ಬೆರಗಿನ ದೃಶ್ಯಾವಳಿಗಳ ಮಾಯಾಲೋಕ ‘ಕಾಂತಾರ ಅಧ್ಯಾಯ-1

7 ಸಾವಿರಕ್ಕೂ ಅದಿಕ ಪರದೆಗಳಲ್ಲಿ ಬಿಡುಗಡೆ

ಅ. 2ರಂದು ಬಿಡುಗಡೆ

ಇಡೀ ವಿಶ್ವಾದ್ಯಂತ ಸಂಚಲನ ಮೂಡಿಸಿದ್ದ ಚಿತ್ರ ಕಾಂತಾರ. ಇದೀಗ ಅದರ ‘ಪ್ರೀಕ್ವೆಲ್ ಕಾಂತಾರ ಅಧ್ಯಾಯ 1’ ಚಿತ್ರ ಬಿಡುಗಡೆ ಸನಿಹದಲ್ಲಿದೆ. ಇದೀಗ ಬಿಡುಗಡೆಯಾಗಿರುವ ಟ್ರೈಲರ್ ನಲ್ಲಿ ದೃಶ್ಯವೈಭವದ ರಸದೌತಣ ನೀಡುತ್ತಿದೆ. ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳಲು ಮಾಧ್ಯಮಗಳ ಮುಂದೆ ಬಂದಿತ್ತು ಚಿತ್ರತಂಡ.

ಕಾಂತಾರ ಅಧ್ಯಾಯ 1 ಚಿತ್ರ, ಅಕ್ಟೋಬರ್ 2ರಂದು ಭಾರತದಾದ್ಯಂತ 7ಸಾವಿರಕ್ಕೂ ಹೆಚ್ಚು ಪರದೆಗಳಲ್ಲಿ ಬಿಡುಗಡೆ ಆಗುತ್ತದೆ. ಜೊತೆಗೆ 30 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಇದೆ ಮೊದಲಬಾರಿಗೆ ಕನ್ನಡ ಸಿನಿಮಾವೊಂದು ಸ್ಪ್ಯಾನಿಷ್ ಭಾಷೆಯಲ್ಲಿ ಡಬ್ಬಿಂಗ್ ಕೂಡ ಆಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಬೇರೆ ಮಹಾನಗರಗಳಲ್ಲೂ ಸುದ್ದಿಗೋಷ್ಟಿ ಮಾಡುವ ಯೋಜನೆ ಇದೆ’ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಮಾಹಿತಿ ಹಂಚಿಕೊಂಡರು.

ಚಿತ್ರದಲ್ಲಿ ರಾಣಿಯಾಗಿ ನಟಿಸಿರುವ ರುಕ್ಮಿಣಿ ವಸಂತ ಮಾತನಾಡಿ, ‘ಇದು ಮನಸಿಗೆ ತುಂಬಾ ಹತ್ತಿರವಾದ ಚಿತ್ರ. ವೃತ್ತಿಯ ಪ್ರಾರಂಭದಲ್ಲೆ ಇಂತಹ ಮಹತ್ವದ ಪಾತ್ರ ಸಿಕ್ಕಿದ್ದು ಖುಷಿ ಆಯ್ತು. ಈ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ತಂಡದ ಸಪೋರ್ಟ್ ತುಂಬಾ ಸಿಗತಾ ಇತ್ತು.‌ ಹಾಗಾಗಿ ಅಷ್ಟಾಗಿ ಕಷ್ಟ ಎನಿಸಲಿಲ್ಲ’ ಎಂದರು.

ಐದು ವರ್ಷಗಳ ಹಿಂದೆ ಪೋನ್ ನಲ್ಲಿ ಒಂದು ಲೈನ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದವರು ವಿಜಯ್ ಕಿರಗಂದೂರ್ ಅವರು. ಈ ಚಿತ್ರದಲ್ಲಿ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು ಖುಷಿ ಇದೆ. ಈ ಚಿತ್ರದ ಹಿಂದೆ ಒಂದು ಶಕ್ತಿಯಿರುವುದು ಖಂಡಿತ’ ಎಂದು ಚಿತ್ರದ ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯನ್ ಪೋಸ್ಟ್‌ ಕವರ್ ಹಾಗೂ ಪಿಕ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು.ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗೌತಮ್ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ಆದರ್ಶ, ಸಾಹಸ ನಿರ್ದೇಶಕ ಅರ್ಜುನ್, ಸಂಕಲನಕಾರ ಸುರೇಶ್, ನೃತ್ಯ ನಿರ್ದೇಶಕ ಭೂಷಣ್ ಮುಂತಾದವರು ತಮ್ಮ “ಕಾಂತಾರ ಅಧ್ಯಾಯ ೧” ರ ಬಗ್ಗೆ ಅನುಭವ ಹಂಚಿಕೊಂಡರು.

———

ಕಾಂತಾರ ತುಂಬಾ ಕಷ್ಟಗಳನ್ನು ದಾಟಿ ಬಿಡುಗಡೆ ಹಂತಕ್ಕೆ ಬಂದಿದೆ. ಇದು ಭಾವನಾತ್ಮಕ ಪಯಣ ಕೂಡ ಹೌದು. ನನ್ನ ಈ ಪ್ರಯತ್ನಕ್ಕೆ ಇಡಿ ತಂಡ ಶಕ್ತಿಯಾಗಿ ನಿಂತಿದೆ. ಚಿತ್ರೀಕರಣದ ವೇಳೆ ನಾಲ್ಕೈದು ಸಾರಿ ನಾನು ಸಾವಿನ ಬಾಗಿಲಿಗೆ ಹೋಗಿ ಬಂದಿದ್ದೇನೆ. ಆ ದೈವದ ಶಕ್ತಿ ನಮ್ಮ ಜೊತೆ ನಿಂತಿದೆ ಅನಿಸಿತು. ಈ ಚಿತ್ರಕ್ಕಾಗಿ ಸುಮಾರು ನಾಲ್ಕುವರೇ ಲಕ್ಷ ಜನರಿಗೆ ಊಟ ಹಾಕಿದ್ದಾರೆ ನಿರ್ಮಾಪಕರು. ‘ಕಾಂತಾರ’ ಶುರು ಮಾಡಿದಾಗ ಸಿನಿಮಾ ಆಗಿತ್ತು.ಇದೀಗ ಭಾವನಾತ್ಮಕ ಪಯಣವಾಗಿದೆ. -ರಿಶಬ್ ಶೆಟ್ಟಿ,ನಿರ್ದೇಶಕ, ನಟ