Home ಜಿಲ್ಲೆ ಮೈಸೂರು ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸಾಧನೆ

ನೈರುತ್ಯ ರೈಲ್ವೆ ಮೈಸೂರು ವಿಭಾಗದ ಸಾಧನೆ

ಸಂಜೆವಾಣಿ ನ್ಯೂಸ್
ಮೈಸೂರು: ಏ.04:-
2025-26ನೇ ಹಣಕಾಸು ವರ್ಷದಲ್ಲಿ ನೈರುತ್ಯ ರೈಲ್ವೆ ಮೈಸೂರು ವಿಭಾಗ ಸಮಗ್ರ ಬೆಳವಣಿಗೆ ಕಂಡಿದ್ದು, ಕಾರ್ಯಾಚರಣೆ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‍ಎಂ) ಮುದಿತ್ ಮಿತ್ತಲ್ ತಿಳಿಸಿದರು.


ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಭಾಗ 449.13 ಕೋಟಿ ಪ್ರಯಾಣಿಕ ಆದಾಯ ಗಳಿಸಿ ಶೇ.1.49ರಷ್ಟು ಬೆಳವಣಿಗೆ ಕಂಡಿದೆ. ಕಳೆದ ಸಾಲಿನಲ್ಲಿ 419.89 ಕೋಟಿ ವರಮಾನ ಬಂದಿತ್ತು. ಟಿಕೆಟ್ ಪರಿಶೀಲನೆ ಕಾರ್ಯಕ್ಷಮತೆ ಅತ್ಯುತ್ತಮವಾಗಿ ಮುಂದುವರಿದಿದ್ದು, ಇದರಿಂದ 9.75 ಕೋಟಿ ಆದಾಯ ದೊರೆತಿದೆ ಎಂದು ಮಾಹಿತಿ ನೀಡಿದರು.
ವಾಣಿಜ್ಯ ಜಾಹೀರಾತು ಮೂಲದಿಂದ ದಾಖಲೆಯ 3.17 ಕೋಟಿ, ಪಾರ್ಕಿಂಗ್‍ನಿಂದ 4.02 ಕೋಟಿ, ಕೇಟರಿಂಗ್‍ನಿಂದ 2.61 ಕೋಟಿ ಆದಾಯ ಬಂದಿದೆ. ಪಾರ್ಸೆಲ್ ಆದಾಯ 11.81 ಕೋಟಿಗೆ ತಲುಪಿದ್ದು, ಎಸ್‍ಎಲ್‍ಆರ್ ಹಾಗೂ ವಿಪಿಎಚ್ ಮೂಲಕ ಪಾರ್ಸೆಲ್ ವರಮಾನ 5.85 ಕೋಟಿ ಸಂಗ್ರಹವಾಗಿದೆ ಎಂದು ಹೇಳಿದರು.


2ನೇ ಅತ್ಯುನ್ನತ ಸಾಧನೆ: ಸರಕು ಸಾಗಣೆ ವಿಭಾಗದಲ್ಲೂ ಉತ್ತಮ ಸಾಧನೆಯಾಗಿದ್ದು, 900.19 ಕೋಟಿ ಆದಾಯ ಬಂದಿದೆ. ಇದು ರೈಲ್ವೆ ವಿಭಾಗದ 2ನೇ ಅತ್ಯುನ್ನತ ಸಾಧನೆಯಾಗಿದೆ. 10.586 ಮಿಲಿಯನ್ ಟನ್ ಸರಕು ಸಾಗಿಸಿದ್ದು, ಇದರಲ್ಲಿ 8.664 ಮಿಲಿಯನ್ ಟನ್ ಉಕ್ಕು ಸೇರಿದೆ. ಇದು ವಿಭಾಗದ ಇತಿಹಾಸದಲ್ಲಿ 2ನೇ ಹೆಚ್ಚಿನ ಲೋಡ್ ಆಗಿದೆ. 116 ಎನ್‍ಎಂಜಿ ರೇಕ್ (90 ದ್ವಿಚಕ್ರವಾಹನ, 26 ನಾಲ್ಕುಚಕ್ರದ ವಾಹನಗಳು)ಗಳ ಲೋಡಿಂಗ್‍ನಿಂದ 23.94 ಕೋಟಿ ಆದಾಯ ಬಂದಿದೆ ಎಂದು ತಿಳಿಸಿದರು.


71 ರೈಲುಗಳ ವೇಗ ಹೆಚ್ಚಿಸಲಾಗಿದ್ದು (ಗಂಟೆಗೆ ಸರಾಸರಿ 110 ಕಿ.ಮೀ.), ಹೊಸದಾಗಿ 44 ರೈಲುಗಳನ್ನು ವಿದ್ಯುತ್ ಎಂಜಿನ್‍ನಿಂದ ಓಡಿಸಲಾಗುತ್ತಿದೆ. ಇದರಿಂದಾಗಿ, ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದ ಉಂಟಾಗಿರುವ ಡೀಸೆಲ್ ಕೊರತೆ ನಮ್ಮಲ್ಲಿ ಬಾಧಿಸದಂತೆ ಕ್ರಮ ವಹಿಸಲಾಗಿದೆ. 28 ನಿಲ್ದಾಣಗಳಲ್ಲೂ ಅಡಿಟ್ ಪೂರ್ಣಗೊಂಡಿದೆ. ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದ ವಿದ್ಯುದ್ದೀಕರಣ ಕಾಮಗಾರಿ ಕೈಗೊಂಡಿರುವುದು ಮಹತ್ವದ ಸಾಧನೆಯಾಗಿದೆ ಎಂದು ಮಾಹಿತಿ ನೀಡಿದರು.


1.17 ಕೋಟಿ ಮೌಲ್ಯದ ವಸ್ತುಗಳನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿದೆ. 132 ಮಕ್ಕಳನ್ನು ರಕ್ಷಿಸಲಾಗಿದೆ. 88.92 ಕೋಟಿ ಆದಾಯ (ಶೇ.53.55 ಹೆಚ್ಚಳ) ಸಾಧಿಸಲಾಗಿದೆ. ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಪಾವತಿ ವ್ಯವಸ್ಥೆ ಪರಿಚಯಿಸಲಾಗಿದೆ. ಮೂಲಸೌಲಭ್ಯಗಳ ವೃದ್ಧಿಗೆ ಮತ್ತು ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರಿನ ಕುವೆಂಪುನಗರದಲ್ಲಿರುವ ಟಿಕೆಟ್ ಬುಕಿಂಗ್ ಕೇಂದ್ರದಲ್ಲಿ ನಾನ್ ರೈಲ್ ಹೆಡ್ ಪಿಆರ್‍ಎಸ್ ಸೌಲಭ್ಯ ಪ್ರಾರಂಭಿಸಲಾಗಿದೆ. ಇದರಿಂದ ನಗದು ರಹಿತ, ಸುಗಮ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ ಎಂದು ಹೇಳಿದರು.


ವಂದೇ ಭಾರತ್ ರೈಲು ಡಿಪೆÇ: ಮೈಸೂರಿನಲ್ಲಿ ವಂದೇ ಭಾರತ್ ಡಿಪೆÇ ನಿರ್ಮಾಣಕ್ಕೆ ಯೋಜಿಸಲಾಗಿದ್ದು, ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಂದಾಜು 400 ಕೋಟಿ ಬೇಕಾಗಲಿದೆ. ಇದಕ್ಕೆ ಅನುಮತಿ ಸಿಕ್ಕಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆ ಇಲ್ಲಿಯೇ ನಡೆಯಲಿದೆ. ಇಲ್ಲಿಂದ ಹೆಚ್ಚಿನ ಸಂಖ್ಯೆಯ ವಂದೇ ಭಾರತ್ ರೈಲುಗಳ ಕಾರ್ಯಾಚರಣೆಯೂ ಸಾಧ್ಯವಾಗಲಿದೆ ಎಂದು ಮುದಿತ್ ಮಿತ್ತಲ್ ತಿಳಿಸಿದರು.
ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಗಿರೀಶ ಧರ್ಮರಾಜ ಕಲಗೊಂಡ ಇದ್ದರು.