ಬಳ್ಳಾರಿ ಎಪಿಎಂಸಿ ವಹಿವಾಟು ಬಂದ್ ಆರನೇ ದಿನಕ್ಕೆ


* ಶೇಂಗಾ ಖರೀದಿಯಲ್ಲಿ ಖರೀದಿದಾರರ ವಂಚನೆ ಆರೋಪ
* ಹಸಿ ಶೇಂಗಾ ತರಬೇಡಿ:ಖರೀದಿದಾರರು
* ಶೇಂಗಾ ಇಲ್ಲದಿದ್ದರೆ ಯಾವುದನ್ನು ತೂಕ ಹಾಕಲ್ಲ:ಹಮಾಲರು.
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.06:
ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ವಹಿವಾಟು ಸ್ಥಗಿತಗೊಂಡು ಇಂದು ಆರನೇ ದಿನಕ್ಕೆ ಕಾಲಿರಿಸಿದೆ. ಇದರಿಂದಾಗಿ ಮುಂಗಾರು ಹಂಗಾಮಿನಿ ಫಸಲು ಮಾರಾಟಕ್ಕಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಮಾರುಕಟ್ಟೆಗೆ ಈ ಸಮಯದಲ್ಲಿ ಬಹುತೇಕ ಆಂದ್ರಪ್ರದೇಶದಿಂದ ಶೇಂಗಾ ಬೆಳೆ ಮಾರುಕಟ್ಟಿಗೆ ಬರುತ್ತದೆ. ಇದರ ವಹಿವಾಟೇ ಮಾರುಕಟ್ಟೆಯಲ್ಲಿ ಪ್ರಮುಖವಾಗಿರುತ್ತಿತ್ತು.
ಆದರೆ ಕಳೆದ ಒಂದು ವಾರದ ಹಿಂದೆ ಆಂದ್ರಪ್ರದೇಶದ ರೈತರು ತಂದ ಶೇಂಗಾ ಮಾಲನ್ನು ಖರೀದಿದಾರರು ಅತೀ‌ಕಡಿಮೆ ಬೆಲೆಗೆ ಟೆಂಡರ್ ಕರೆದರು. ಏಳು ಸಾವಿರ ರೂ ಆಜು ಬಾಜಿದ್ದ ಧರ, ನಾಲ್ಕು ವರೆ ಸಾವಿರ ಅಂದಾಜಿಗೆ ತರಲಾಯ್ತು.
ಇದರಿಂದ ಬೇಸತ್ತ ರೈತರು ಬಳ್ಳಾರಿ ಎಪಿಎಂಸಿ ಮಾರುಕಟ್ಟೆಯಲ್ಲಿ ಅಧಿಕಾರಿಗಳು ಮತ್ತು ಖರೀದಿದಾರರು ಸೇರಿ ಬೆಲೆಯಲ್ಲಿ ಇಲ್ಲ ಸಲ್ಲದ ಸಬೂಬು ಹೇಳಿ ವಂಚನೆ ಮಾಡುತ್ತಿದ್ದಾರೆ. ಈ ಮಾರುಕಟ್ಟೆಗೆ ಶೇಂಗಾ ತರಬೇಡಿ ಎಂದು ವೀಡಿಯೋ ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಟ್ಟರು.
ಇದರಿಂದ ಕುಪಿತಗೊಂಡ ಖರೀದಿದಾರರು ಒಗ್ಗಟ್ಟಾಗಿ ಶೇಂಗಾ ಮಾಲು ಹಸಿ ಇದೆ. ಇದನ್ನು ಖರೀದಿಸಿ ತುಂಬಿದರೆ ಬೂಜು ಬಂದು ಹಾಳಾಗುತ್ತೆ. ಒಣಗಿಸಲು ನಮಗೆ ಆಗಲ್ಲ. ರೈತರೇ ಒಣಗಿಸಿ ತರಬೇಕು ಎಂದು ಖರೀದಿ ಮಾಡದಿರಲು ನಿರ್ಧರಿಸಿ ಟೆಂಡರ್ ಹಾಕುವುದನ್ನು ನಿಲ್ಲಿಸಿ ಇಂದಿಗೆ ಆರು ದಿನ‌ ಕಳೆದಿದೆ.
ಈ ಮಧ್ಯೆ ಕಳೆದ ಮೂರು ದಿನಗಳಿಂದ ಹಮಾಲರು ಶೇಂಗಾ ಖರೀದಿ ಮಾಡದಿದ್ದರೆ ನಾವು ಇತರೇ ದವಸ ಧಾನ್ಯಗಳನ್ನು ತೂಕ ಹಾಕಲ್ಲ ಎಂದು ಮುಷ್ಕರ ಮಾಡಿದ್ದಾರೆ.
ಈ ಬಗ್ಗೆ ನಿನ್ನೆ ಎಪಿಎಂಸಿ ಕಾರ್ಯದರ್ಶಿ ಅಧ್ಯಕ್ಷರು ಖರೀದಿದಾರರ ಸಭೆ ಕರೆದು ಚರ್ಚೆ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲವಂತೆ. ಹೀಗಾಗಿ ಮಾರುಕಟ್ಟೆ ಜನರಿಲ್ಲದೆ ಬಣಗುಡುತ್ತಿದೆ. ವ್ಯಾವಾರಸ್ಥರು, ಎಜೆಂಟರು, ಹಮಾಲರು ಕೆಲಸವಿಲ್ಲದೆ ಖಾಲಿ ಇದ್ದಾರೆ.
ಈ ಬಗ್ಗೆ ವಿವರಣೆ ಕೇಳಲು ಮಾರುಕಟ್ಟೆ ಕಾರ್ಯದರ್ಶಿ, ಅಧ್ಯಕ್ಷರಿಗೆ ಕರೆ ಮಾಡಿದರೆ ಸ್ವೀಕರಿಸಲಿಲ್ಲ.