
ಸಂಜೆವಾಣಿ ವಾರ್ತೆ
ನರಸೀಪುರ.ಜು.21:- ಪಟ್ಟಣ ಪುರಸಭೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯಡಿ ಪ್ರತಿವರ್ಷ ಪಾವತಿಸಬೇಕಿರುವ ಆಸ್ತಿ ತೆರಿಗೆಯನ್ನೇ ವಂಚಿಸಿರುವ ಸಂಬಂಧ ಪುರಸಭೆ ಸದಸ್ಯ, ಆಸ್ತಿ ಮಾಲೀಕರು ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸೇರಿದಂತೆ ಒಟ್ಟು 10 ಜನರ ವಿರುದ್ಧದ ತೆರಿಗೆ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ.
ಕೆಲವು ಆಸ್ತಿ ಮಾಲೀಕರು ಇ-ಆಸ್ತಿ ಕೋರಿ ಸಲ್ಲಿಸಿರುವ ದಾಖಲೆಗಳೊಂದಿಗೆ ತೆರಿಗೆ ಪಾವತಿಸಿರುವುದಾಗಿ ಕಚೇರಿಗೆ ಸಲ್ಲಿಸಿದ್ದ ಚಲನ್ ನಕಲಾಗಿದ್ದು, ಪಟ್ಟಣದ ಕೆನರಾ ಬ್ಯಾಂಕ್‍ನ ಪುರಸಭೆ ತೆರಿಗೆ ಖಾತೆಗೆ ಪಾವತಿಸಿರುವ ನಕಲು ಚಲನ್ ಮೇಲೆ ಮುದ್ರಿಸಲಾಗಿರುವ ಮುದ್ರೆ ನಕಲು ಮಾಡಿರುವುದನ್ನು ಬ್ಯಾಂಕ್ ಅಧಿಕಾರಿಗಳು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ ಅವರು ಶನಿವಾರ ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪುರಸಭೆ ಹಾಲಿ ಸದಸ್ಯ, ಮಾಜಿ ಅಧ್ಯಕ್ಷ ಟಿ.ಎಂ. ನಂಜುಂಡಸ್ವಾಮಿ ಸೇರಿದಂತೆ ಲತಾ ಸುರೇಶ್, ಸುಮನ್ ಚೌಧರಿ, ನಟರಾಜು, ಮಹದೇವಮ್ಮ ಅಂದಾನಯ್ಯ, ಲೀಲಮ್ಮ ಸಿದ್ದೇಗೌಡ, ಜಯಮ್ಮ ಬಸವಯ್ಯ, ಎಂ. ನಾಗೇಂದ್ರ, ಲಕ್ಷ್ಮಮ್ಮ ಕೃಷ್ಣಪ್ಪ ಹಾಗೂ ತಾಲೂಕು ಕುರುಬರ ಸಂಘದ ಅಧ್ಯಕ್ಷ ವಿರುದ್ಧ 3,43,626 ರೂ.ತೆರಿಗೆ ಹಣವನ್ನು ವಂಚಿಸಿರುವ ಬಗ್ಗೆ ದೂರು ನೀಡಿದ್ದಾರೆ.
ಆಸ್ತಿ ಮಾಲೀಕರು ಆಸ್ತಿ ತೆರಿಗೆ ಪಾವತಿಸಲು ಚಲನ್ ಸೃಜನೆಯಾಗಿದ್ದು ಸದರಿ ಮೊತ್ತವನ್ನು ಪುರಸಭಾ ಬ್ಯಾಂಕ್ ಖಾತೆಗೆ ಜಮಾಗೊಳಿಸದೆ ಬ್ಯಾಂಕ್ ಮೊಹರು ಇರುವ ಚಲನ್‍ಗಳನ್ನು ಇ-ಆಸ್ತಿ ಕೋರಿ ಸಲ್ಲಿಸಿರುವ ದಾಖಲೆಗಳೊಂದಿಗೆ ತೆರಿಗೆ ಪಾವತಿಸಿರುವುದಾಗಿ ಕಚೇರಿಗೆ ಚಲನ್ ಸಲ್ಲಿಸಿದ್ದಾರೆ.
ಇ-ಆಸ್ತಿ ಕೋರಿ ಸಲ್ಲಿಸಿರುವ ದಾಖಲೆಗಳು ಮತ್ತು ಚಲನ್‍ಗಳ ಪರಿಶೀಲನೆ ವೇಳೆ ಆಸ್ತಿ ಮಾಲೀಕರು ಹಾಜರುಪಡಿಸಿರುವ ಚಲನ್ ಗಳ ಮೊತ್ತವು ಪುರಸಭಾ ಬ್ಯಾಂಕ್ ಖಾತೆಗೆ ಜಮಾವಾಗಿರುವುದು ಕಂಡುಬಂದಿಲ್ಲ. ಚಲನ್‍ಗಳಲ್ಲಿ ಕೆನರಾ ಬ್ಯಾಂಕ್ ತಿ.ನರಸೀಪುರ ಶಾಖೆಯ ಮೊಹರು ನಮೂದಾಗಿರುವ ಮೇರೆಗೆ ಕೆನರಾ ಬ್ಯಾಂಕ್‍ಗೆ ಬರೆದು ಆಸ್ತಿ ತೆರಿಗೆ ಮೊತ್ತವು ಬ್ಯಾಂಕ್ ಖಾತೆಗೆ ಜಮಾಗೊಳಿಸಿರುವ ಬಗ್ಗೆ ವರದಿ ನೀಡಲು ಕೋರಲಾಗಿತ್ತು. ಕೆನರಾ ಬ್ಯಾಂಕ್, ತಿ.ನರಸೀಪುರ ಶಾಖೆಗೆ ಕಚೇರಿ ಯಿಂದ ಮಾಹಿತಿ ಕೋರಲಾಗಿದ್ದ ಚಲನ್‍ಗಳ ಆಸ್ತಿ ಮಾಲೀಕರು ತೆರಿಗೆ ಜಮಾ ಮಾಡಿರುವ ಬಗ್ಗೆ ಬ್ಯಾಂಕ್‍ನಲ್ಲಿ ದಾಖಲೆಗಳಿಲ್ಲ. ಚಲನ್‍ಗಳಲ್ಲಿ ಮುದ್ರಿತವಾಗಿರುವ ದಿನಾಂಕಗಳಂದು ಚಲನ್ ಗಳಲ್ಲಿ ನಮೂದಾಗಿರುವ ಆಸ್ತಿ ತೆರಿಗೆ ಮೊತ್ತ ಪುರಸಭಾ ಬ್ಯಾಂಕ್ ಖಾತೆಗೆ ಜಮೆ ಆಗಿರುವ ಬಗ್ಗೆ ಪುರಸಭಾ ಬ್ಯಾಂಕ್ ಖಾತೆ ಸ್ಟೆಟ್‍ಮೆಂಟ್ ಆಫ್ ಆಕೌಂಟ್ ನಲ್ಲಿ ನಮೂದಾಗಿರುವುದಿಲ್ಲ.
ಸದರಿ ಚಲನ್‍ಗಳ ಮೇಲೆ ಮುದ್ರಿಸಲಾಗಿರುವ ಮುದ್ರೆಯು ನಕಲು ಮಾಡಿರುವಂತೆ ಕಂಡುಬಂದಿರುತ್ತದೆ ಎಂಬುದಾಗಿ ವರದಿ ನೀಡಿದ್ದಾರೆ. ಆದ್ದರಿಂದ ಕೆಲವು ಆಸ್ತಿ ಮಾಲೀಕರು ಹಾಗೂ ಪುರಸಭೆ ಸದಸ್ಯ ಟಿ.ಎಂ.ನಂಜುಂಡಸ್ವಾಮಿ ಅವರ ಜತೆಗೂಡಿ ಅವರ ಸಹಾಯದಿಂದ ಸರ್ಕಾರದ ಬೊಕ್ಕಸಕ್ಕೆ ಸಂದಾಯವಾಗಬೇಕಾದ ತೆರಿಗೆಯನ್ನು ವಂಚಿಸುವ ದೃಷ್ಟಿಯಿಂದಲೇ ಕೆನರಾ ಬ್ಯಾಂಕ್‍ನ ನಕಲಿ ಮೊಹ ರನ್ನು ಸೃಷ್ಟಿಸಿ ಒಟ್ಟು 3,43,626 ರೂ.ಗಳ ಆಸ್ತಿ ತೆರಿಗೆಯನ್ನು ಪಾವತಿಸಿರುವುದಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಆದ್ದರಿಂದ ಸರ್ಕಾರಕ್ಕೆ ತೆರಿಗೆ ವಂಚಿಸಿರುವ ಸದಸ್ಯ ಟಿ.ಎಂ ನಂಜುಂಡಸ್ವಾಮಿ ಮತ್ತು ತೆರಿಗೆದಾರರಾದ ಆಸ್ತಿ ಮಾಲೀಕರ ವಿರುದ್ಧ ತನಿಖೆ ಕೈಗೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ. ಪುರಸಭೆಯಲ್ಲಿ ತೆರಿಗೆ ವಂಚನೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಕಡತಗಳನ್ನು ಪರಿಶೀಲಿಸಲಾಗುತ್ತಿದ್ದು, ಪ್ರಕರಣಗಳು ಪತ್ತೆಯಾದಲ್ಲಿ ಕಾನೂನು ಕ್ರಮಕ್ಕಾಗಿ ದಾಖಲೆ ಗಳನ್ನು ಸಲ್ಲಿಸಲಾಗುವುದು. ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ತಿ.ನರಸೀಪುರ ಪುರಸಭೆಗೆ ತೆರಿಗೆ ವಂಚಿಸಿರುವ ಆಸ್ತಿ ಮಾಲೀಕರ ವಿವರವನ್ನು ಪೆÇಲೀಸರಿಗೆ ಮುಖ್ಯಾಧಿಕಾರಿ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಟ್ಟಣದ ಪೆÇಲೀಸರು ಪ್ರಾಥಮಿಕ ವರದಿಯನ್ನ ಸಿದ್ಧಪಡಿಸಿ, ತನಿಖೆಯನ್ನು ಕೈಗೊಂಡಿದ್ದಾರೆ.