
ಬೆಳ್ತಂಗಡಿ: ನಾಟಿ ವೈದ್ಯ ಪರಂಪರೆಯ ಹಿನ್ನೆಲೆಯಿರುವ ಬಿಲ್ಲವ ಸಮಾಜದ ಬದುಕಿನಲ್ಲಿ ಆಟಿ ತಿಂಗಳು ಅನೇಕ ಕಾರಣಗಳಿಂದ ಮಹತ್ವದ್ದಾಗಿದೆ. ನಮ್ಮ ಸಾಂಪ್ರದಾಯಿಕ ಆಟಿ ತಿಂಗಳಲ್ಲಿ ಮನೆ ಮನೆಯಲ್ಲಿ ಆಚರಣೆಯಲ್ಲಿದ್ದ ಅನೇಕ ವಿಚಾರಗಳನ್ನು, ಅದರ ಮಹತ್ವವನ್ನು ಸಂಘ ಸಂಸ್ಥೆಗಳ ಮೂಲಕ ಜನಮಾನಸಕ್ಕೆ ತೋರಿಸುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ನಿವೃತ್ತ ಎಸ್.ಪಿ.ಪೀತಾಂಬರ ಹೇರಾಜೆ ಹೇಳಿದರು.ಅವರು ಭಾನುವಾರ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ, ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಸಹಕಾರದಲ್ಲಿ, ಬೆಳ್ತಂಗಡಿ ಬಿಲ್ಲವ ಮಹಿಳಾ ವೇದಿಕೆ ನೇತೃತ್ವದಲ್ಲಿ ನಡೆದ ಶ್ರೀ ಗುರು ನಾರಾಯಣ ಸಭಾಂಗಣದಲ್ಲಿ ನಡೆದ ಆಟಿದ ಅಟಿಲ್ದ ಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸಂಪನ್ಮೂಲ ವ್ಯಕ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿ ಶಾಲೆಯ ಮುಖ್ಯ ಶಿಕ್ಷಕಿ ಸೇವಂತಿ ನಿರಂಜನ್ ಮಾತನಾಡಿ, “ಆಟಿ ಆಚರಣೆಗಳ ಹಿಂದೆ ವೈಜ್ಞಾನಿಕ, ಆಯುರ್ವೇದ ಹಾಗೂ ದೈವ ದೇವರ ನಂಬಿಕೆಗಳಿವೆ. ಆ ಮೂಲಕ ನಮ್ಮ ಸಂಸ್ಕೃತಿಯ ಸಾರವನ್ನು ಅರಿಯಬಹುದು” ಎಂದು ಹೇಳಿ ತುಳುನಾಡಿ ಆಟಿ ತಿಂಗಳ ಹಿನ್ನೆಲೆ, ಮಹತ್ವ ಮತ್ತು ಆಚರಣೆಗಳ ಕುರಿತು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಜಯ ವಿಕ್ರಮ್ ಕಲ್ಲಾಪು ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಪ್ರಾಚಾರ್ಯ ಕೃಷ್ಣಪ್ಪ ಪೂಜಾರಿ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತೀಶ್ ಎಚ್., ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಪ್ರಸಾದ್ ಎಂ.ಕೆ., ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶಾಂಭವಿ ಬಂಗೇರ ಇದ್ದರು.ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಚೆನ್ನೆಮಣೆಗೆ ಕಾಯಿ ಹಾಕುವ ಮೂಲಕ ಉದ್ಘಾಟಿಸಲಾಯಿತು. ಸುಮಾರು ೪೭ ವಿವಿಧ ಬಗೆಯ ಆಟಿ ತಿಂಗಳ ತಿನಿಸುಗಳನ್ನು ಪ್ರದರ್ಶಿಸಿ ಊಟದ ಜತೆ ಬಂದ ಸಭಿಕರಿಗೆ ಹಂಚಲಾಯಿತು.
ಮಹಿಳಾ ವೇದಿಕೆಯ ಸದಸ್ಯೆ ರೋಹಿಣಿ ಪ್ರಾರ್ಥಿಸಿದರು. ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಮತಿ ಪ್ರಮೋದ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಸುಧಾಮಣಿ ರಮಾನಂದ್ ಕಾರ್ಯಕ್ರಮ ನಿರೂಪಿಸಿದರು.