“ತಲ್ಲಣಿಸದಿರು ಮನವೇ” ಸಂಸ್ಕೃತಿ ಚಿಂತನದ ಚಾರಣ, ಶ್ರೀಗಳ ಮತ್ತು ಚಿಂತಕರ ಸಮಾಗಮ..

ಕೆಂಗೇರಿ,ಸೆ.೧: ಕಾಗಿನೆಲೆ ಮಹಾಸಂಸ್ಥಾನ ಮಠ ಮತ್ತು ಕರ್ನಾಟಕ ಕನಕ ಕೈಗಾರಿಕಾ ಸಂಘದ ಸಹಯೋಗದಲ್ಲಿ “ತಲ್ಲಣಿಸದಿರು ಮನವೇ” ಎಂಬ ವಿಶಿಷ್ಟ ಸಾಂಸ್ಕೃತಿಕ ಚಿಂತನಾ ಕಾರ್ಯಕ್ರಮವನ್ನ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಶಾಖಾ ಮಠ, ಬೆಂಗಳೂರು ದಕ್ಷಿಣ ತಾಲ್ಲೂಕಿನ ಕೇತೋಹಳ್ಳಿಯ ಗುರುಪೀಠ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು.


ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠದ ಪರಮಪೂಜ್ಯ ಜಗದ್ಗುರು ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಕಾಗಿನೆಲೆ ಮಹಾಸಂಸ್ಥಾನ ಮಠ ಗುರುಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ಹಾಗೂ ಹೊಸದುರ್ಗದ ಶ್ರೀಕನಕ ಗುರುಪೀಠ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ್ ಕಂಬಾರರು, ಮಾಜಿ ಸಚಿವೆ ಮತ್ತು ಸಾಹಿತಿ ಬಿ.ಟಿ.ಲಲಿತಾ ನಾಯಕ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ರಾಜ್ಯ ಗ್ಯಾರಂಟಿ ಅನುಷ್ಠಾನ ಯೋಜನಾ ಅಧ್ಯಕ್ಷ ಹೆಚ್.ಎಂ. ರೇವಣ್ಣ, ಕರ್ನಾಟಕ ಕನಕ ಕೈಗಾರಿಕಾ ಸಂಘದ ಅಧ್ಯಕ್ಷರು ಹಾಗೂ ಕೈಗಾರಿಕೋದ್ಯಮಿ ಆರ್.ಶಿವಕುಮಾರ್ ಸೇರಿದಂತೆ ಇತರೆ ಗಣ್ಯರು “ತಲ್ಲಣಸದಿರುಮನವೇ” ಚಿಂತನಾ ಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ, ನಾಮಫಲಕ ಬಿಡುಗಡೆಗೊಳಿಸಿ ಚಾಲನೆ ನೀಡಿದರು.


ಕಾಗಿನೆಲೆ ಮಹಾಸಂಸ್ಥಾನ ಪೀಠವು ಕೇತೋಹಳ್ಳಿಯಲ್ಲಿ ಏರ್ಪಡಿಸಿದ್ದ ಕನಕದಾಸ ಸಾಹಿತ್ಯದ ವೈಚಾರಿಕ ಅನುಸಂಧಾನದ ’ತಲ್ಲಣಿಸದಿರು ಮನವೇ’ ವಿಚಾರಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು ಶ್ರೀಸಾಮಾನ್ಯನ ನುಡಿಗಟ್ಟಿನಲ್ಲಿ ಭಕ್ತಿ ಮತ್ತು ಭಗವಂತನ ಪಾರಮ್ಯವನ್ನು ಗೇಯತೆಯ ಧ್ವನಿಯಲ್ಲಿ ಸಾರಿದ್ದು ದಾಸಸಾಹಿತ್ಯದ ಹಿರಿಮೆಯಾಗಿದೆ. ಇಂತಹ ದಾಸಸಾಹಿತ್ಯದ ೬೫ ಸಂಪುಟಗಳನ್ನು ತಮ್ಮ ನೇತೃತ್ವದ ಬಿಎಲ್‌ಡಿಇ ಶಿಕ್ಷಣ ಸಂಸ್ಥೆಯ ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಮೂಲಕ ಪ್ರಕಟಿಸಲಾಗುತ್ತಿದೆ. ಇವುಗಳ ಪೈಕಿ ಈಗಾಗಲೆ ೬೦ಕ್ಕೂ ಹೆಚ್ಚು ಸಂಪುಟಗಳು ಬಿಡುಗಡೆಗೆ ಸಿದ್ಧವಾಗಿವೆ. ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದರು.


ಕನಕದಾಸರು ವೈಚಾರಿಕವಾಗಿ ರಾಮಾನುಜಾಚಾರ್ಯರ ಪ್ರಭಾವಕ್ಕೆ ಒಳಗಾಗಿ, ವ್ಯಾಸರಾಯರ ಶಿಷ್ಯರಾಗಿ ಸಾಧನೆ ಮಾಡಿದವರಾಗಿದ್ದಾರೆ. ಭಾಷೆಯ ಬಳಕೆಯಲ್ಲಿ
ದಾಸಸಾಹಿತ್ಯವು ೧೨ನೇ ಶತಮಾನದ ವಚನ ಸಾಹಿತ್ಯವನ್ನು ಮೇಲ್ಪಂಕ್ತಿಯಾಗಿ ಇಟ್ಟುಕೊಂಡಿದೆ. ಇದರಿಂದಾಗಿ ಸಾಮಾಜಿಕ ಪರಿವರ್ತನೆ ಸಾಧ್ಯವಾಯಿತು ಎಂದರು.
ಕನಕದಾಸರ ಸಾಹಿತ್ಯ ಕುರಿತು ತಾಲೂಕು ಮತ್ತು ಜಿಲ್ಲಾ ಮಟ್ಟಗಳಲ್ಲೂ ಕಾರ್ಯಕ್ರಮಗಳು ನಡೆಯಬೇಕು. ಸಾಮಾಜಿಕ ತಾರತಮ್ಯವನ್ನು ಪ್ರಶ್ನಿಸಿದ ಇಂತಹ ಸಾಹಿತ್ಯವನ್ನು ಯುವಜನರು ಗಂಭೀರವಾಗಿ ಅಧ್ಯಯನ ಮಾಡಬೇಕು. ಸೇನಾಧಿಕಾರಿಯಾಗಿದ್ದ ಕನಕದಾಸರು ದಾಸಕೂಟಕ್ಕೆ ಬಂದು, ಶ್ರೀಕೃಷ್ಣ ಮತ್ತು ಆದಿಕೇಶವನ ಕಿಂಕರರಾಗಿದ್ದು ಒಂದು ದೊಡ್ಡ ಚಾರಿತ್ರಿಕ ಪಲ್ಲಟ ವಾಗಿದೆ ಎಂದು ಹೇಳಿದರು.


ಇದೇ ವೇಳೆ ಗವಿಸಿದ್ದೇಶ್ವರ ಶ್ರೀಗಳು ಮಾತನಾಡಿ ಮಠಗಳಿದ್ದಲ್ಲಿಗೆ ಮನುಷ್ಯ ಬರುವುದು ಸಾಮಾನ್ಯ ಆದರೆ ಮನುಷ್ಯನಿದ್ದಲ್ಲಿಗೆ ಮಠ ತೆಗೆದುಕೊಂಡು ಹೋಗುವ ಕೆಲಸವನ್ನು ನಿರಂಜನಾನಂದಪುರಿ ಶ್ರೀಗಳು ಮಾಡಿದ್ದಾರೆ. ಇದು ಶ್ಲಾಘನೀಯವಾದ ಕೆಲಸ ಎಂದು ಹೇಳಿದ ಶ್ರೀಗಳು ಮನುಷ್ಯನ ಮನಸ್ಸಿಗೆ ತಲ್ಲಣ ಮಾಡಿದವರು ಯಾರು ಎಂದು ತಿಳಿಯದೇ ತಲ್ಲಣಗೊಂಡಿದ್ದಾನೆ ಅದನ್ನು ತಿಳಿಗೊಳಿಸುವುದೇ ತಲ್ಲಣಿಸದಿರು ಮನವೆ ಕಾರ್ಯಕ್ರಮ ಎಂದು ಮಾಡಿದ್ದಾರೆ.


ಇದೇ ವೇಳೆ ನಿರಂಜನಾನಂದಪುರಿ ಶ್ರೀಗಳು ಮಾತನಾಡಿ ಸರ್ಕಾರ ಹಲವಾರು ಸಾಹಿತಿಗಳು ಕವಿಗಳು ಜನಿಸಿದ ಮನೆಗಳು ಹಾಳಾಗಿರುವುದನ್ನು ದುರಸ್ತಿ ಮಾಡಿದ್ದಾರೆ ಅದೇ ರೀತಿ ಚಂದ್ರಶೇಖರ ಕಂಬಾರರ ಮನೆ ಕೂಡ ಹಾಳಾಗಿದ್ದು ಅದನ್ನು ದುರಸ್ತಿ ಮಾಡಬೇಕೆಂದು ಸಚಿವ ಎಂ.ಬಿ ಪಾಟೀಲ್ ಅವರಲ್ಲಿ ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಕನಕ ಕೈಗಾರಿಕಾ ಸಂಘದ ಅದ್ಯಕ್ಷ ಆರ್.ಶಿವಕುಮಾರ್, ಉಪಾಧ್ಯಕ್ಷ ಮನೋಹರ್ ಎಸ್. ಎಂ, ಗೌರವ ಕಾರ್ಯದರ್ಶಿ ಬೀರಪ್ಪ. ಬಿ, ಜಂಟಿ ಕಾರ್ಯದರ್ಶಿ ಚಂದ್ರು ಬೊಮ್ಮಯ್ಯ, ಶ್ರೀಧರ್, ಉಷಾರಾಣಿ ಜಿ, ರಂಗಸ್ವಾಮಿ, ಖಜಾಂಚಿ ರಮೇಶ್ ಕೆ.ಎನ್, ಜಂಟಿ ಖಜಾಂಚಿ ರಮೇಶ್ ಬಂಡೆ, ಸೇರಿದಂತೆ ಸಮುದಾಯದ ಸಾವಿರಾರು ಮುಖಂಡರು ಪಾಲ್ಗೊಂಡಿದ್ದರು.