
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,22- ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗ ಮಂದಿರದಲ್ಲಿ ಇಂದು ನಡೆಯುತ್ತಿರುವ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ “ಕಲಾ ವೈಭವ” ಕಲಾಸಕ್ತರ ಮನಸೂರೆಗೊಂಡಿತು.
ಕಾರ್ಯಕ್ರಮದ ಆರಂಭಕ್ಕೂ ಮುನ್ನ ನಗರದ ಹೆಚ್.ಆರ್.ಜಿ.ವೃತ್ತದಲ್ಲಿನ ಬಸವೇಶ್ವರನ ಪುತ್ಥಳಿಗೆ ಪೂಜೆ ಸಲ್ಲಿಸಿ ಜನಪದ ಕಲಾ ತಂಡಗಳ ಮೆರವಣಿಗೆಗೆ ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಮೇಯರ್ ಪಿ.ಗಾದೆಪ್ಪ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯ ಅಧ್ಯಕ್ಷ ಹೆಚ್. ತಿಮ್ಮನಗೌಡ ಮೊದಲಾದವರು ಚಾಲನೆ ನೀಡಿದರು.
ಕಲಾವಿದರ ಸಂಘದ ಅಧ್ಯಕ್ಷ ಯಲ್ಲಗೌಡ ಶಂಕರಬಂಡೆ, ಬಯಲಾಟದ ಪಂಪಾಪತಿ, ವೀರೇಶ್ ದಳವಾಯಿ, ಕಸಾಪ ಜಿಲ್ಲಾ ಅಧ್ಯಕ್ಷ ನಿಷ್ಟಿ ರುದ್ರಪ್ಪ, ಸುಬ್ಬಣ್ಣ, ರಮಣಪ್ಪ ಭಜಂತ್ರಿ, ಹಚ್ಚೊಳ್ಳಿ ಅಮರೇಶ್, ಸುಂಕಣ್ಣ, ಮಂಜುನಾಥ ಗೋವಿಂದವಾಡ, ಮೊದಲಾದವರ ಮಾರ್ಗದರ್ಶನದಲ್ಲಿ. ಮೆರವಣಿಗೆ ಹೆಚ್.ಆರ್.ಗವಿಯಪ್ಪ ವೃತ್ತದಿಂದ ರಂಗಮಂದಿರದ ವರಗೆ ಕಹಳೆ, ತಾಷಾರಂ ಡೋಲ್, ಡೊಳ್ಳು, ವೀರಗಾಸೆ, ನಂದಿಧ್ವಜ, ಕೋಲಾಟ, ಗೊಂಬೆಕುಣಿತ, ಪೂಜಾ ಕುಣಿತಾ, ಛತ್ರ ಕುಣಿತ, ಜೋಗತಿ ಕುಣಿತ, ಗೊರವರ ಕುಣಿತ, ಹಕ್ಕಿ ಪಿಕ್ಕಿ ಕುಣಿತ ಮೊದಲಾದ ತಂಡಗಳೊಂದಿಗೆ “ವಸಂತ ವೈಭವದ” ಮೆರವಣಿಗೆ ಸಾಗಿಬಂತು.
ಹಂಪಿ ಉತ್ಸವ, ಕುರುಗೋಡು ಉತ್ಸವ, ಕಂಪ್ಲಿ ಉತ್ಸವಗಳು ನಡೆದು ಬಳ್ಳಾರಿ ಉತ್ಸವ ನಡೆಯಲಿಲ್ಲ ಎಂಬ ಕಲಾಸಕ್ತರ ನೋವನ್ನು ಈ “ವಸಂತ ವೈಭವ” ಕಲಾ ತಂಡಗಳ ಮೆರವಣಿಗೆ ಒಂದಿಷ್ಟು ಶಮನ ಮಾಡಿದಂತೆ ಇತ್ತು ಎನ್ನಬಹುದು.
ನಂತರ ರಂಗಮಂದಿರದಲ್ಲಿಯೂ ಕಲಾ ತಂಡಗಳಿಂದ ನೃತ್ಯ ಪ್ರದರ್ಶನ ನಡೆಯಿತು.ವೇದಿಕೆ ಸಮಾರಂಭವನ್ನು ಲೋಕಸಭಾ ಸದಸ್ಯ ಈ.ತುಕರಾಂ ಉದ್ಘಾಟನೆ ಮಾಡಿದರು. ಸಂಘಕ್ಕೆ ಸಂಸದ ತುಕರಾಂ ಅವರು ನೀಡಿದ 5 ಲಕ್ಷ ರೂ ದತ್ತಿನಿಧಿಯಿಂದ ಈ ವರ್ಷಸಿರುಗುಪ್ಪದ ಜನಪದ ಹಾಡುಗಳ ಕಲಾವಿದ ಸಾಧುರಾಯಪ್ಪ ಅವರಿಗೆ ” ಸುಭ್ರಮ್ಮ ಮನ್ಸೂರು ಪ್ರಶಸ್ತಿ” ನೀಡಿ ಗೌರವಿಸಲಾಯ್ತು. ಪ್ರಶಸ್ತಿಯು 25 ಸಾವಿರ ರೂ ನಗದು , ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.
ನಂತರ ಹಿಂದುಸ್ಥಾನಿ, ಸುಗಮ ಸಂಗೀತ, ಸಂಗೀತ ವಾದ್ಯಗೋಷ್ಟಿ, ನಾಟಕ, ನೃತ್ಯ, ಹಾಡುಗಾರಿಕೆ ಮೊದಲಾದ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು. ರಾತ್ರಿವರೆಗೆ ಕಾರ್ಯಕ್ರಮಗಳ ಪ್ರದರ್ಶನ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಿ ಗೌರವಿಸಲಾಯ್ತು.
ಸಮಾರೋಪ ಸಮಾರಂಭ ಸಂಜೆ 5 ಕ್ಕೆ ಇದ್ದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಅಧ್ಯಕ್ಷತೆವಹಿಸಲಿದ್ದು ಇತರೇ ಗಣ್ಯರು ಪಾಲ್ಗೊಳ್ಳುವರು.





























