
ಸುಳ್ಯ:ಕೊಲ್ಲಮೊಗ್ರು ಗ್ರಾಮದ ಕಟ್ಟ ಕ್ರಾಸ್ ಬಳಿ ಮತ್ತು ಜಾಲ್ಸೂರು ಗ್ರಾಮದ ಅಡ್ಕಾರಿನಲ್ಲಿ ಚಿರತೆ ಪ್ರತ್ಯಕ್ಷವಾದ ಘಟನೆ ನಡೆದಿದೆ.
ಕೊಲ್ಲಮೊಗ್ರದ ಪವನ್ ಗುಡ್ಟೆಮನೆ ಮತ್ತು ಪ್ರಶಾಂತ್ ಎಂಬವರು ಮರಿ ಚಿರತೆ ರಸ್ತೆ ದಾಟಿರುವುದನ್ನು ಕಂಡಿದ್ದು ಅದರೊಂದಿಗೆ ಅದರ ತಾಯಿ ಇರಬಹುದಾಗಿದೆ ಎಂದು ಅಂದಾಜಿಸಲಾಗಿದೆ.
ಜಾಲ್ಸೂರು ಗ್ರಾಮದ ಅಡ್ಕಾರಿನ ಮುಖ್ಯ ರಸ್ತೆಯಲ್ಲಿ ಚಿರತೆ ಸಂಚಾರ ನಡೆಸಿದೆ. ಸುಳ್ಯ ಪೋಲೀಸ್ ಠಾಣೆಯ ಎ.ಎಸ್.ಐ. ಯೊಬ್ಬರು ಉಪ್ಪಿನಂಗಡಿಯ ತನ್ನ ಮನೆಗೆ ರಾತ್ರಿ ವೇಳೆ ಕಾರಿನಲ್ಲಿ ಹೋಗುತಿದ್ದಾಗ ಚಿರತೆಯೊಂದು ರಸ್ತೆ ದಾಟಿತೆಂದೂ ಇದನ್ನು ಅವರು ಎಎಸ್ಐ ತಾರನಾಥರಿಗೆ ತಿಳಿಸಿದ ಹಿನ್ನಲೆಯಲ್ಲಿ ಈ ಮಾಹಿತಿಯನ್ನು ತಾರನಾಥರು ಜನರು ಜಾಗೃತರಾಗಿರಬೇಕೆನ್ನುವ ನಿಟ್ಟಿನಲ್ಲಿ ಬೀಟ್ ಪೋಲೀಸ್ ಗ್ರೂಪ್ನಲ್ಲಿ ಹಂಚಿಕೊಂಡಿದ್ದರು. ಕೊಲ್ಲಮೊಗ್ರ ಮತ್ತು ಅಡ್ಕಾರ್ ಬಳಿ ಚಿರತೆ ಸಂಚಾರದ ವಿಷಯ ತಿಳಿದ ನಾಗರೀಕರು ಭಯಭೀತರಾಗಿದ್ದಾರೆ.






























