
ಬಂಟ್ವಾಳ : ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದ ರಾಣಿ ಅಬ್ಬಕ್ಕ ವೇದಿಕೆಯ ಪಂಜೆ ಮಂಗೇಶರಾಯ ಸಭಾಂಗಣದಲ್ಲಿ ಮಾರ್ಚ್ ೨೬ ರಿಂದ ೨೮ ರ ತನಕ ನಡೆಯಲಿರುವ ದ.ಕ.ಜಿಲ್ಲಾ ಮಟ್ಟದ ೨೮ ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗುರುವಾರ ಅದ್ಧೂರಿ ಚಾಲನೆ ದೊರೆಯಿತು.
ಬಿ.ಸಿ.ರೋಡ್ – ಕೈಕಂಬ ಪೊಳಲಿ ದ್ವಾರದ ಬಳಿ ಕನ್ನಡ ಸಾಂಸ್ಕೃತಿಕ ದಿಬ್ಬಣ ಮೆರವಣಿಗೆಯನ್ನು ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ.ತುಕರಾಮ ಪೂಜಾರಿ ಉದ್ಘಾಟಿಸಿದರು.
ಸಮ್ಮೇಳನಾಧ್ಯಕ್ಷ ಚಿದಂಬರ ಬೈಕಂಪಾಡಿ ಬೆಳ್ಳಿ ರಥದಲ್ಲಿ ಕುಳಿತು ಮೆರವಣಿಗೆಯಲ್ಲಿ ಸಾಗಿ ಬಂದರು. ಈ ಸಂದರ್ಭ ದ.ಕ.ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಎಂ.ಪಿ.ಶ್ರೀನಾಥ್, ಬಂಟ್ವಾಳ ತಾಲೂಕು ಅದ್ಯಕ್ಷ ವಿಶ್ವನಾಥ ಬಂಟ್ವಾಳ ಉಪಸ್ಥಿತರಿದ್ದರು.
ಮೆರವಣಿಗೆಯಲ್ಲಿ ಕೊಂಬು, ಚೆಂಡೆ, ಬೇಂಡ್, ಕೀಲು ಕುದುರೆ, ಡೊಳ್ಳು ಕುಣಿತ, ಸ್ಕೌಟ್ಸ್, ಕುಣಿತ ಭಜನೆ, ಚಿಂಪಾಂಜಿ, ಬೆಂಕಿ ಉಗುಳುವ ಆಟ, ಕಲಶ ಹಿಡಿದ ಮಹಿಳೆಯರ ತಂಡಗಳು ಗಮನ ಸೆಳೆಯಿತು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷ ರಘುನಾಥ ಸೋಮಯಾಜಿ ಎರಕಳ ಮಾತನಾಡಿ, ಇಂತಹ ಸಮ್ಮೇಳನಗಳಿಂದ ಸಹೋದರತ್ವ ಭಾವನೆ ಬೆಳೆಸುವಂತಹ ಕಾರ್ಯಕ್ರಮ ಆಗಲಿ ಎಂದರು.
ಪ್ರಧಾನ ಕಾರ್ಯದರ್ಶಿ ಅಬೂಬಕರ್ ಅಮ್ಮುಂಜೆ, ಕಾರ್ಯದರ್ಶಿಗಳಾದ ದೇವಪ್ಪ ಕುಲಾಲ್, ರಾಮದಾಸ್ ಬಂಟ್ವಾಳ್, ಚಂದ್ರಹಾಸ ಶೆಟ್ಟಿ, ಕೋಶಾಧಿಕಾರಿ ಸುಭಾಶ್ಚಂದ್ರ ಜೈನ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಅಶೋಕ್ ಶೆಟ್ಟಿ ಸರಪಾಡಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಸತೀಶ್ ಪೈ ಕುಳ್ಳಪ್ಪು ನಿರ್ದೇಶನದ “ಮೂರು ಮುತ್ತು” ಕನ್ನಡ ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ರವೀಂದ್ರ ಕುಕ್ಕಾಜೆ ಹಾಗೂ ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು.
























