ದೇಶದ ಪೌರತ್ವವನ್ನು ಸಾಬೀತುಪಡಿಸಬೇಕಾದ ಸಂದಿಗ್ಧತೆ.- ಶ್ರೀನಿವಾಸ ಮೂರ್ತಿ

ಸಂಜೆವಾಣಿ ವಾರ್ತೆ

ಬಳ್ಳಾರಿ ಫೆ, 14: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯ ನೆಪದಲ್ಲಿ ಈ ದೇಶದ ನಾಗರಿಕರು ತಮ್ಮ ರಾಜಕೀಯ ಹಕ್ಕನ್ನು ಮತ್ತು ದೇಶದ ಪೌರತ್ವವನ್ನು ಸಾಬೀತುಪಡಿಸಬೇಕಾದ

ಸಂದಿಗ್ದತೆಗೆ ಈಡಾಗಿದ್ದಾರೆ. ಇದು ಪ್ರಜಾಪ್ರಭುತ್ವವನ್ನು ವೈಫಲ್ಯಗೊಳಿಸುವ ಹುನ್ನಾರದಂತೆ ಕಂಡುಬರುತ್ತದೆ ಎಂದು ಸರಳಾದೇವಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ

ಡಾ.ಶ್ರೀನಿವಾಸ ಮೂರ್ತಿ ಆತಂಕ ವ್ಯಕ್ತಪಡಿಸಿದರು..

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ರೂಸಾ ಅನುದಾನದಡಿಯಲ್ಲಿ ರಾಜ್ಯಶಾಸ್ತ್ರ  ವಿಭಾಗದ ವತಿಯಿಂದ ಆಯೋಜಿಸಿದ್ದ ‘ ಭಾರತದ ಪ್ರಜಾಪ್ರಭುತ್ವ : ಅವಕಾಶ ಮತ್ತು ಸವಾಲುಗಳು ‘ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಸಿ ಮಾತನಾಡಿದರು.

ಭಾರತ ಸಂವಿಧಾನ ಅಂಗೀಕರಿಸಿದ ನಂತರ ಯಾವುದೇ ಅರ್ಹತೆ, ಸ್ಥಾನಮಾನಗಳನ್ನು ಪರಿಗಣಿಸದೆ ಕೇವಲ ವಯೋಮಿತಿಯನ್ನು ಆಧರಿಸಿ ಮತದಾನದ ಹಕ್ಕನ್ನು ನೀಡಲಾಯಿತು .ನಂತರ ಮತದಾನದ ವಯೋಮಿತಿಯನ್ನು ಇಳಿಸಲಾಯಿತು ಎಂದರು.

 ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಕಿರಣ ಗಾಜನೂರು ಎರಡನೇ ಮಹಾಯುದ್ಧದ ನಂತರ ತೃತೀಯ ಜಗತ್ತಿನ ಬಹುತೇಕ ರಾಷ್ಟ್ರಗಳಿಗೆ ಸ್ವಾತಂತ್ರ್ಯ ದೊರೆತು ತಮ್ಮದೇ ಸಂವಿಧಾನವನ್ನು ಅಳವಡಿಸಿಕೊಂಡು ಸರ್ಕಾರವನ್ನು ಸ್ಥಾಪಿಸಿಕೊಂಡಿವೆ. ಅವುಗಳಲ್ಲಿ ಭಾರತವು ಒಂದು. ಇತರೆ ಪ್ರಜಾಪ್ರಭುತ್ವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಸ್ಥಿರವಾದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿಕೊಂಡು ಬಂದಿದೆ ಎಂದು ವಿಶ್ಲೇಷಿಸಿದರು.

  ಅಂಬೇಡ್ಕರ್ ರೂಪಿಸಿದ ಸಂವಿಧಾನ ಇದರ ರಚನಾ ಸಮಿತಿಯ ಹಲವಾರು ತಳ ಸಮುದಾಯಗಳ ಶೋಷಿತರ ಮತ್ತು ಮಹಿಳೆಯರ ಪ್ರಾತಿನಿಧ್ಯವನ್ನು ಹೊಂದಿತ್ತು. ಇವರೆಲ್ಲರ ದೂರ ದೃಷ್ಟಿ ಮತ್ತು ಪರಿಶ್ರಮದಿಂದ ರೂಪಿಸಲ್ಪಟ್ಟ ಸಂವಿಧಾನ ಸ್ಥಿರತೆಯನ್ನು ಪಡೆದುಕೊಂಡಿದೆ. ಭಾರತೀಯ ನಾಗರಿಕ ಭಾರತದ

ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಇನ್ನೂ ಹೆಚ್ಚು ದೃಢಪಡಿಸಲು ವೈಯಕ್ತಿಕ ಪ್ರಜಾಸತ್ತಾತ್ಮಕ ಗುಣಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.ವ್ಯಕ್ತಿಗತವಾಗಿ ಪ್ರಜಾಸತ್ತಾತ್ಮಕ ಗುಣಗಳನ್ನು ರೂಪಿಸಿಕೊಳ್ಳದ ವ್ಯಕ್ತಿ ತನ್ನ ರಾಷ್ಟ್ರವನ್ನು ಪ್ರಜಾಸತ್ತಾತ್ಮಕ ಗೊಳಿಸಲು ಸಾಧ್ಯವಿಲ್ಲ ಎಂದರು.

ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹೊನ್ನೂರಾಲಿ ಭಾರತ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ.ಕಳೆದ 70 ವರ್ಷಗಳಲ್ಲಿ ಹಲವಾರು ವಲಯಗಳಲ್ಲಿ ಭಾರತ ಪ್ರಜಾಪ್ರಭುತ್ವ ತನ್ನ ಸಾಧನೆ ಕಂಡುಕೊಂಡಿದೆ. ಆದರೆ ಇಂದಿಗೂ ಕೂಡ ಪ್ರಜಾಪ್ರಭುತ್ವಕ್ಕೆ ಹೊಸ ಸವಾಲುಗಳು ಎದುರಾಗುತ್ತಿವೆ. ಇಂತಹ ಸವಾಲುಗಳ ಮೇಲೆ ಬೆಳಕು ಚೆಲ್ಲುವುದು ಇಂದಿನ ವಿಚಾರ ಸಂಕೀರ್ಣದ ಆಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು  ಪ್ರಾಂಶುಪಾಲ ಡಾ.ಜಿ.ಪ್ರಹ್ಲಾದ್ ಚೌದ್ರಿ ವಹಿಸಿದ್ದರು.

ವೇದಿಕೆಯ ಮೇಲೆ ಪ್ರಾಧ್ಯಾಪಕರಾದ

ಡಾ.ವಿಜಯಕುಮಾರ್, ಡಾ. ಸರೋಜಾ ಬಿ, ಡಾ.ಕುಂಚಂ ನರಸಿಂಹಲು,ಡಾ.ಮಲ್ಲಿಕಾರ್ಜುನ ಮೋಕಾ,

ಡಾ.ಹುಚ್ಚೂಸಾಬ್,ಡಾ. ದಸ್ತಗೀರಸಾಬ್ ದಿನ್ನಿ, ಡಾ.ಟಿ.ದುರುಗಪ್ಪ,ಇದ್ದರು

     ಈ ಸಂದರ್ಭದಲ್ಲಿ ಪ್ರಾಧ್ಯಾಪಕರುಗಳಾದ   ಡಾ.ಬಸವರಾಜ್, ಡಾ.ಶ್ರೀಧರ್ ಬರ್ಕಿ,ಡಾ.ರಾಬಿಯಾ ಬೇಗಂ, ಡಾ. ವೀರ ಪ್ರಸಾದ್, ಅತಿಥಿ ಉಪನ್ಯಾಸಕರಾದ  ಗುರುರಾಜ್,ತಿಪ್ಪೇರುದ್ರ, ಬಸವರಾಜ್, ಪಾರ್ವತಮ್ಮ,

ಶ್ರೀವಾಣಿ,ಸುಜಾತ,ಶ್ರೀನಿವಾಸ, ಕುಮಾರ್, ರೇವಣಸಿದ್ದಯ್ಯ, ನಾಗರಾಜ,ರವಿಚಂದ್ರ ಉಪಸ್ಥಿತರಿದ್ದರು.