಕೂಲಿಗೆ ಹೋಗುವಾಗ ಮಕ್ಕಳು ಹೋಗುತ್ತಾರೆ ಎನ್ನುವ ಮಾಹಿತಿ ನೀಡಿದರು. ಹಾಗಾದರೆ, ಬೇರೆ ಕಡೆಯಿಂದ ಬಂದವರು ಇಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಅಲ್ಲವೇ? ನೀವು ಸರಿಯಾಗಿ ಟ್ರ್ಯಾಕ್ ಮಾಡಿಲ್ಲ ಎಂದರು.


ಈ ವೇಳೆ ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಜನಿಸಿದ ಮಗುವಿನ ಸಂಖ್ಯೆಯ ವಿವರ ಇರುತ್ತದೆ. ಕಳೆದ ಆರು ವರ್ಷಗಳಲ್ಲಿ ಜನಿಸಿರುವ ಮಕ್ಕಳ ವಿವರ ಪಡೆದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಪರಿಶೀಲಿಸಬೇಕು. ಜು.28ರೊಳಗೆ ವರದಿ ಸಲ್ಲಿಸುವಂತೆ ಹೇಳಿದರು.
ಶೀಘ್ರದಲ್ಲೇ ಶೇ.100ರಷ್ಟು ನಳ ಸಂಪರ್ಕ: ಗ್ರಾಮೀಣ ನೀರು ಸರಬರಾಜು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಎ.ಎಸ್.ರಂಜಿತ್‍ಕುಮಾರ್ ಮಾತನಾಡಿ, 1909 ಕುಡಿಯುವ ನೀರಿನ ಕಾಮಗಾರಿಗಳಲ್ಲಿ 1580 ಪೂರ್ಣವಾಗಿದ್ದು, 4.71 ಲಕ್ಷ ಮನೆಗಳಲ್ಲಿ 4.45 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಶೀಘ್ರದಲ್ಲೇ ಶೇ.100ರಷ್ಟು ಮುಗಿಯಲಿದೆ. ಹರ್‍ಘರ್‍ಜಲ್ ಗ್ರಾಮಗಳಲ್ಲಿ 478 ಗ್ರಾಮಗಳನ್ನು ಘೋಷಣೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಮನೆಗಳಿಗೂ ನಳ ಸಂಪರ್ಕ ಕಲ್ಪಿಸಿದರೆ ಶೇ.100ರಷ್ಟು ಮನೆಗಳಿಗೆ ನೀರು ಒದಗಿಸಿದಂತಾಗುತ್ತದೆ ಎಂದು ವಿವರಿಸಿದರು.


ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ರವಿ ಮಾತನಾಡಿ, ವಾಡಿಕೆ ಮಳೆಗಿಂತ ಜನವರಿ ತಿಂಗಳಿಂದ ಜುಲೈ ತಿಂಗಳವರೆಗೆ 443. ಮೀಟರ್ ಮಳೆಯಾಗಿದ್ದು, ಜೂನ್ ತಿಂಗಳಲ್ಲಿ 33 ಮಿ.ಮೀಟರ್, ಜುಲೈ ತಿಂಗಳಲ್ಲಿ 22 ಮಿ.ಮೀಟರ್ ಕೊರತೆಯಾಗಿದೆ. ತಿಂಗಳಾಂತ್ಯದವರೆಗೆ ಮಳೆ ಬೀಳದಿದ್ದರೆ ಒಂದಿಷ್ಟು ರಾಗಿ ಬೆಳೆ ಇಳುವರಿ ಮೇಲೆ ಪರಿಣಾಮ ಬೀರಲಿದೆ. ರಸಗೊಬ್ಬರ, ಬಿತ್ತನೆ ಬೀಜದ ಕೊರತೆ ಇಲ್ಲ. 91568 ಮೆಟ್ರಿಕ್ ಟನ್ ರಸಗೊಬ್ಬರ ಬೇಡಿಕೆಯಲ್ಲಿ 50809 ಮೆಟ್ರಿಕ್ ಟನ್ ದಾಸ್ತಾನು ಇದೆ ಎಂದರು. ಎಚ್.ಡಿ.ಕೋಟೆ, ಸರಗೂರು ತಾಲ್ಲಕಿನಲ್ಲಿ ಮುಸುಕಿನಜೋಳಕ್ಕೆ ಬೂದುರೋಗ ಕಾಣಿಸಿಕೊಂಡಿದ್ದು, ಶುಂಠಿ ಬೆಳೆಗೂ ರೋಗ ಕಾಣಿಸಿಕೊಂಡಿದೆ. ಇದನ್ನು ನಿವಾರಿಸಲು ರೈತರಿಗೆ ಔಷಧ ಕೊಡಲಾಗುತ್ತಿದೆ ಎಂದರು.


ಉಪ ಕಾರ್ಯದರ್ಶಿ ಡಾ.ಎಂ.ಕೃಷ್ಣರಾಜು, ಸವಿತಾ, ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ಎಂ.ಕೆ.ಮಲ್ಲೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಭಾಸ್ಕರ್ ನಾಯಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಧಿಕಾರಿ ಡಾ.ಪಿ.ಎಂ.ಕುವಾರಸ್ವಾಮಿ, ಪಶು ಸಂಗೋಪನ ಮತ್ತು ಪಶು ವೈದ್ಯಕೀಯ ಇಲಾಖೆ ಉಪ ನಿರ್ದೇಶಕ ನಾಗರಾಜು ಇದ್ದರು.