
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಡಿ.13: ಇಲ್ಲಿನ ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾಗಿ 24ನೇ ವಾರ್ಡ್ ಸದಸ್ಯ ಶ್ರೀನಿವಾಸ ಮೋತ್ಕರ್ ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ.
ನಗರದ ಮಾಜಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ, ಪಕ್ಷದ ಮುಖಂಡರಾದ ಗುತ್ತಿಗ ನೂರು ವಿರುಪಾಕ್ಷಗೌಡ, ಮಲ್ಲನಗೌಡ ಎಸ್, ಸುರೇಖಾ ಮಲ್ಲನಗೌಡ, ಸಿ.ಇಬ್ರಾಹಿಂ, ಹೆಚ್.ಹನುಮಂತಪ್ಪ, ಕೆ.ಎ.ವೇಮಣ್ಣ ಮತ್ತಿತರರಿದ್ದರು.
ನಂತರ ಮಾತನಾಡಿದ ಮೋತ್ಕರ್ ಅವರು, ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಆಡಳಿತ ನಡೆಸುವಲ್ಲಿ ಆಡಳಿತಾರೂಡ ಕಾಂಗ್ರೆಸ್ ಪಕ್ಷ ಯಶ ಕಂಡಿಲ್ಲ. ಜನರ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುತ್ತಿಲ್ಲ. ಈನಿಟ್ಟಿನಲ್ಲಿ ನಮ್ಮ ಪಕ್ಷದ ಎಲ್ಲ ಸದಸ್ಯರು ಒಗ್ಗೂಡಿ ಸಮರ್ಥ ಪ್ರತಿಪಕ್ಷವಾಗಿ ತಾವು ಕಾರ್ಯ ನಿರ್ವಹಿಸುವುದಾಗಿ ಹೇಳಿದರು.
ಪಾಲಿಕೆಯ ಬಿಜೆಪಿ ಸದಸ್ಯರಿಗೆ ಸರಿಯಾಗಿ ಅನುದಾನ ನೀಡದೆ ತಾರತಮ್ಯ ಮಾಡುತ್ತಿದೆ. ನಗರದ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿಲ್ಲ. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.
ಗಡಗಿ ಚನ್ನಪ್ಪ ವೃತ್ತದ ಅಭಿವೃದ್ಧಿ ಸೇರಿದಂತೆ ಈ ಹಿಂದೆ ಬಿಜೆಪಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ನವರು ತಾವೇ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದೆ ಸಚಿವರಾಗಿದ್ದ ಶ್ರೀರಾಮುಲು, ಶಾಸಕರಾಗಿದ್ದ ಸೋಮಶೇಖರ ರೆಡ್ಡಿ ಅವರು ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ಮಾತ್ರ ಕಾಂಗ್ರೆಸ್ ನವರು ಮಾಡುತ್ತಿದ್ದಾರೆಂದರು.

























