
ಮಂಗಳೂರು-ನವ ಮಂಗಳೂರು ಬಂದರು ಪ್ರಾಧಿಕಾರವು ಗುರುವಾರ ಸಂಜೆ ೪ ಗಂಟೆಗೆ ಬರ್ತ್ ಸಂಖ್ಯೆ ೧೩ಕ್ಕೆ ಎಲ್ಪಿಜಿ ಟ್ಯಾಂಕರ್ ಎಂ.ಟಿ. ಅಪೋಲೋ ಓಶನ್ ಆಗಮನದೊಂದಿಗೆ ಮಹತ್ವದ ಮೈಲುಗಲ್ಲನ್ನು ದಾಖಲಿ ಸಿದೆ. ಈ ಹಡಗು ಬಂದರು ಸ್ಥಾಪನೆಯ ನಂತರ ಆಗಮಿಸಿದ ೪೦,೦೦೦ನೇ ಹಡಗು ಎಂಬ ವಿಶೇಷ ದಾಖಲೆಯನ್ನು ಮಾಡಿದೆ.
ಪ್ರಾಧಿಕಾರದ ಉಪಾಧ್ಯಕ್ಷೆ ಎಸ್. ಶಾಂತಿ ಹಡಗಿನ ಕ್ಯಾಪ್ಟನ್ ಅವರನ್ನು ಸನ್ಮಾನಿಸಿ ಹಡಗನ್ನು ಅಧಿಕೃತವಾಗಿ ಸ್ವಾಗತಿಸಿದರು. ಈ ಸಂದರ್ಭ ಬಂದರುದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಎಂ.ಟಿ. ಅಪೋಲೋ ಓಶನ್ ಹಡಗು ೧೬,೦೦೦ ಮೆಟ್ರಿಕ್ ಟನ್ ಎಲ್ಪಿಜಿ ಇಳಿಸಲಿದೆ. ಇದು ಪ್ರಾದೇಶಿಕ ಕೈಗಾರಿಕಾ ಹಾಗೂ ಗೃಹ ಬಳಕೆಯ ಅಗತ್ಯಗಳನ್ನು ಪೂರೈಸುವಲ್ಲಿ ಬಂದರಿನ ಮಹತ್ವದ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ೪೦,೦೦೦ನೇ ಹಡಗಿನ ಆಗಮನವು ನವ ಮಂಗಳೂರು ಬಂದರು ಪ್ರಾಧಿಕಾರದ ಬೆಳವಣಿಗೆ ಮತ್ತು ಕಾರ್ಯಕ್ಷಮತೆಯ ಮತ್ತೊಂದು ಮಹತ್ವದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಪಶ್ಚಿಮ ಕರಾವಳಿಯ ಪ್ರಮುಖ ಸಮುದ್ರ ದ್ವಾರವಾಗಿ ಅದರ ಸ್ಥಾನವನ್ನು ಮತ್ತಷ್ಟು ದೃಢಪಡಿಸುತ್ತದೆ ಎಂದು ತಿಳಿಸಿದೆ ಎಂದು ಪ್ರಕಟನೆ ತಿಳಿಸಿದೆ.
























