ಗುಂಡಾಲ್ ಜಲಾಶಯದ ಶ್ರೀ ಕಲ್ಲು ಕಟ್ಟೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಸಂಜೆವಾಣಿ ವಾರ್ತೆ
ಹನೂರು.ಜು.22:-
ಗುಂಡಾಲ್ ಜಲಾಶಯ ಮದ್ಯ ಇರುವ ಕಲ್ಲು ಕಟ್ಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಕೈಂ ಕಾರ್ಯಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಜಿಟಿ ಜಿಟಿ ಮಳೆಯಲ್ಲಿಯೂ ಸಹ ಪಂಕ್ತಿ ಭೋಜನ ಸ್ವೀಕರಿಸುವ ಮೂಲಕ ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಆಚರಣೆಯಂತೆ ಜರುಗಿತು.


ಕೊಳ್ಳೆಗಾಲ ತಾಲೂಕಿನ ಕಾಮಗೆರೆ ಗ್ರಾಮದ ಲಿಂಗಾಯಿತ ಸಮುದಾಯದ ಪ್ರತಿ ವರ್ಷ ಆಚರಣೆಯ ಸಂಪ್ರದಾಯಿಕ ಸೇವೆಯಂತೆ ಗುಂಡಾಲ್ ಜಲಾಶಯದಲ್ಲಿ ಕಲ್ಲು ಕಟ್ಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಧೂಪ ದೀಪ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿ ಭಕ್ತಿ ಪರಾಕಾಷ್ಠೆ ಮೆರೆದರು.


ಕಾಮಗೆರೆ ಗ್ರಾಮದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಗುಂಡಾಲ್ ಜಲಾಶಯದ ನೀರಿನ ಮದ್ಯದಲ್ಲಿ ಶ್ರೀ ಕಲ್ಲುಕಟೇಶ್ವರ ಸ್ವಾಮಿ ನೆಲೆಸಿರುವ ಸ್ಥಳಕ್ಕೆ ಕಾಮಗೆರೆ ಗ್ರಾಮದಿಂದ ಎತ್ತಿನ ಗಾಡಿಗಳಿಂದ ಆಹಾರದ ಧಾನ್ಯಗಳನ್ನು ಪೂಜೆ ಸಲ್ಲಿಸಿ ತಮಟೆ ವಾದ್ಯದೊಂದಿಗೆ ಮೆರವಣಿಗೆ ಮೂಲಕ ಸಾಗಿದರು.
ಅರಣ್ಯ ಪ್ರದೇಶದ ಜಲಾಶಯದಲ್ಲಿ ಎಲ್ಲಾ ಸಮುದಾಯದ ಯಜಮಾನರು ಮುಖಂಡರು ಸೇರಿದಂತೆ ಸಾವಿರಾರು ಭಕ್ತ ಸಾರ್ವಜನಿಕ ಬಂಧುಗಳು ಸೇರಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸುವುದು ಪ್ರತಿ ವರ್ಷದ ವಾಡಿಕೆಯಂತೆ ಜರಗಿತು.


ಕಾಮಗೆರೆ ಗ್ರಾಮ ಸೇರಿದಂತೆ ಮಂಗಲ, ಕಣ್ಣೂರು, ಚೆನ್ನಾಲಿಂಗನಹಳ್ಳಿ, ಸಿಂಗಾನಲ್ಲೂರು, ದೊಂಡ್ಡಿಂದುವಾಡಿ, ಹಾಗೂ ಜಲಾಶಯದ ಪಕ್ಕದಲ್ಲಿ ಸೋಲಿಗರ ಪುಟ್ಟಿರಮ್ಮನ ದೊಡ್ಡಿ, ಕಂಚಗಳ್ಳಿ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತ ಸಮೂಹ ಆಗಮಿಸಿ ಶ್ರೀ ಕಲ್ಲುಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಹ ಪಂಕ್ತಿ ಭೋಜನ ಸ್ವೀಕರಿಸಿದರು.
ಅಲ್ಲಿ ನಡೆಯುವ ಸಹ ಪಂಕ್ತಿ ಭೋಜನದಲ್ಲಿ ಸಿಹಿ ಪಾಯಸ, ಕಳ್ಳೆಹುಳಿ, ರಾಗಿ ಮುದ್ದೆ, ಅನ್ನ ಸಾಂಬಾರು ಉಪಹಾರವನ್ನು ಸ್ವೀಕರಿಸಿದರು. ಪಂಕ್ತಿ ಭೋಜನ ಸಮಯದಲ್ಲಿ ಜಿಟಿ ಜಿಟಿ ಮಳೆ ಬರುತಿದ್ದರು ಇದನ್ನು ಲೆಕ್ಕಿಸದೆ ಭೋಜನ ಸ್ವೀಕರಿಸುವುದು ವಿಶೇಷವಾಗಿ ಮರೆಯಲಾಗದಂತಹ ಸಂತಸ ಕ್ಷಣದ ಅನುಭವವನ್ನು ಹಂಚಿಕೊಂಡರು.


ಮಾಜಿ ಶಾಸಕಿ ಪರಿಮಳ ನಾಗಪ್ಪ, ಕಾಮಗೆರೆ ಪಟ್ಟದ ಮಠ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಗುಂಡೆಗಾಲ ಮಠ ಶ್ರೀ ಮಹದೇವಸ್ವಾಮಿಯವರು ಸೇರಿದಂತೆ ಗ್ರಾಮದ ಗೌಡರು ಯಜಮಾನರು ಮುಖಂಡರು ಅಕ್ಕಪಕ್ಕದ ಗ್ರಾಮಗಳ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಭಕ್ತಸಾಗರ ಭಾಗವಹಿಸಿದ್ದರು.
ಗುಂಡಾಲ್ ಜಲಾಶಯ ವ್ಯಾಪ್ತಿಯ ಆರಣ್ಯ ಇಲಾಖೆ ಅಧಿಕಾರಿಗಳ ಅನುಮತಿಯಂತೆ ನಿರ್ದಿಷ್ಟ ಅವಧಿ ಸಮಯ ಜಾಗದಲ್ಲಿ ಪೂಜೆ ಸಹ ಪಂಕ್ತಿ ಭೋಜನವನ್ನು ಮುಗಿಸಿದರು. ಸಂಜೆಯ ನಂತರ ತೆರಳಿದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.