Home ಜಿಲ್ಲೆ ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ‘ಕರಾಳ ದಿನ’ ಆಚರಣೆ.

ನಾಲ್ಕು ಕಾರ್ಮಿಕ ಸಂಹಿತೆಗಳ ವಿರುದ್ಧ ‘ಕರಾಳ ದಿನ’ ಆಚರಣೆ.

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.01: ಕೇಂದ್ರ ಕಾರ್ಮಿಕ ಸಂಘಟನೆಗಳ  ಜಂಟಿ   ಸಮಿತಿ (ಜೆಸಿಟಿಯು) ಮತ್ತು ಸ್ವತಂತ್ರ ವಲಯ ಒಕ್ಕೂಟಗಳು ಹಾಗೂ ಅಸೋಸಿಯೇಷನ್ಗಳು ಏಪ್ರಿಲ್ 1 ರಂದು ‘ಕರಾಳ ದಿನ’ ವನ್ನಾಗಿ ಆಚರಿಸಲು ಕಾರ್ಮಿಕ ಸಂಘಟನೆಗಳಿಗೆ ಕರೆ ನೀಡಿವೆ. ಈ ನಾಲ್ಕು ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕಾಗಿ ಕೇಂದ್ರ ನಿಯಮಗಳ ಅಧಿಸೂಚನೆಯನ್ನು ಹೊರಡಿಸುವುದಾಗಿ ಕೇಂದ್ರ ಸರ್ಕಾರವು ಈ ಹಿಂದೆ ಘೋಷಿಸಿದ ದಿನ ಇದಾಗಿದೆ. ಈ ಹಿನ್ನಲೆಯಲ್ಲಿ ಜೆಸಿಟಿಯುನಿಂದ ಬಳ್ಳಾರಿಯ ಜಿಲ್ಲಾಧಿಕಾರಿ ಕಛೇರಿಯ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ವಿವಿಧ ಕೇಂದ್ರ ಕಾರ್ಮಿಕ ಸಂಘಟನೆಗಳ ಮುಖಂಡರು ಮಾತನಾಡಿ, “ವ್ಯವಹಾರದ ಸುಗಮಗೊಳಿಸುವಿಕೆ” (Ease of Doing Business) ಹೆಸರಿನಲ್ಲಿ ತರಲಾದ ಈ ಕಾರ್ಮಿಕ ವಿರೋಧಿ ಮತ್ತು ಉದ್ಯೋಗದಾತ ಪರವಾದ ಕಾರ್ಮಿಕ ಸಂಹಿತೆಗಳನ್ನು ಕೈಬಿಡಬೇಕೆಂದು ಕಾರ್ಮಿಕ ಸಂಘಟನೆಗಳು ನಿರಂತರವಾಗಿ ವಿರೋಧಿಸುತ್ತಿವೆ ಮತ್ತು ಒತ್ತಾಯಿಸುತ್ತಿವೆ. ಐತಿಹಾಸಿಕ ಫೆಬ್ರವರಿ 12 ರ ಸಾರ್ವತ್ರಿಕ ಮುಷ್ಕರದ ನಂತರವೂ, ಈ ಕಾರ್ಮಿಕ ಸಂಹಿತೆಗಳನ್ನು ಹಿಂತೆಗೆದುಕೊಳ್ಳಲು ಅಥವಾ ಈ ವಿಷಯದ ಕುರಿತು ಕೇಂದ್ರ ಕಾರ್ಮಿಕ ಸಂಘಟನೆಗಳೊಂದಿಗೆ ಅರ್ಥಪೂರ್ಣ ಸಭೆ ನಡೆಸಲು ಕೇಂದ್ರ ಸರ್ಕಾರವು ಹಿಂಜರಿಯುತ್ತಿದೆ.

ಅಲ್ಲದೆ, ಕರಡು ಹಂತದಿಂದಲೂ ಕಾರ್ಮಿಕ ಸಂಘಟನೆಗಳೊಂದಿಗೆ ಯಾವುದೇ ಸಮಾಲೋಚನೆ ನಡೆಸಲಾಗಿಲ್ಲ; ದೇಶದ ಕಾರ್ಮಿಕರ ಜೀವನದ ಮೇಲೆ ಇಷ್ಟೊಂದು ಗಂಭೀರ ಪರಿಣಾಮ ಬೀರುವ ವಿಷಯದ ಬಗ್ಗೆ ಚರ್ಚಿಸಲು ಯಾವುದೇ ‘ಭಾರತೀಯ ಕಾರ್ಮಿಕ ಸಮ್ಮೇಳನ’ವನ್ನು (ILC) ಕರೆದಿಲ್ಲ. ಇದು ಭಾರತವು ಸಹಿ ಹಾಕಿರುವ ಮತ್ತು ಬದ್ಧವಾಗಿರುವ ಅಂತರಾಷ್ಟ್ರೀಯ ಕಾರ್ಮಿಕ ಮಾನದಂಡಗಳ ಉಲ್ಲಂಘನೆಯಾಗಿದೆ. ಈ ಕಾರ್ಮಿಕ ಸಂಹಿತೆಗಳು ನಮ್ಮ ದೇಶದ ಸಂಪತ್ತು ಸೃಷ್ಟಿಕರ್ತರಾದ ಕಾರ್ಮಿಕ ವರ್ಗವನ್ನು ಮತ್ತೊಮ್ಮೆ ಬ್ರಿಟಿಷ್ ವಸಾಹತುಶಾಹಿ ಕಾಲದ ಶೋಷಣೆಯ ಪರಿಸ್ಥಿತಿಗೆ ತಳ್ಳಲಿವೆ ಎಂದರು.

ಎಐಯುಟಿಯುಸಿ ಜಿಲ್ಲಾ ಅಧ್ಯಕ್ಷರು ಎ. ದೇವದಾಸ್, ಸಿಐಟಿಯು ರಾಜ್ಯ ಉಪಾಧ್ಯಕ್ಷರು ಸತ್ಯಬಾಬು, ಬ್ಯಾಂಕ್ ನೌಕರರ ಯುನಿಯನ್ (ಬೆಫಿ)ಯ ಘನ ಮಲ್ಲಿಕಾರ್ಜುನ, ಮುಖಂಡರಾದ  ಸೋಮಶೇಖರ ಗೌಡ, ಡಾ. ಪ್ರಮೋದ್, ಎ. ಶಾಂತಾ, ಚಂದ್ರಕುಮಾರಿ, ಶರ್ಮಾಸ್, ಮಲ್ಲಮ್ಮ, ಚೇತನ್, ಮುರಳಿಕೃಷ್ಣ, ರಂಗಣ್ಣ. ಎನ್.ಎಂ. ಡಿ. ಸಿ  , ಹಾಸ್ಟೆಲ್, ವಿಮ್ಸ್  ಇನ್ನಿತರ ಗುತ್ತಿಗೆ ಕಾರ್ಮಿಕರು ಭಾಗವಹಿಸಿದ್ದರು.